ಕರಾವಳಿ

ಐವತ್ತು ವರ್ಷಗಳ ಬಳಿಕ ಪೊಳಲಿ ಶ್ರೀ ಕ್ಷೇತ್ರದಲ್ಲಿ (ಇಂದು ರಾತ್ರಿ) ಮಗೃಂತಾಯಿ ನೇಮ

Pinterest LinkedIn Tumblr

ಮಂಗಳೂರು, ಮಾರ್ಚ್ 13 : ಕರಾವಳಿಯ ಪ್ರಮುಖ ಶಕ್ತಿ ಪೀಠಗಳಲ್ಲಿ ಒಂದಾಗಿರುವ ಪೊಳಲಿ ಶ್ರೀ ರಾಜ ರಾಜೇಶ್ವರೀ ದೇವಸ್ಥಾನದಲ್ಲಿ ಇಂದು ನಡೆಯುತ್ತಿರುವ ಸಂಭ್ರಮದ ಬ್ರಹ್ಮಕಲಶೋತ್ಸವದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಶ್ರೀ ಕ್ಷೇತ್ರದ ಪ್ರಕಟಣೆ ತಿಳಿಸಿದೆ.

ಇದೇ ಸಂದರ್ಭದಲ್ಲಿ ಬರೊಬ್ಬರಿ ೫೦ ವರ್ಷಗಳ ಬಳಿಕ ಅಮ್ಮನವರ ಕ್ಷೇತ್ರದಲ್ಲಿ ಮಗೃಂತಾಯಿ ದೈವದ ನೇಮ ನಡೆಯಲಿದೆ. ಇಂದು ಮುಂಜಾನೆ 4ರಿಂದಲೇ ವೈದಿಕ ಕಾರ್ಯಕ್ರಮಗಳು ಆರಂಭವಾಗುತ್ತವೆ. ಬಳಿಕ ಬೆಳಗ್ಗೆ 7.40ರಿಂದ 8.10ರ ಮೀನ ಲಗ್ನ ಸುಮುಹೂರ್ತ ದಲ್ಲಿ ಬ್ರಹ್ಮಕಲಶಾಭಿಷೇಕ. 11.30ಕ್ಕೆ ಮಹಾಪೂಜೆ, ಮಧ್ಯಾಹ್ನ 12 ಗಂಟೆಗೆ ಪಲ್ಲಪೂಜೆ, ಬ್ರಾಹ್ಮಣ ಸುವಾಸಿನಿ ಆರಾಧನೆ ನಡೆಯಲಿದೆ. ಬ್ರಹ್ಮಕಲಶೋತ್ಸವದ ಪವಿತ್ರ ಅನ್ನಪ್ರಸಾದ ವಿತರಣೆ ಮಧ್ಯಾಹ್ನ 12.30ರಿಂದ ಆರಂಭವಾಗುತ್ತದೆ.

ಕ್ಷೇತ್ರದ ತಂತ್ರಿಗಳಾದ ವೇ|ಮೂ| ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ಪೊಳಲಿ ರಾಜರಾಜೇಶ್ವರೀ ದೇವಿಗೆ 501 ಕಲಶಾಭಿಷೇಕ, ದುರ್ಗಾಪರಮೇಶ್ವರೀ ದೇವಿಗೆ 501 ಕಲಶಾಭಿಷೇಕ ಹಾಗೂ ಪರಿವಾರ ದೇವರುಗಳಿಗೆ 108 ಕಲಶಗಳ ಅಭಿಷೇಕ ನಡೆಯಲಿದೆ.

ಐವತ್ತು ವರ್ಷಗಳ ಮಗೃಂತಾಯಿ ನೇಮ :

ರಾತ್ರಿ ಶ್ರೀ ಕೊಡಮಣಿತ್ತಾಯ ಮತ್ತು ಅರ್ಕುಳ ಶ್ರೀ ಉಳ್ಳಾಕ್ಲು ದೈವಗಳ ನೇಮ ನಡೆಯಲಿದೆ. ಜತೆಗೆ ಅರ್ಧ ಶತಮಾನಕ್ಕೂ ಅಧಿಕ ಕಾಲದ ಬಳಿಕ ಇದೇ ಮೊದಲ ಬಾರಿಗೆ ನಡೆಯುವ ಮಗೃಂತಾಯಿ ದೈವದ ನೇಮವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತರರಾಗಿದ್ದಾರೆ. ದಿನವಿಡೀ ಎರಡು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಸುಮಾರು 5 ಸಾವಿರಕ್ಕೂ ಅಧಿಕ ಸ್ವಯಂಸೇವಕರು ಬ್ರಹ್ಮಕಲಶಾಭಿಷೇಕದ ಯಶಸ್ಸಿಗೆ ದುಡಿಯಲಿದ್ದು, ಎಷ್ಟೇ ಭಕ್ತರು ಆಗಮಿಸಿದರೂ ಅವರಿಗೆ ವ್ಯವಸ್ಥೆಗಳನ್ನು ಕಲ್ಪಿಸಲು ಕ್ಷೇತ್ರ ಸರ್ವಸನ್ನದ್ಧವಾಗಿದೆ. ವಾಹನ ಪಾರ್ಕಿಂಗ್‌ ವ್ಯವಸ್ಥೆಯನ್ನೂ ಅಚ್ಚಕಟ್ಟು ಗೊಳಿಸಲಾಗಿದ್ದು, 22 ಎಕರೆಗೂ ಅಧಿಕ ವಿಸ್ತೀರ್ಣದಲ್ಲಿ ವಾಹನ ನಿಲುಗಡೆಗೆ ಅವಕಾಶವಿದೆ ಎಂದು ಸಮಿತಿಯು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

Comments are closed.