ಕರಾವಳಿ

ಇಂದು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ : ದೇವಳ ಪ್ರವೇಶ ಅವಧಿಯಲ್ಲಿ ಮಾರ್ಪಾಡು

Pinterest LinkedIn Tumblr

ಮಂಗಳೂರು, ಮಾರ್ಚ್ 13: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಇಂದು (ಮಾ.13) ಸಂಭ್ರಮದ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಇದರ ಅಂಗವಾಗಿ ದೇವಸ್ಥಾನದ ಒಳಗೆ ಪೂಜಾ ಕೈಂಕರ್ಯಗಳು ನಡೆಯುವ ಹಿನ್ನೆಲೆಯಲ್ಲಿ ಭಕ್ತರ ದೇಗುಲ ಪ್ರವೇಶ ಸಮಯದಲ್ಲಿ ಕೆಲವೊಂದು ಮಾರ್ಪಾಡು ಮಾಡಲಾಗಿದೆ.

ದೇವಸ್ಥಾನದ ಒಳಗೆ ಬೆಳಗ್ಗೆ 4ರಿಂದ 8.10ರ ವರೆಗೆ ಬ್ರಹ್ಮಕಲಶೋತ್ಸವದ ವೈದಿಕ ವಿಧಿ ವಿಧಾನಗಳು ನಡೆಯಲಿರುವುದರಿಂದ ಬೆಳಿಗ್ಗೆ 10 ಗಂಟೆಯ ತನಕ ದೇವಾಲಯದ ಒಳಗೆ ಭಕ್ತರ ಪ್ರವೇಶ ನಿಯಂತ್ರಿಸಲಾಗಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5.30 ಗಂಟೆ ತನಕ ದೇವರ ದರ್ಶನಕ್ಕೆ ಮುಕ್ತ ಅವಕಾಶವಿದೆ. ಸಂಜೆ ದೇವರಿಗೆ ರಂಗಪೂಜೆ ನಡೆಯಲಿರುವುದರಿಂದ ಸಂಜೆ 5.30ರಿಂದ 8.30 ತನಕ ಭಕ್ತರ ಪ್ರವೇಶವನ್ನು ಮತ್ತೆ ನಿಯಂತ್ರಿಸಲಾಗುತ್ತದೆ, ರಾತ್ರಿ8.30ರ ನಂತರ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಭಕ್ತರು ಇದಕ್ಕೆ ಸಂಪೂರ್ಣ ಸಹಕರಿಸಬೇಕೆಂದು ದೇವಳದ ಆಡಳಿತ ಮಂಡಳಿ ಪ್ರಕಟನೆ ತಿಳಿಸಿದೆ.

ಎಲ್ಇಡಿ ಅಳವಡಿಕೆ:ಬ್ರಹ್ಮಕಲಶೋತ್ಸವದ ಪ್ರಕ್ರಿಯೆಯನ್ನು ವೀಕ್ಷಿಸಲು ಭಕ್ತರಿಗೆ ಅನುಕೂಲವಾಗುವಂತೆ ದೇವಸ್ಥಾನದ ಪರಿಸರದಲ್ಲಿ ಅಲ್ಲಲ್ಲಿ ಒಟ್ಟು 10ಕ್ಕೂ ಅಧಿಕ ಎಲ್ಇಡಿ ಸ್ಕ್ರೀನ್ ಗಳನ್ ಅಳವಡಿಸಲಾಗಿದೆ.

ಬ್ರಹ್ಮಕಲಶೋತ್ಸವ : 2 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ

ಕರಾವಳಿಯ ಪ್ರಮುಖ ಶಕ್ತಿ ಪೀಠಗಳಲ್ಲಿ ಒಂದಾಗಿರುವ ಪೊಳಲಿ ಶ್ರೀ ರಾಜ ರಾಜೇಶ್ವರೀ ದೇವಸ್ಥಾನದಲ್ಲಿ ಮಾ. 13ರಂದು ಬೆಳಗ್ಗೆ 7.40ರಿಂದ ಬ್ರಹ್ಮಕಲಶಾಭಿಷೇಕ ನಡೆಯಲಿದೆ. 2 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಮಾ. 13ರಂದು ಮುಂಜಾನೆ 4ರಿಂದಲೇ ವೈದಿಕ ಕಾರ್ಯಕ್ರಮಗಳು ಆರಂಭವಾಗುತ್ತವೆ. ಬಳಿಕ ಬೆಳಗ್ಗೆ 7.40ರಿಂದ 8.10ರ ಮೀನ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ. 11.30ಕ್ಕೆ ಮಹಾಪೂಜೆ, ಮಧ್ಯಾಹ್ನ 12 ಗಂಟೆಗೆ ಪಲ್ಲಪೂಜೆ, ಬ್ರಾಹ್ಮಣ ಸುವಾಸಿನಿ ಆರಾಧನೆ ನಡೆಯಲಿದೆ. ಬ್ರಹ್ಮಕಲಶೋತ್ಸವದ ಪವಿತ್ರ ಅನ್ನಪ್ರಸಾದ ವಿತರಣೆ ಮಧ್ಯಾಹ್ನ 12.30ರಿಂದ ಆರಂಭವಾಗುತ್ತದೆ.

ಕ್ಷೇತ್ರದ ತಂತ್ರಿಗಳಾದ ವೇ|ಮೂ| ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ಪೊಳಲಿ ರಾಜರಾಜೇಶ್ವರೀ ದೇವಿಗೆ 501 ಕಲಶಾಭಿಷೇಕ, ದುರ್ಗಾಪರಮೇಶ್ವರೀ ದೇವಿಗೆ 501 ಕಲಶಾಭಿಷೇಕ ಹಾಗೂ ಪರಿವಾರ ದೇವರುಗಳಿಗೆ 108 ಕಲಶಗಳ ಅಭಿಷೇಕ ನಡೆಯಲಿದೆ. ಭಕ್ತರಿಗೆ ನಿರಂತರ ಊಟೋಪಚಾರದ ವ್ಯವಸ್ಥೆ ಇದೆ. ಬ್ರಹ್ಮಕಲಶಾಭಿಷೇಕದ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಉಚಿತ ಬಸ್ಸಿನ ವ್ಯವಸ್ಥೆ ಯನ್ನೂ ಕಲ್ಪಿಸಲಾಗಿದೆ.

Comments are closed.