ನವದೆಹಲಿ: ಚುನಾವಣಾ ಪ್ರಚಾರಕ್ಕೆಂದು ಎಲ್ಲ ರಾಜ್ಯಗಳಿಗೂ ಪ್ರವಾಸ ಮಾಡುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯ ಕೊಲೆಗೆ ಸಂಚು ರೂಪಿಸಲಾಗಿದೆಯಾ? ಈ ರೀತಿಯ ಗಂಭೀರ ಸ್ವರೂಪದ ಆರೋಪ ಮತ್ತು ಆತಂಕದ ಮಾತುಗಳು ಕಾಂಗ್ರೆಸ್ ಪಕ್ಷದಿಂದ ಕೇಳಿ ಬಂದಿದ್ದು, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ಹತ್ಯೆಯ ಘಟನೆ ಮತ್ತೆ ಮರುಕಳಿಸಲಿದೆಯಾ ಎಂಬ ಭಯದ ವಾತಾವರಣ ನಿರ್ಮಾಣವಾಗಿದೆ.
ಈ ಬಗ್ಗೆ ಸ್ವತಃ ಕಾಂಗ್ರೆಸ್ ನಾಯಕರೇ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿಯವರ ಭದ್ರತೆ ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ. ಜತೆಗೆ ರಾಹುಲ್ ಗಾಂಧಿ ಹಣೆಯ ಮೇಲೆ ಲೇಸರ್ ಕಿರಣಗಳು ಏಳು ಬಾರಿ ಕಾಣಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲೇಸರ್ ಕಿರಣಗಳನ್ನು ಸ್ನೈಪರ್ಗಳಲ್ಲಿ ಬಳಕೆ ಮಾಡುತ್ತಾರೆ. ಇದರಿಂದ ನಿಗದಿತ ಗುರಿಯನ್ನು ದೂರದಿಂದ ತಲುಪಲು ಸಾಧ್ಯವಾಗುತ್ತದೆ.
https://twitter.com/Official_Z_Khan/status/1116262876690300928
ಅಮೇಥಿಯಲ್ಲಿ ಲೋಕಸಭಾ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ರಾಹುಲ್ ಗಾಂಧಿ ಅಲ್ಲಿ ರೋಡ್ ಶೋನಲ್ಲಿ ಕಾಣಿಸಿಕೊಂಡಿದ್ದ ವೇಳೆ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದು ಕಾಂಗ್ರೆಸ್ ಆರೋಪಿಸಿದೆ. ನಿನ್ನೆ ಅಮೇಥಿಯಲ್ಲಿ ನಡೆದ ರೋಡ್ ಶೋ ವೇಳೆ ರಾಹುಲ್ ಮಾಧ್ಯಮದ ಜತೆ ಮಾತನಾಡುತ್ತಿದ್ದರು. ಈ ವೇಳೆ ಅವರ ಹಣೆಯ ಮೇಲೆ ಲೇಸರ್ ಕಿರಣಗಳು ಏಳು ಬಾರಿ ಕಾಣಿಸಿಕೊಂಡಿದೆ.
ಕಾಂಗ್ರೆಸ್ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ರಾಹುಲ್ ಭದ್ರತೆಯಲ್ಲಿ ಭಾರೀ ಲೋಪವಾಗಿದೆ ಎಂದು ಆರೋಪಿಸಿದ್ದಾರೆ. ಮೇಲ್ನೋಟಕ್ಕೆ ಈ ಆರೋಪ ಗಂಭೀರ ಸ್ವರೂಪದ್ದೇ ಎಂದೆನಿಸುತ್ತದೆ. ಯಾಕೆಂದರೆ ರಾಹುಲ್ ಗಾಂಧಿ ಕುಟುಂಬದಲ್ಲಿ ಹತ್ಯೆಗೆ ಗುರಿಯಾಗಿರುವ ಜ್ವಲಂತ ಉದಾಹರಣೆಗಳಿವೆ. ಇಂದಿರಾ ಗಾಂಧಿಯವರನ್ನು ಅವರದ್ದೇ ಅಂಗರಕ್ಷಕರು ಗುಂಡಿಟ್ಟು ಹತ್ಯೆ ಮಾಡಿದ್ದರು. ಅದಾದ ನಂತರ ಎಲ್ಟಿಟಿಇ ಕೆಂಗಣ್ಣಿಗೆ ಗುರಿಯಾಗಿದ್ದ ರಾಜೀವ್ ಗಾಂಧಿಯವರನ್ನು ಆತ್ಮಾಹುತಿ ಬಾಂಬ್ ದಾಳಿಯ ಮೂಲಕ ಹತ್ಯೆ ಮಾಡಲಾಗಿತ್ತು.
ಈ ಹಿಂದೆ ಕರ್ನಾಟಕ ವಿಧಾನ ಸಭೆ ಚುನಾವಣೆ ಪ್ರಚಾರದ ವೇಳೆ ರಾಹುಲ್ ಗಾಂಧಿಯವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡ್ ಆಗುವ ವೇಳೆ ಕೈಕೊಟ್ಟಿತ್ತು. ಭಾರೀ ದುರಂತದಿಂದ ಕೂದಲೆಳೆಯ ಅಂತರದಲ್ಲಿ ರಾಹುಲ್ ಪಾರಾಗಿದ್ದರು. ಪ್ರಚಾರಕ್ಕೆ ಆಗಮಿಸಿದ್ದ ರಾಹುಲ್ ಗಾಂಧಿ ಹುಬ್ಬಳ್ಳಿಯ ಬಾನಂಗಳದಲ್ಲೇ ಕೆಲಕಾಲ ಆತಂಕದ ಪರಿಸ್ಥಿತಿ ಎದುರಿಸಬೇಕಾಯಿತು. ತಾಂತ್ರಿಕ ದೋಷದಿಂದ ಆಗಿದೆ ಎನ್ನಲಾದ ಘಟನೆ ಬಗ್ಗೆ ರಾಹುಲ್ ಗಾಂಧಿ ಜೊತೆಗಿದ್ದ ಕೌಶಲ್ ವಿದ್ಯಾರ್ಥಿ ಎಂಬುವವರು ರಾಜ್ಯ ಡಿಜಿಪಿ ನೀಲಮಣಿ ರಾಜು ಅವರಿಗೆ ದೂರು ನೀಡಿದ್ದರು. ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಕಾಂಗ್ರೆಸ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿತ್ತು.
ಕೇಂದ್ರ ಸರ್ಕಾರದ ಸ್ಪಷ್ಟನೆಯೇನು?
ರಾಹುಲ್ ಗಾಂಧಿ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಆರೋಪಕ್ಕೆ ಕೇಂದ್ರ ಗೃಹ ಇಲಾಖೆ ವಕ್ತಾರರು ಸ್ಪಷ್ಟನೆ ನೀಡಿದ್ದಾರೆ. ರಾಹುಲ್ ಮುಖದಲ್ಲಿ ಲೇಸರ್ ಬೆಳಕು ವಿಚಾರವಾಗಿ ಎಸ್ಪಿಜಿ ನಿರ್ದೇಶಕರು ತನಿಖೆ ನಡೆಸಿದ್ದಾರೆ. ಎಐಸಿಸಿ ಫೋಟೋಗ್ರಾಫರ್ ಮೊಬೈಲ್ ಫೋನ್ನಿಂದ ಹೊರಬಿದ್ದ ರೇಸರ್ ಅದಾಗಿದೆ. ಅಮೇಥಿಯ ರೋಡ್ ಶೋ ವೇಳೆ ರಾಹುಲ್ ಹಣೆಯ ಮೇಲೆ ಬಿದ್ದ ಬೆಳಕು ಸ್ನೈಪರ್ ಗನ್ನಿಂದ ಹೊರಟ ಲೇಸರ್ ಬೆಳಕಲ್ಲ. ಈ ವಿಚಾರವಾಗಿ ರಾಹುಲ್ ಗಾಂಧಿ ಸಿಬ್ಬಂದಿಗೆ ತಿಳಿಸಲಾಗಿದೆ. ರಾಹುಲ್ ಭದ್ರತೆಯಲ್ಲಿ ಯಾವುದೇ ವೈಫಲ್ಯವಾಗಿಲ್ಲ ಎಂದು ಕೇಂದ್ರ ಗೃಹ ಇಲಾಖೆ ವಕ್ತಾರರು ತಿಳಿಸಿದ್ದಾರೆ.
Comments are closed.