ಕರಾವಳಿ

ನೀರಿನ ಟ್ಯಾಂಕ್‍ಗೆ ಬಿದ್ದು ಮೂವರು ಮಕ್ಕಳು ಮೃತ್ಯು ಪ್ರಕರಣ : ಗುತ್ತಿಗೆದಾರ, ಇಂಜಿಯರ್ ವಿರುದ್ಧ ಪ್ರಕರಣ ದಾಖಲು

Pinterest LinkedIn Tumblr

ಮಂಗಳೂರು : ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಉಡ್ಡಂಗಲ ಎಂಬಲ್ಲಿ ಬುಧವಾರ ಸಂಜೆ ಪಂಚಾಯತ್ ನಿರ್ಮಿಸಿದ ನೀರಿನ ಟ್ಯಾಂಕ್‍ಗೆ ಬಿದ್ದು ಮೂವರು ಮಕ್ಕಳು ಮೃತಪಟ್ಟ ಘಟನೆಗೆ ಸಂಬಂಧಿಸಿ ಟ್ಯಾಂಕ್ ನಿರ್ಮಿಸಿದ ಗುತ್ತಿಗೆದಾರ ಹಾಗೂ ಇಂಜಿನಿಯರ್ ವಿರುದ್ಧ ಸಂಪ್ಯ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಗುತ್ತಿಗೆದಾರ ಹಾಗೂ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಇಂಜಿನಿಯರ್ ಟ್ಯಾಂಕ್‍ನ ಮುಚ್ಚಳಕ್ಕೆ ಬೀಗ ಹಾಕದಿರುವುದು ಹಾಗೂ ಸುತ್ತ ಬೇಲಿ ನಿರ್ಮಿಸದೆ ನಿರ್ಲಕ್ಷ್ಯ ವಹಿಸದೇ ಇರುವ ಕಾರಣಕ್ಕೆ ಪುತ್ತೂರು ಗ್ರಾಮಾಂತ ಪೊಲೀಸ್ ಠಾಣೆಯಲ್ಲಿ ಇವರಿಬ್ಬರ ವಿರುದ್ದ ಕಲಂ 304(ಎ)ಐಪಿಸಿ ಪ್ರಕರಣ ದಾಖಲಾಗಿದೆ.

ಘಟನೆ ವಿವರ :

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪಾಣಾಜೆಯ ಉಡ್ಡಂಗಳದಲ್ಲಿ ನೀರಿನ ಟ್ಯಾಂಕ್ ಗೆ ಬಿದ್ದು, ಇಬ್ಬರು ಬಾಲಕಿಯರು ಹಾಗೂ ಒಬ್ಬ ಬಾಲಕ ಸೇರಿ ಒಂದೇ ಕುಟುಂಬದ ಮೂವರು ಮಕ್ಕಳು ಮೃತಪಟ್ಟ ಆಘಾತಕಾರಿ ಘಟನೆ ಏಪ್ರಿಲ್ 3ರಂದು ಸಂಭವಿಸಿದೆ.

ಉಡ್ಡಂಗಳ ನಿವಾಸಿ ರವಿಮೂಲ್ಯ ಎಂಬುವರ ಮಗ ಮಿತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಏಳನೇ ತರಗತಿಯ ವಿದ್ಯಾರ್ಥಿ ಜಿತೇಶ್ (13), ರವಿಮೂಲ್ಯ ಅವರ ಸಹೋದರ ಹರೀಶ್ ಮೂಲ್ಯ ಎಂಬುವರ ಮಕ್ಕಳಾದ ಇದೇ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ವಿಶ್ಮಿತಾ (13) ಮತ್ತು 4ನೇ ತರಗತಿ ವಿದ್ಯಾರ್ಥಿನಿ ಚೈತ್ರಾ (9) ಘಟನೆಯಲ್ಲಿ ಮೃತಪಟ್ಟ ದುರ್ದೈವಿಗಳು.

ಮೃತಪಟ್ಟ ಮಕ್ಕಳೆಲ್ಲ ಬೆಟ್ಟಂಪಾಡಿಯ ಮಿತ್ತಡ್ಕ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಾಗಿದ್ದು, ಶಾಲೆಗೆ ರಜೆ ಇರುವ ಹಿನ್ನಲೆಯಲ್ಲಿ ಆಟವಾಡಲು ಗ್ರಾಮ ಪಂಚಾಯತ್​ನ ನೀರು ಸರಬರಾಜು ಟ್ಯಾಂಕ್​ಗೆ ಇಳಿದಿದ್ದಾರೆ. ಈ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಅಂದು ಸಂಜೆ ವೇಳೆಗೆ ಶಾಲೆಯಿಂದ ಹಿಂತಿರುಗಿದ ಬಳಿಕ ಮನೆಯ ಸಮೀಪ ಪಂಚಾಯತ್ ವತಿಯಿಂದ ಕುಡಿಯುವ ನೀರು ಸರಬರಾಜು ಯೋಜನೆ ಅಡಿಯಲ್ಲಿ ನಿರ್ಮಿಸಿದ್ದ ನೂತನ ನೀರಿನ ಟ್ಯಾಂಕ್ ಬಳಿಯಲ್ಲಿ ಮಕ್ಕಳು ಆಟವಾಡುತ್ತಿದ್ದರು. ಸೆಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನೀರಾಟ ಆಡಲು ಮುಂದಾಗಿರುವ ಮಕ್ಕಳು ಊರಿನ ನೀರಿನ ಟ್ಯಾಂಕ್ ಬಳಿ ತೆರಳಿದ್ದಾರೆ. ನೀರಾಟ ಆಡಲು ನೀರಿನ ಟ್ಯಾಂಕ್ ಗೆ ಇಳಿದಿದ್ದ ಮಕ್ಕಳು ಟ್ಯಾಂಕ್ ನಿಂದ ಹೊರಬರಲಾಗದೆ ಮೃತಪಟ್ಟಿದ್ದಾರೆ.

ಮಕ್ಕಳು ಮನೆಗೆ ಬಾರದಿರುವುದನ್ನು ಗಮನಿಸಿದ ಕುಟುಂಬದವರು ಹುಡುಕಾಟ ಆರಂಭಿಸಿದ್ದರು. ಈ ಸಂದರ್ಭದಲ್ಲಿ ಮಕ್ಕಳು ನೀರಿನ ಟ್ಯಾಂಕ್ ಗೆ ಬಿದ್ದು ಮೃತಪಟ್ಟಿರುವುದು ಪತ್ತೆಯಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಪೊಲೀಸರು ತೆರಳಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿದ್ದಾರೆ.

ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಗೆ ಸೇರಿದ ಟ್ಯಾಂಕ್ ಆಗಿದ್ದು, ಟ್ಯಾಂಕ್ ನಿರ್ಮಾಣವಾಗಿ ಮೂರು‌ ತಿಂಗಳು ಕಳೆದಿದೆ. ಟ್ಯಾಂಕ್ ನಲ್ಲಿ ಅರ್ಧ ನೀರು ತುಂಬಿಸಿ ಇಟ್ಟಿದ್ದು, ಬೀಗ ಹಾಕಿರಲಿಲ್ಲ. ಗ್ರಾಮ ಪಂಚಾಯತ್ ಬೇಜವಾಬ್ದಾರಿಯೇ ಈ ದುರಂತಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.

ಘಟನಾ ಸ್ಥಳಕ್ಕೆ ಬುಧವಾರ ರಾತ್ರಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯರ ಬೇಡಿಕೆಯನ್ನು ಆಲಿಸಿದ ಜಿಲ್ಲಾಧಿಕಾರಿಗಳು ಸರ್ಕಾರದ ಕಡೆಯಿಂದ ಏನು ಕ್ರಮ ಸಾಧ್ಯವಿದೆಯೋ ಅದನ್ನು ಮಾಡುವುದಾಗಿ ಹೇಳಿದ್ದರು. ಸಹಾಯಕ ಕಮೀಷನರ್ ಜೊತೆ ಚರ್ಚಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಹಾಗೂ ನೊಂದವರ ಕುಟುಂಬಕ್ಕೆ ಪರಿಹಾರ ಒದಗಿಸಲು ಪ್ರಯತ್ನ ನಡೆಸುವುದಾಗಿ ತಿಳಿಸಿದ್ದರು.

ಇನ್ನು ಪಂಚಾಯತ್ ನಿರ್ಮಿಸಿದ ನೀರಿನ ಟ್ಯಾಂಕ್‍ಗೆ ಬಿದ್ದು ಮೂವರು ಮಕ್ಕಳು ಮೃತಪಟ್ಟ ಘಟನೆಗೆ ಸಂಬಂಧಿಸಿ ಮೃತರ ಕುಟುಂಬಕ್ಕೆ ಸರ್ಕಾರದ ಕಡೆಯಿಂದಲೇ ಪರಿಹಾರ ಕಾರ್ಯ ಮಾಡಬೇಕಾಗಿದೆ. ಜಿಲ್ಲಾಧಿಕಾರಿಗಳು ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸುತ್ತಾರೆ. ಶಾಸಕನ ನೆಲೆಯಲ್ಲಿ ನಾನೂ ಸ್ಪೆಷಲ್ ಕನ್ಸಡ್ರೇಶನ್ ಮಾಡುತ್ತೇನೆ ಎಂದು ಸ್ಥಳೀಯ ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.

Comments are closed.