ಕರಾವಳಿ

ಜರ್ಮನ್’ನಲ್ಲಿ ಚೂರಿಯಿರಿತ ಪ್ರಕರಣ: ಕುಟುಂಬ ವಿದೇಶಕ್ಕೆ ತೆರಳಲು ನೆರವಾದ ಜಯಪ್ರಕಾಶ್ ಹೆಗ್ಡೆ

Pinterest LinkedIn Tumblr

ಕುಂದಾಪುರ: ಮಾ.29 ಶುಕ್ರವಾರ ಜರ್ಮನಿಯ ಮ್ಯೂನಿಚ್‌ನಲ್ಲಿ ಹಂತಕನ ಚೂರಿ ಇರಿತಕ್ಕೆ ಬಲಿಯಾದ ಹೊಸನಗರ ಮೂಲದ ಬಿ.ವಿ.ಪ್ರಶಾಂತ ಅವರ ಕುಟುಂಬ ಸದಸ್ಯರು ಜರ್ಮನಿಗೆ ತೆರಳುವ ಸಿದ್ದತೆ ನಡೆಸಿದ್ದಾರೆ. ವಿದೇಶ ಪ್ರಯಾಣಕ್ಕೆ ಅಗತ್ಯವಾಗಿರುವ ಪಾಸ್‌ಪೋರ್ಟ್‌, ವಿಮಾ ದಾಖಲೆ ಹಾಗೂ ದಾಖಲೆ ಪತ್ರಗಳ ತಾಂತ್ರಿಕ ಸಮಸ್ಯೆಗಳು ಸೋಮವಾರ ಬಹುತೇಕ ಪರಿಹಾರವಾಗಿದ್ದು, ಜರ್ಮನಿಯಿಂದ ವೀಸಾ ಬಂದ ಕೂಡಲೇ ಪ್ರಶಾಂತ ಅವರ ತಾಯಿ ವಿನಯ, ಸ್ಮೀತಾ ಅವರ ತಂದೆ ಡಾ.ಚಂದ್ರಮೌಳಿ, ತಾಯಿ ವಿದ್ಯಾ ಹಾಗೂ ಪ್ರಶಾಂತ ಅವರ ಜರ್ಮನಿಯ ಕುಟುಂಬ ಸ್ನೇಹಿತ ಗಣೇಶ್‌ ಭಾರತದಿಂದ ಪ್ರಯಾಣ ಬೆಳೆಸಲಿದ್ದಾರೆ.

ಆಗಂತುಕನೊಬ್ಬ ಚೂರಿ ಇರಿತದಿಂದ ಪ್ರಶಾಂತ ಮೃತ ಪಟ್ಟು, ಪತ್ನಿ ಸ್ಮೀತಾ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸೇರಿದ ದುರ್ಘಟನೆ ವರದಿಯಾಗಿತ್ತು. ಘಟನೆಯ ಬಳಿಕ ದಿಗ್ಬ್ರಮೆಗೊಂಡಿದ್ದ ಕುಟುಂಬ ಸದಸ್ಯರ ಸಹಾಯಕ್ಕೆ ಮುಂದಾಗಿದ್ದ ಮಾಜಿ ಸಂಸದ ಕೆ.ಜಯಪ್ರಕಾಶ ಹೆಗ್ಡೆ, ವಿದೇಶ ಪ್ರಯಾಣಕ್ಕೆ ಅಡಚಣೆಯಾಗಿದ್ದ ತಾಂತ್ರಿಕ ಸಮಸ್ಯೆಯ ನಿವಾರಣೆಗಾಗಿ ಕುಟುಂಬ ಸದಸ್ಯರನ್ನು ಬೆಂಗಳೂರಿಗೆ ಬರುವಂತೆ ಹೇಳಿದ್ದರು.

ಸಹಕರಿಸಿದ ಜೆ.ಪಿ. ಹೆಗ್ಡೆ…
ಸೋಮವಾರ ಬೆಂಗಳೂರಿಗೆ ಬಂದಿದ್ದ ಕುಟುಂಬ ಸದಸ್ಯರೊಂದಿಗೆ ಸ್ವತ: ತಾವೇ ಪಾಸ್‌ಪೋರ್ಟ್‌ ಕಚೇರಿಗೆ ತೆರಳಿ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ದಾಖಲೆ ಪತ್ರಗಳನ್ನು ಸಿದ್ದಪಡಿಸುವಲ್ಲಿ ಸಹಕರಿಸಿದ್ದಾರೆ.   ಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಜೆ.ಪಿ.ಹೆಗ್ಡೆ, ದುರ್ಘಟನೆಯ ಮಾಹಿತಿ ಬಂದ ಕೂಡಲೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಲ್ಲದೆ, ವಿದೇಶಾಂಗ ಕಚೇರಿಯ ಅಧಿಕಾರಿಗಳಿಗೆ ನೊಂದ ಕುಟುಂಬಕ್ಕೆ ಸಹಕಾರ ನೀಡುವಂತೆ ಸೂಚಿಸಿದ್ದಾರೆ. ಸುಷ್ಮಾ ಸ್ವರಾಜ್‌ ಅವರಿಗೆ ಇ ಮೇಲ್‌ ಮೂಲಕ ಕಳುಹಿಸಿದ ಸಂದೇಶಗಳಿಗೂ ತ್ವರಿತ ಸ್ಪಂದನ ನೀಡಿದ್ದಾರೆ. ಈ ಪ್ರಕರಣದಲ್ಲಿ ಪ್ರಶಾಂತ ಅವರ ಕುಟುಂಬಕ್ಕೆ ಸಹಕಾರ ನೀಡಲು ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿ ಅಂಬಿಕಾ ಎನ್ನುವವರನ್ನು ಸಂಪರ್ಕ ಅಧಿಕಾರಿಯಾಗಿ ನಿಯೋಜಿಸಲಾಗಿದೆ. ನಾನು ಅವರೊಂದಿಗೆ ಮಾತನಾಡಿದ್ದು, ವಿದೇಶಾಂಗ ಇಲಾಖೆಯ ಮೂಲಕ ಎಲ್ಲ ರೀತಿಯ ಅಗತ್ಯ ಸಹಕಾರ ನೀಡುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ ಹೆಗ್ಡೆ, ಯಾವುದೆ ಸಂದರ್ಭದಲ್ಲಿ ನನ್ನ ಸಹಕಾರ ಬೇಕಾದಲ್ಲಿ ನನ್ನ ಮೊಬೈಲ್‌ ದೂರವಾಣಿ ಸಂಪರ್ಕಿಸುವಂತೆ ಕುಟುಂಬ ಸದಸ್ಯರಿಗೆ ಹೇಳಿರುವುದಾಗಿ ತಿಳಿಸಿದ್ದಾರೆ.

ಸೂಕ್ತ ತನಿಖೆಗೆ ಆಗ್ರಹ
ಘಟನೆಯ ಕುರಿತಂತೆ ಮಾತನಾಡಿದ ಪ್ರಶಾಂತ ಅವರ ಸಹೋದರಿಯ ಪತಿ ಉಡುಪಿಯ ಸಿಂಡಿಕೇಟ್‌ ಬ್ಯಾಂಕ್‌ ಉದ್ಯೋಗಿ ಶ್ರೀನಿವಾಸ ಅವರು, ಆಕಸ್ಮಿಕವಾಗಿ ನಡೆದ ಘಟನೆಯಿಂದ ನಮ್ಮ ಕುಟುಂಬ ದುಖ:ಕ್ಕೆ ಒಳಗಾಗಿದೆ. ಯಾರೊಂದಿಗೆ ಸಂಘರ್ಷ ಮನೋಭಾವ ಇರದೆ ಇದ್ದ ಪ್ರಶಾಂತ ಅವರಿಗೆ ಹಂತಕ ಚೂರಿಯಿಂದ ಇರಿಯಲು ನಿರ್ದಿಷ್ಟ ಕಾರಣ ಏನು ಎನ್ನುವುದು ತಿಳಿಯಬೇಕು. ಸುಮಾರು 2 ವರ್ಷಗಳಿಂದ ನೆರೆಕೆರೆಯಲ್ಲಿ ಇದ್ದ ಹಂತಕ ಏಕಾಏಕಿ ಹತ್ಯೆ ನಡೆಸಲು ಮುಂದಾಗಿದ್ದ ಕಾರಣ ಏನು ಎನ್ನುವುದು ತನಿಖೆಯಿಂದ ಹೊರ ಬರಬೇಕು. ಇದಕ್ಕೆ ಭಾರತದ ವಿದೇಶಾಂಗ ಇಲಾಖೆ ಒತ್ತಡ ಹಾಕಬೇಕು ಎಂದು ಆಗ್ರಹಿಸಿದ ಅವರು ಸಂಕಷ್ಟದ ಸಮಯದಲ್ಲಿ ನಮ್ಮ ಸಹಾಯಕ್ಕೆ ಬಂದ ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ ಅವರಿಗೆ ನಾವು ಕೃತಜ್ಞರಾಗಿದ್ದೇವೆ ಎಂದು ತಿಳಿಸಿದ್ದಾರೆ.

Comments are closed.