ಕರಾವಳಿ

ಏಪ್ರಿಲ್ 1, ಕರಾವಳಿ ಪಾಲಿಗೆ ಬ್ಲ್ಯಾಕ್ ಡೇ’ : ಮುನೀರ್ ಕಾಟಿಪಳ್ಳ

Pinterest LinkedIn Tumblr

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಪ್ರತೀಕ ಎಂದೇ ಹೇಳಲಾಗುತ್ತಿದ್ದ ವಿಜಯ ಬ್ಯಾಂಕನ್ನು ಕೇಂದ್ರ ಸರಕಾರ ಕರಾವಳಿಗರ ಭಾರೀ ವಿರೋಧದ ನಡುವೆಯೇ ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನ ಮಾಡಿರುವ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಸಮಾನ ಮನಸ್ಕರು ನಗರದ ಅಂಬೇಡ್ಕರ್ ವೃತ್ತದ ಬಳಿಯಿರುವ ವಿಜಯ ಬ್ಯಾಂಕ್‌ನ ಪ್ರಧಾನ ಕಚೇರಿಯೆದುರು ಸೋಮವಾರ ಪ್ರತಿಭಟನೆ ನಡೆಸಿದರು.

ಏಪ್ರಿಲ್ 1ರಂದು ವಿಜಯ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಆಗಿ ಪರಿವರ್ತನೆಗೊಂಡಿದೆ.ಇನ್ನು ಮುಂದೆ ವಿಜಯ ಬ್ಯಾಂಕ್ ಗುಜರಾತ್ ಮೂಲದ ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಗೊಂಡ ಕಾರ್ಯಾಚರಿಸಲಿದೆ. ಕರಾವಳಿಯ ಜನರ ಆಗ್ರಹವನ್ನು ಕಡೆಗಣಿಸಿ, ವಿಲೀನ ಪ್ರಕ್ರಿಯೆ ನಡೆಸಿದ ಕೇಂದ್ರ ಸರಕಾರದ ನಿರ್ಧಾರವನ್ನು ವಿರೋಧಿಸಿ ಸಮಾನ ಮನಸ್ಕರು ಇಂದು ಕಪ್ಪು ಪಟ್ಟಿ ಧರಿಸಿ ಕರಾಳ ದಿನ ಆಚರಿಸಿದರು.

ಪ್ರತಿಭಟನ ಸಭೆಯನ್ನುದ್ದೇಶಿಸಿ ಮಾತನಾಡಿದ ವಿಜಯಾ ಬ್ಯಾಂಕ್ ಉಳಿಸಿ ಹೋರಾಟ ಸಮಿತಿಯ ಸಂಚಾಲಕ ದಿನೇಶ್ ಹೆಗ್ಡೆ ಉಳೆಪಾಡಿ ಅವರು, ಕೇಂದ್ರ ಸರಕಾರ ಏಪ್ರಿಲ್ 1 ರಿಂದ ವಿಜಯಾ ಬ್ಯಾಂಕ್ ಅಸ್ಥಿತ್ವವನ್ನು ಅಧಿಕೃತವಾಗಿ ರದ್ದುಗೊಳಿಸಿ, ಬ್ಯಾಂಕ್ ಅಫ್ ಬರೋಡಾದ ಭಾಗವಾಗಿ ಘೋಷಿಸಿರುವುದು ಅತ್ಯಂತ ಖಂಡನೀಯ ಎಂದು ಆಕ್ರೋಷ ವ್ಯಕ್ತಪಡಿಸಿದರು. ಕರಾವಳಿಯ ಹೆಮ್ಮೆಯಲ್ಲಿ ಒಂದಾದ ವಿಜಯ ಬ್ಯಾಂಕ್‌ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಈ ಮೂಲಕ ಕರಾವಳಿಯ ಹೆಸರೊಂದು ಶಾಶ್ವತವಾಗಿ ಅಳಿಸಿ ಹೋಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

 ಮುನೀರ್ ಕಾಟಿಪಳ್ಳ ( File Photo)

ಡಿವೈಎಫ್ಐ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಕರಾವಳಿಯ ಪ್ರತಿಷ್ಠೆಯ ಸಂಕೇತವಾಗಿದ್ದ ವಿಜಯ ಬ್ಯಾಂಕ್ ಅನ್ನು ನಷ್ಟ ದಲ್ಲಿರುವ ಇತರ ಬ್ಯಾಂಕ್ ಗಳೊಂದಿಗೆ ವಿಲೀನ ಮಾಡುವ ಮೂಲಕ ಕೇಂದ್ರ ಸರಕಾರ ತುಳುನಾಡಿನ ಜನರ ಭಾವನೆ, ಬೇಡಿಕೆಯನ್ನು ಪೂರ್ಣವಾಗಿ ಕಡೆಗಣಿಸಿದೆ. ಕರಾವಳಿಯ ಪ್ರತಿಷ್ಠೆಯ ಸಂಕೇತವಾಗಿದ್ದ ವಿಜಯ ಬ್ಯಾಂಕ್ ವೀಲಿನಗೊಂಡ ಏಪ್ರಿಲ್ 1, ಕರಾವಳಿ ಪಾಲಿಗೆ ಬ್ಲ್ಯಾಕ್ ಡೇ’ ಎಂದು ಕಿಡಿಕಾರಿದರು.

ಅತ್ತಾವರ ಎ ಬಿ ಶೆಟ್ಟಿ, ಮೂಲ್ಕಿ ಸುಂದರ ರಾಮ ಶೆಟ್ಟರ ಅಪಾರ ಶ್ರಮದ ಫಲವಾಗಿ ವಿಜಯಾ ಬ್ಯಾಂಕ್ ಬೆಳೆದು ನಿಂತಿತ್ತು. ಕರಾವಳಿ ಭಾಗದ ಯುವಜನರಿಗೆ ಉದ್ಯೋಗ, ವ್ಯಾಪಾರಸ್ಥರಿಗೆ, ಉದ್ಯಮಿಗಳಿಗೆ ಬಂಡವಾಳ ನೀಡುತ್ತಾ ಕರಾವಳಿಯ ಆರ್ಥಿಕತೆಗೆ ವಿಜಯಾ ಬ್ಯಾಂಕ್ ಅಪಾರ ಕೊಡುಗೆ ನೀಡಿದೆ. ತನ್ನ ಬೆಳವಣಿಗೆ, ಜನೋಪಕಾರಿ ನಿಲುವುಗಳಿಂದ ತುಳುನಾಡಿನ ಅಸ್ಮಿತೆಯಾಗಿಯೂ ವಿಜಯಾ ಬ್ಯಾಂಕ್ ಕರಾವಳಿಗರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿತ್ತು ಆದರೆ.ಈ ಆಘಾತಕಾರಿ ಬೆಳವಣಿಗೆ ವಿಲೀನ ಪ್ರಕ್ರಿಯೆ ತಡೆಯಲು ಯತ್ನಿಸದ ಕರಾವಳಿ ಭಾಗದ ಬಿಜೆಪಿ‌ ಸಂಸದರು, ಶಾಸಕರ ವೈಫಲ್ಯವೇ ನೇರ ಕಾರಣ ಎಂದು ಆರೋಪಿಸಿದರು.

ಮಾಜಿ ಮೇಯರ್ ಕೆ.ಅಶ್ರಫ್, ಎಂ.ಜಿ.ಹೆಗ್ಡೆ, ಸುನೀಲ್ ಕುಮಾರ್ ಬಜಾಲ್, ಸಂತೋಷ್‌ಬಜಾಲ್, ದಯಾನಂದ ಶೆಟ್ಟಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Comments are closed.