ಕರಾವಳಿ

ನಾಳೆ ಮಂಗಳೂರಿಗೆ ಪ್ರಧಾನಿ ಮೋದಿ ಆಗಮನ : ಪಾರ್ಕಿಂಗ್ ಹಾಗೂ ವಾಹನ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ

Pinterest LinkedIn Tumblr

ಮಂಗಳೂರು, ಎಪ್ರಿಲ್.12: ಲೋಕಸಭಾ ಚುನಾವಣೆಯ ಪ್ರಚಾರದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ನಾಳೆ (ಎ.13ರಂದು) ಮಂಗಳೂರಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಎ.13ರಂದು ನಗರದಲ್ಲಿ ವಾಹನ ಪಾರ್ಕಿಂಗ್ ಮತ್ತು ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಎ.13ರಂದು ಬೆಳಗ್ಗೆ 8ರಿಂದ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ನಿರ್ಗಮಿಸುವ ವರೆಗೆ ಬಜ್ಪೆ ವಿಮಾನ ನಿಲ್ದಾಣದಿಂದ ನಗರದ ನೆಹರೂ ಮೈದಾನದ ವರೆಗೆ ರಸ್ತೆಯ ಎರಡೂ ಕಡೆಗಳಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಅದೇರೀತಿ ಪ್ರಧಾನಿ ಕಾರ್ಯಕ್ರಮಕ್ಕೆ ಆಗಮಿಸುವವರ ವಾಹನಗಳಿಗೆ ಪಾರ್ಕಿಂಗ್ ಮತ್ತು ಸಂಚಾರ ವ್ಯವಸ್ಥೆಯಲ್ಲಿ ಮಾರ್ಪಾಡು ಮಾಡಲಾಗಿದೆ.

ಉಡುಪಿ-ಮುಲ್ಕಿ-ಸುರತ್ಕಲ್ ಹಾಗೂ ಕಟೀಲು-ಬಜ್ಪೆ-ಕಾವೂರು-ಕೂಳೂರು-ಕೊಟ್ಟಾರಚೌಕಿ ಮುಖಾಂತರ ನಗರ ಪ್ರವೇಶಿಸುವ ವಾಹನಗಳ ಪೈಕಿ ಬಸ್ಸುಗಳಿಗೆ ಕರಾವಳಿ ಉತ್ಸವ ಮೈದಾನ, ಉರ್ವ ಮಾರ್ಕೆಟ್ ಮೈದಾನ, ಲೇಡಿಹಿಲ್ ಚರ್ಚ್ ಮೈದಾನ ಮತ್ತು ಕೂಳೂರು ಗೋಲ್ಡ್ ಫಿಂಚ್ ಸಿಟಿ ಗ್ರೌಂಡ್ ನಲ್ಲಿ ಹಾಗೂ ಕಾರುಗಳಿಗೆ ಮಣ್ಣಗುಡ್ಡೆ ಕೆನರಾ ಹೈಸ್ಕೂಲ್ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಕಾರ್ಕಳ-ಮೂಡುಬಿದಿರೆ-ಸುಳ್ಯ-ಪುತ್ತೂರು-ಬೆಳ್ತಂಗಡಿ-ಬಂಟ್ವಾಳ-ಬಿ.ಸಿ.ರೋಡ್‌ನಿಂದ ನಂತೂರು ಮೂಲಕ ನಗರ ಪ್ರವೇಶಿಸುವ ವಾಹನಗಳ ಪೈಕಿ ಬಸ್ಸುಗಳಿಗೆ ಬಂಟ್ಸ್ ಹಾಸ್ಟೆಲ್ ನ ರಾಮಕೃಷ್ಣ ಶಾಲಾ ಮೈದಾನ, ಮಲ್ಲಿಕಟ್ಟೆಯ ಕದ್ರಿ ಮೈದಾನ, ಪದವು ಪ್ರೌಢಶಾಲಾ ಮೈದಾನ ಮತ್ತು ಆಯಗ್ನೆಸ್ ಶಾಲಾ ಮೈದಾನ ಹಾಗೂ ಕಾರುಗಳಿಗೆ ಬಲ್ಮಠದ ಶಾಂತಿ ನಿಲಯ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.

ಕಾಸರಗೋಡು, ಉಪ್ಪಳ, ಉಳ್ಳಾಲ, ಕೊಣಾಜೆ, ದೇರಳಕಟ್ಟೆ, ತೊಕ್ಕೊಟ್ಟಿನಿಂದ ಪಂಪ್‌ವೆಲ್-ಕಂಕನಾಡಿ-ಮಂಗಳಾದೇವಿ ಮುಖಾಂತರ ನಗರ ಪ್ರವೇಶಿಸುವ ವಾಹನಗಳ ಪೈಕಿ ಬಸ್ಸುಗಳಿಗೆ ಎಮ್ಮೆಕೆರೆ ಮೈದಾನ ಮತ್ತು ನಂದಿಗುಡ್ಡೆಯ ವಾಮನ ನಾಯ್ಕೆ ಮೈದಾನ ಹಾಗೂ ಕಾರುಗಳಿಗೆ ಮೋರ್ಗನ್ಸ್ ಗೇಟ್‌ನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Comments are closed.