ಕರಾವಳಿ

ಬೆಂಗಳೂರು-ಉಡುಪಿ ಬಸ್ ಟಿಕೆಟ್ ದರ ಹೆಚ್ಚಳ: ಮತದಾನಕ್ಕೆ ಊರಿಗೆ ಬರುವವರ ಜೇಬಿಗೆ ಕತ್ತರಿ!

Pinterest LinkedIn Tumblr

ಉಡುಪಿ: ಲೋಕಸಭಾ ಚುನಾವಣೆಗೆ ಮತದಾನ ಮಾಡೋ ಉತ್ಸಾಹದಲ್ಲಿರುವ ಮತದಾರರಿಗೆ ಖಾಸಗಿ ಬಸ್‌ ಮಾಲಿಕರು ದೊಡ್ಡದೊಂದು ಶಾಕ್ ನೀಡಿದ್ದಾರೆ. ಚುನಾವಣಾ ಆಯೋಗ ಮತದಾನ ದಿನಾಂಕ ಘೋಷಣೆ ಮಾಡುತ್ತಿದ್ದಂತೆ ಖಾಸಗಿ ಬಸ್‌ಗಳು ಟಿಕೆಟ್ ದರ ಹೆಚ್ಚಿಸಿದ್ದು ಮತದಾನಕ್ಕೆ ಊರಿಗೆ ಬರಲು ಜನರು ಹಿಂದೇಟು ಹಾಕುವಂತಾಗಿದೆ. ಬಸ್ ದರ ಏರಿಕೆ ವಿಚಾರದಲ್ಲಿನ ಜನಾಕ್ರೋಷ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ.

(ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಜನರ ಆಕ್ರೋಷದ ಪೋಸ್ಟ್)

ಪ್ರತಿ ಬಾರಿ ಪ್ರಮುಖ ಹಬ್ಬಗಳು, ಸೀಸನ್ ಸಮಯಗಳಲ್ಲಿ ಬಸ್ ದರ ಏಕಾಏಕಿ ದುಪ್ಪಟ್ಟಾಗುವುದು ಮತ್ತು ಹೆಚ್ಚಳವಾಗುವುದು ಮಾಮೂಲಿಯಾಗಿತ್ತು. ಈ ಬಗ್ಗೆ ಹೇಳೋರು ಕೇಳೋರು ಇಲ್ಲವೆಂಬಷ್ಟರ ಮಟ್ಟಿಗೆ ಖಾಸಗಿ ಬಸ್ ಕಂಪೆನಿಗಳು ತಮಗೆ ಬೇಕಾದಂತೆ ದರ ಏರಿಕೆ ಮಾಡುತ್ತಿದ್ದರು. ಈ ಬಾರಿ ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಪ್ರಧಾನಿ ಮೋದಿಯವರು ಇದನ್ನು ಒಂದು ಹಬ್ಬವಾಗಿ ಆಚರಿಸಿ ಎಂದು ದೇಶವಾಸಿಗಳಿಗೆ ಕರೆಕೊಟ್ಟಿದ್ದರು. ಆದರೆ ಈ ಚುನಾವಣ ಹಬ್ಬವನ್ನು ಬಸ್ ಕಂಪೆನಿಯವರು ಏನು ತಿಳಿದರೋ ಗೊತ್ತಿಲ್ಲ. ಚುನಾವಣಾ ದಿನಾಂಕದ ಸಮಯದಲ್ಲಿ ಎರಡು ಮೂರು ಪಟ್ಟು ದರ ಏರಿಕೆ ಮಾಡಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರುನಿಂದ ಉಡುಪಿ, ಕುಂದಾಪುರ ಹಾಗೂ ಕರಾವಳಿ ಸಂಪರ್ಕಿಸುವ ಖಾಸಗಿ ಬಸ್ ದರದಲ್ಲಿ ಏರಿಕೆ ಮಾಡಲಾಗಿದೆ. ಚುನಾವಣೆಯ ಮುನ್ನಾದಿನದ ಬಸ್ ದರದಲ್ಲಿ ಏರಿಕೆ ಮಾಡಲಾಗಿದ್ದು, ಮತದಾನ ಮಾಡಲು ಜನರು ಹಿಂದೇಟು ಹಾಕುವ ಪರಿಸ್ಥಿತಿ ಬಂದೊದಗಿದೆ. ಆನ್ ಲೈನ್ ಮೂಲಕ ಟಿಕೆಟ್ ಬುಕಿಂಗ್ ಮಾಡಲು ಹೊರಟಾಗ ಬಸ್ ದರ ಏರಿಕೆಯಾಗಿದೆ ಎಂದು ಗ್ರಾಹಕರು ತಿಳಿಸಿದ್ದಾರೆ.

ಚುನಾವಣಾ ದಿನಾಂಕದ ಆಸುಪಾಸಿನ ದಿನಗಳಲ್ಲಿ ಮಾತ್ರ ಬೆಲೆ ಏರಿಕೆ ಮಾಡಲಾಗಿದೆ. ಇದರಿಂದ ಸಂಪೂರ್ಣ ಮತದಾನಕ್ಕೆ ಅಡ್ಡಿಯಾಗುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ಸಂಬಂದಪಟ್ಟ ಆಯೋಗ ಕ್ರಮಕೈಗೊಳ್ಳುತ್ತಾ ಕಾದುನೋದಬೇಕಿದೆ.

Comments are closed.