ಕರಾವಳಿ

‘ಗೋ ಬ್ಯಾಕ್’ ನಡುವೆಯೂ ಹಾಲಿ ಸಂಸದೆ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಿದ ಹೈಕಮಾಂಡ್!

Pinterest LinkedIn Tumblr

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೇಟ್ ಅಂತಿಮಗೊಂಡಿದ್ದು ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ಲಭಿಸಿದೆ.

ಹಾಲಿ ಸಂಸದೆ ಶೋಭಾ ಹಾಗೂ ಮಾಜಿ ಸಂಸದ ಹಾಗೂ ಸಚಿವ ಜಯಪ್ರಕಾಶ್ ಹೆಗ್ಡೆ ನಡುವೆ ಟಿಕೆಟ್ ವಿಚಾರದಲ್ಲಿ ತೀವ್ರ ಪೈಪೋಟಿ ನಡೆದಿದ್ದು ಈ ನಡುವೆ ಬಿಲ್ಲವ ಸಮುದಾಯದ ಮಹೇಶ್ ಕುಮಾರ್ ಪೂಜಾರಿ, ಮೀನುಗಾರಿಕಾ ಮುಖಂಡ ಯಶಪಾಲ ಸುವರ್ಣ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದರು. ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಲು ಕಮಿಟಿ ಬಹುತೇಕ ಸದಸ್ಯರು ಸುತರಾಂ ಒಪ್ಪಿರಲಿಲ್ಲ. ಶಾಸಕ ಸಿಟಿ ರವಿ, ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ಆದಿಯಾಗಿ ಹಲವು ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆ ಭಾನುವಾರದ ಕೋರ್ ಕಮಿಟಿ ಸಭೆ ದೆಹಲಿಗೆ ಶಿಪ್ಟ್ ಆಗಿತ್ತು. ರಾಜ್ಯ ಬಿಜೆಪಿಯಿಂದ ಈ ಎಲ್ಲಾ ಆಕಾಂಕ್ಷಿಗಳ ಹೆಸರನ್ನು ದೆಹಲಿ ಹೈಕಮಾಂಡಗೆ ಕಳುಹಿಸಲಾಗಿತ್ತು. ಅಲ್ಲಿ ನಡೆದ ಸಭೆಯಲ್ಲಿಯೂ ಆರ್.ಎಸ್.ಎಸ್ ನಾಯಕರು ಹಾಗೂ ಪಕ್ಷದ ಹಿರಿಯ ನಾಯಕರು ಶೋಭಾಗೆ ಟಿಕೆಟ್ ಬೇಡ ಎಂದು ವಿವರಣೆ ನೀಡಿದರೂ ಕೂಡ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮಾತ್ರ ಟಿಕೆಟ್ ನೀಡಲೇಬೆಕೆಂದು ಪಟ್ಟು ಹಿಡಿದು ಕೂತಿದ್ದರು. ಸಂಘ ಪರಿವಾರದ ಹಿನ್ನೆಲೆಯುಳ್ಳ ಹೊಸಮುಖಕ್ಕೆ ಟಿಕೆಟ್ ನೀಡಿದಲ್ಲಿ ಪಕ್ಷ ಸಂಘಟನೆ ಹೆಚ್ಚಲಿದೆ ಎಂಬುದು ನಾಯಕರ ವಾದವಾಗಿತ್ತು. ಆದರೆ ಇದನ್ನಾವುದನ್ನು ಗಣನೆಗೆ ಹೈಕಮಾಂಡ್ ತೆಗೆದುಕೊಳ್ಳದೇ ಇದ್ದ ಕಾರಣ ಸಿ.ಟಿ. ರವಿ ಸಹಿತ ಕೆಲವು ನಾಯಕರು ಅಸಮಾಧಾನಗೊಂಡಿದ್ದರು ಎನ್ನಲಾಗಿತ್ತು. ಮುಂದುವರಿದ ರಾಜಕೀಯ ಬೆಳವಣಿಗೆಯಲ್ಲಿ ಹಾಲಿ ಸಂಸದರಿಗೆ ಟಿಕೆಟ್ ನೀಡಲು ಪಕ್ಷ ತೀರ್ಮಾನಿಸಿ ಟಿಕೆಟ್ ಘೋಷಣೆ ಮಾಡಿದೆ.

ಗೋ ಬ್ಯಾಕ್ ಶೋಭಾ ಅಭಿಯಾನದ ನಡುವೆ ಬಿಜೆಪಿ ಹೈಕಮಾಂಡ್ ಈ ನಡೆ ಕಾರ್ಯಕರ್ತರಲ್ಲಿ ಅಸಮಾಧಾನವನ್ನುಂಟು ಮಾಡಿದೆ. ಸಂಘ ಪರಿವಾರದಲ್ಲಿ ಗುರುತಿಸಿಕೊಂಡ ಹೊಸಮುಖಕ್ಕೆ ಟಿಕೆಟ್ ನೀಡುತ್ತಾರೆಂಬ ಕಲ್ಪನೆಯನ್ನಿಟ್ಟುಕೊಂಡಿದ್ದ ಕಾರ್ಯಕರ್ತರು ‘ನೋಟಾ’ ಅಭಿಯಾನ ಮಾಡುವುದಾಗಿಯೂ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನೋವನ್ನು ಹೊರಹಾಕಿದ್ದಾರೆ.

Comments are closed.