ಕರ್ನಾಟಕ

ಸಾಗರದ ಉಳ್ಳೂರು ಕ್ರಾಸ್ ಬಳಿ ಖಾಸಗಿ ಬಸ್ ಪಲ್ಟಿ; ತಾಯಿ, ಮಗಳು ಸೇರಿ ಮೂವರು ಸಾವು

Pinterest LinkedIn Tumblr

ಶಿವಮೊಗ್ಗ: ಶಿವಮೊಗ್ಗದಲ್ಲಿ ಖಾಸಗಿ ಬಸ್ಸೊಂದು ಉರುಳಿ ಬಿದ್ದ ಪರಿಣಾಮ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ತಾಯಿ, ಮಗಳು ಸೇರಿ ಮೂವರು ಸಾವನ್ನಪ್ಪಿ, ಇತರ 20ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಇಂದು ನಡೆದಿದೆ.

ಬೆಳಗ್ಗಿನ ಜಾವ ಸಾಗರ ತಾಲೂಕಿನ ಉಳ್ಳೂರು ಕ್ರಾಸ್‌ ಬಳಿ ಈ ಅಪಘಾತ ಸಂಭವಿಸಿದ್ದು, ಹೆದ್ದಾರಿಯ ಸೂಕ್ಷ್ಮ ತಿರುವೊಂದರಲ್ಲಿ ಬಸ್‌ ತಿರುಗುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಮೃತರನ್ನು ಕೀರ್ತನಾ (12 ವರ್ಷ), ಸುಜಾತ ಕೃಷ್ಣಕುಮಾರ್‌ (40 ವರ್ಷ) ಹಾಗೂ ಮುಹಮ್ಮದ್‌ ಯಾಸೀನ್ (16 ವರ್ಷ) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಸಾಗರದ ಸರ್ಕಾರಿ ಆಸ್ಪತ್ರೆ ಹಾಗೂ ಮ್ಯಾಕ್ಸ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಬಸ್‍ ರಸ್ತೆಯಲ್ಲೇ ಮಗುಚಿ ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಪೊಲೀಸರು ಮತ್ತು ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು.

ಜೆಸಿಬಿ, ಕ್ರೇನ್ ‍ಮೂಲಕ ಬಸ್ಸನ್ನು ರಸ್ತೆ ಬದಿಗೆ ಸರಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು. ಘಟನೆ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಯಾಳುಗಳಿಗೆ ನೆರವಾದ ಶಾಸಕ ಹರತಾಳು ಹಾಲಪ್ಪ
ಗಾಯಾಳುಗಳನ್ನು ಸಾಗಿಸುತ್ತಿದ್ದಾಗ ಅದೇ ಮಾರ್ಗವಾಗಿ ಶಾಸಕ ಹರತಾಳು ಹಾಲಪ್ಪ ಬರುತ್ತಿದ್ದರು. ಈ ವೇಳೆ ಅವರು ಕೂಡ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ನೆರವಾದರು ಎಂದು ತಿಳಿದುಬಂದಿದೆ.

Comments are closed.