ಕರಾವಳಿ

ದ.ಕ.ಜಿಲ್ಲಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತೊಮ್ಮೆ ಅಯ್ಕೆ

Pinterest LinkedIn Tumblr

ಮಂಗಳೂರು,ಮಾರ್ಚ್ 21 : ಭಾರತೀಯ ಜನತಾ ಪಾರ್ಟಿ ಲೋಕಸಭಾ ಅಭ್ಯರ್ಥಿಗಳ ಪಟ್ಟಿಯನ್ನು ಗುರುವಾರ ಸಂಜೆ ಪ್ರಕಟಿಸಲಾಗಿದ್ದು, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಲು ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಮತ್ತೋಮ್ಮೆ ಬಿಜೆಪಿ ಹೈಕಮಾಂಡ್ ಕಣಕ್ಕಿಳಿಸಿದೆ.

2009 ಮತ್ತು 2014ರಲ್ಲಿ ಸ್ಪರ್ಧಿಸಿ ಗೆದ್ದಿದ್ದ ನಳಿನ್ ಕುಮಾರ್ ಕಟೀಲ್‌ಗೆ ಮೂರನೇ ಬಾರಿಗೆ ಸ್ಪರ್ಧಿಸಲು ಪಕ್ಷದೊಳಗೆ ಕೆಲವರ ವಿರೋಧವಿತ್ತು. ಆದರೆ ಇದೀಗ ಶಾಸಕರೂ ಆಗಿರುವ ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ಅವರು ದ.ಕ. ಲೋಕಸಭಾ ಕ್ಷೇತ್ರದಿಂದ ಮೂರನೇ ಬಾರಿಗೂ ನಳಿನ್ ಕುಮಾರ್ ಕಟೀಲ್ ಸ್ಪರ್ಧಿಸಲಿದ್ದಾರೆ ಎಂದು ಘೋಷಿಸಿದ್ದಾರೆ.

2009ರಲ್ಲಿ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್‌ನ ಜನಾರ್ದನ ಪೂಜಾರಿಯ ವಿರುದ್ಧ 40 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದರೆ, 2014ರಲ್ಲಿ ಪೂಜಾರಿ ವಿರುದ್ಧ 1.43 ಲಕ್ಷ ಮತಗಳ ಅಂತರದಿಂದ ಗೆದ್ದು ಗಮನ ಸೆಳೆದಿದ್ದರು.

ಜಾತಿ ಬಲವನ್ನು ಮುಂದಿಟ್ಟುಕೊಂಡು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಮಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲು ಆಸಕ್ತಿ ತೋರಿದ್ದ ಸಂಘ ಪರಿವಾರದ ಮುಖಂಡ ಸತ್ಯಜಿತ್ ಸುರತ್ಕಲ್ ಈ ಬಾರಿಯೂ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತನಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದ್ದರು. ಇದೀಗ ನಳಿನ್ ಕುಮಾರ್ ಕಟೀಲ್‌ ಅವರೇ ಈ ಬಾರಿ ಕೂಡ ಅಭ್ಯರ್ಥಿ ಎಂಬ ಅಧಿಕೃತ ಘೋಷಣೆಯಿಂದಾಗಿ ಸತ್ಯಜಿತ್ ಸುರತ್ಕಲ್ ಅವರಿಗೆ ಮತ್ತೊಮ್ಮೆ ಹಿನ್ನೆಡೆಯಾಗಿದೆ.

ಇನ್ನು ದಕ್ಷಿಣ ಕನ್ನಡದ ಹಿನ್ನೆಡೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಅವರೇ ಕಾರಣ ಎಂದು ಚುನಾವಣಾ ಪೂರ್ವದಲ್ಲಿ ಬಲವಾಗಿ ಆರೋಪಿಸುತ್ತಿದ್ದ ಕಾಂಗ್ರೆಸ್ ನಾಯಕರು ಇದೀಗ ನಳಿನ್ ಕುಮಾರ್ ಕಟೀಲ್ ವಿರುದ್ಧ ಯಾರನ್ನು ಅಭ್ಯರ್ಥಿಯಾಗಿ ಕಣಕಿಳಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.

Comments are closed.