ಬೆಂಗಳೂರು: ಲೋಕಸಭಾ ಚುನಾವಣೆ ನಿಮಿತ್ತ ಇಂದು ನಡೆಯುತ್ತಿರುವ 2ನೇ ಹಂತದ ಮತದಾನದ ವೇಳೆ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲಿ ಎಂಬ ಸದುದ್ದೇಶದಿಂದ ಹಲವು ಸಂಘಸಂಸ್ಛೆಗಳು ಹಲವು ಬಗೆಯ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಂಡಿವೆ.
ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಗಳು ಮತದಾನದ ಪ್ರಮಾಣ ಹೆಚ್ಚಳ ಮಾಡಲು ವಿವಿಧ ಬಗೆಯ ಅಭಿಯಾನ ಹಮ್ಮಿಕೊಂಡಿದ್ದು, ಈ ಅಭಿಯಾನಕ್ಕೆ ನಗರದ ಕೆಲ ಸಂಘಸಂಸ್ಥೆಗಳು ಹಾಗೂ ಕೆಲ ಹೊಟೆಲ್ ಗಳೂ ಕೂಡ ಸಾಥ್ ನೀಡಿವೆ. ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರಾಂಡ್ ಹೊಟೆಲ್ ಮತದಾನ ಮಾಡಿದ ಮತದಾರರಿಗೆ ಉಚಿತ ತಿಂಡಿ ಮತ್ತು ಪಾನಕ ನೀಡುವುದಾಗಿ ಘೋಷಣೆ ಮಾಡಿದೆ.
ಈ ಬಗ್ಗೆ ಹೊಟೆಲ್ ಮುಂಭಾಗದಲ್ಲಿ ದೊಡ್ಡ ಫಲಕದಲ್ಲಿ ಬರೆಯಲಾಗಿದ್ದು, ಇಂದು ಮತದಾನ ಮಾಡಿ ಹೊಟೆಲ್ ಗೆ ಬರುವ ಗ್ರಾಹಕರು ಕೈಗೆ ಹಾಕಿರುವ ಶಾಹಿ ತೋರಿಸಿ ಬೆಣ್ಣೆ ಖಾಲಿ ದೋಸೆ, ಸಿಹಿತಿಂಡಿ ಮತ್ತು ಪಾನಕವನ್ನು ಉಚಿತವಾಗಿ ಪಡೆಯಬಹುದು ಎಂದು ಬರೆಯಲಾಗಿದೆ. ಅಂತೆಯೇ ಇದೊಂದು ರಾಜಕೀಯೇತರ ಕಾರ್ಯಕ್ರಮವಾಗಿದ್ದು ಕೇವಲ ಮತದಾನವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮ ಎಂದು ಹೊಟೆಲ್ ಆಡಳಿತ ಮಂಡಳಿ ಸ್ಪಷ್ಟನೆ ಕೂಡ ನೀಡಿದೆ.
ಗಿಡಕೊಟ್ಟು ಮತಜಾಗೃತಿ
ಮತ್ತೊಂದೆಡೆ ಬೆಂಗಳೂರಿನ ಸದಾಶಿವನಗರದ ಪೂರ್ಣ ಪ್ರಜ್ಞಾ ಎಜುಕೇಶನ್ ಸ್ಕೂಲ್ ವಿಶಿಷ್ಟ ಮತದಾನ ಜಾಗೃತಿ ಅಭಿಯಾನ ನಡೆಸುತ್ತಿದ್ದು, ಬಿ ಪ್ಯಾಕ್ ಎಂಬ ಎನ್ ಜಿಒ ಸಂಸ್ಥೆ ಮೊದಲ ಬಾರಿಗೆ ಹಾಗೂ ಹಲವು ವರ್ಷಗಳಿಂದ ಮತದಾನ ಮಾಡುತ್ತಿರುವ ಹಿರಿಯ ನಾಗರಿಕರಿಗೆ ಹಾಗೂ ಯುವಕ, ಯುವತಿಯರಿಗೆ ಗಿಡ ಕೊಡುವ ಮೂಲಕ ಮತದಾನಕ್ಕೆ ಪ್ರೋತ್ಸಾಹ ನೀಡುತ್ತಿದೆ. ಆ ಮೂಲಕ ಮತದಾನದ ಜಾಗೃತಿಯೊಂದಿಗೆ ಪರಿಸರ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ. ಸಂಸ್ಥೆಯ ಈ ಕಾರ್ಯಕ್ಕೆ ಎಲ್ಲಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ಈ ದಾಖಲೆ ತೋರಿಸಿ
ವೋಟರ್ ಐಡಿ ಕಾರ್ಡ್ ಇಲ್ಲದೆ ಪರದಾಡುವ ಮತದಾರರು ಈ ಕೆಳಕಂಡ ಗುರುತಿನ ಚೀಟಿಗಳ ನೆರವಿನಿಂದಲೂ ಮತದಾನ ಮಾಡಬಹುದು. ಆಧಾರ್ ಕಾರ್ಡ್, ಪ್ಯಾನ್‍ಕಾರ್ಡ್, ರೇಷನ್‍ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಬ್ಯಾಂಕ್ ಪಾಸ್‍ಬುಕ್, ಪೋಸ್ಟ್ ಆಫೀಸ್ ಪಾಸ್‍ಬುಕ್, ನರೇಗಾ ಜಾಬ್ ಕಾರ್ಡ್, ಪಾಸ್‍ಪೋರ್ಟ್, ಚುನಾವಣಾ ಆಯೋಗದ ನಿಮ್ಮ ಫೋಟೋ ಇರುವ ಓಟರ್ ಸ್ಲಿಪ್, ಕಾರ್ಮಿಕ ಸಚಿವಾಲಯ ನೀಡಿದ ಹೆಲ್ತ್ ಇನ್ಶೂರೆನ್ಸ್ ಕಾರ್ಡ್, ನಿಮ್ಮ ಫೋಟೋ ಇರುವ ಪೆನ್ಶನ್ ಪಡೆಯೋ ದಾಖಲೆಗಳನ್ನು ಮತದಾನದ ವೇಳೆ ಗುರುತಿನ ಚೀಟಿಯಾಗಿ ನೀಡಬಹುದು.