ಕುಂದಾಪುರ: ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯನ್ನು ತಳ್ಳಿಹಾಕಿ ಕೋಟ ಪೊಲೀಸ್ ಠಾಣೆಯಿಂದ ಪರಾರಿಯಾಗಿದ್ದ ಆರೋಪಿ ಮಂಜು ಎಂಬಾತನನ್ನು ಕೋಟ ಪೊಲೀಸರು ಶಿಕಾರಿಪುರದಲ್ಲಿ ಬಂಧಿಸಿದ್ದಾರೆ.
ಕಳೆದ ತಿಂಗಳು ಮಾ.20 ರಂದು ಕೋಟ ಪೊಲೀಸರು ಹಂಗಾರುಕಟ್ಟೆ ಬಳಿ ಅಕ್ರಮ ಮರಳುಗಾರಿಕೆ ಮೇಲೆ ದಾಳಿ ನಡೆಸಿದ್ದು ಈ ವೇಳೆ ಶಿಕಾರಿಪುರ ತಾಲೂಕು ಮೂಲದ ಪ್ರಸಕ್ತ ಹಂಗಾರುಕಟ್ಟೆ ಬಾಳ್ಕುದ್ರು ಗಾಮದಲ್ಲಿರುವ ಮಂಜು ಎಂಬಾತನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಪೊಲೀಸ್ ಠಾಣೆಗೆ ಕರೆತಂದಿದ್ದರು. ಬಳಿಕ ಕೋಟ ಪಿಎಸ್ಐ ರಫೀಕ್ ಪ್ರಕರಣದ ಇನ್ನೋರ್ವ ಆರೋಪಿ ಸಂತೋಷ ಎಂಬಾತನನ್ನು ಮಹಜರು ನಡೆಸಲು ಕರೆದೊಯ್ದಿದ್ದು ಆರೋಪಿ ಮಂಜುವನ್ನು ಹೆಡ್ ಕಾನ್ಸ್‌ಟೇಬಲ್ ಹಾಗೂ ಓರ್ವ ಮಹಿಳಾ ಸಿಬ್ಬಂದಿಯನ್ನು ಭದ್ರತೆಗೆ ನೇಮಿಸಿದ್ದರು. ಅಂದು ಮಧ್ಯಾಹ್ನ ಸುಮಾರು 3.30 ಸುಮಾರಿಗೆ ಆರೋಪಿ ಮಂಜು ಪೊಲೀಸ್ ಸಿಬ್ಬಂದಿಯನ್ನು ತಳ್ಳಿ ಹಾಕಿ ಕಸ್ಟಡಿಯಿಂದ ತಪ್ಪಿಸಿಕೊಂಡು ಪೊಲೀಸ್ ಠಾಣೆಯಿಂದ ಓಡಿ ಹೋಗಿದ್ದ.
ಆರೋಪಿ ಪರಾರಿಯಾದ ಬೆನ್ನಲ್ಲೇ ಪೊಲೀಸರು ಆತನ ಪತ್ತೆಗೆ ಕಾರ್ಯತಂತ್ರ ರೂಪಿಸಿದ್ದರು. ಮೂಲತಃ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಮಂಜು ಬಂಧನದ ಬಗ್ಗೆ ತಂಡ ರಚಿಸಿ ಕಾರ್ಯಾಚರಣೆಗಿಳಿದಿದ್ದು ಆರೋಪಿ ಚಲನವಲನದ ಬಗ್ಗೆ ಕಳೆದೊಂದು ವಾರದ ಹಿಂದೆ ಪೊಲೀಸರಿಗೆ ನಿಖರ ಮಾಹಿತಿ ಸಿಕ್ಕ ಹಿನ್ನೆಲೆ ಶಿಕಾರಿಪುರದಲ್ಲಿ ಆರೋಪಿಯನ್ನು ಬಂಧಿಸಿ ಸೋಮವಾರ ಠಾಣೆಗೆ ಕರೆತಂದಿದ್ದಾರೆ.
ಆರೋಪಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಹೆಡ್ ಕಾನ್ಸ್‌ಟೆಬಲ್ ಹಾಗೂ ಓರ್ವ ಮಹಿಳಾ ಕಾನ್ಸ್‌ಟೇಬಲ್ ಅಮಾನತುಗೊಳಿಸಲಾಗಿತ್ತು ಎನ್ನಲಾಗಿದೆ.
(ವರದಿ- ಯೋಗೀಶ್ ಕುಂಭಾಸಿ)
Comments are closed.