ಮಂಗಳೂರು, ಮಾರ್ಚ್ 12: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನೇರ ಹಣಾಹಣಿ ಇರುವುದು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ. ಕಳೆದ 30 ವರ್ಷಗಳಿಂದಲೂ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರ ಕೋಟೆ. ಈ ಕೋಟೆಯನ್ನು ವಶಪಡಿಸಿಕೊಳ್ಳಲು ‘ಕೈ’ ಪ್ರಯತ್ನ ನಡೆಸುತ್ತಲೇ ಇದೆ. ಈ ನಡುವೆ ಜೆಡಿಎಸ್ ಕೂಡ ಕ್ಷೇತ್ರದಲ್ಲಿ ಬಲಿಷ್ಟ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿದ್ದು,ಈ ಬಾರಿಯ ಲೋಕಸಭಾ ಚುನಾವಣೆಗೆ ದ.ಕ.ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಜೆಡಿಎಸ್‌ನಿಂದ ನಾಲ್ವರು ಆಕಾಂಕ್ಷಿಗಳ ಪಟ್ಟಿಯನ್ನು ಹೈಕಮಾಂಡ್‌ಗೆ ಕಳುಹಿಸಿಕೊಡಲಾಗಿದೆ.
ಸೋಮವಾರ ನಗರದ ಹೊಟೇಲೊಂದರಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ದ.ಕ.ಜಿಲ್ಲಾ ಜೆಡಿಎಸ್ ಅಧ್ಯಕ್ಷ ವಿಟ್ಲ ಮುಹಮ್ಮದ್ ಕುಂಞಿ ಅವರು, .ದಕ್ಷಿಣ ಕನ್ನಡ ಕ್ಷೇತ್ರದಿಂದ ಸ್ಪರ್ಧಿಸಲು ಜೆಡಿಎಸ್ ನಿಂದ 4 ಮಂದಿ ಆಕಾಂಕ್ಷಿಗಳ ಪಟ್ಟಿಯನ್ನು ಪಕ್ಷದ ಹಿರಿಯ ನಾಯಕರಿಗೆ ಕಳುಹಿಸಿಕೊಡಲಾಗಿದೆ. ಹೈಕಮಾಂಡ್‌ನ ಕೋರಿಕೆಯಂತೆ ವಿಧಾನ ಪರಿಷತ್ ಸದಸ್ಯರಾದ ಬಿ.ಎಂ.ಫಾರೂಕ್, ಭೋಜೇಗೌಡ, ಪಕ್ಷದ ರಾಜ್ಯ ಉಪಾಧ್ಯಕ್ಷ ಎಂ.ಬಿ. ಸದಾಶಿವ, ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹಾ ಅವರ ಹೆಸರನ್ನು ಕಳುಹಿಸಿಕೊಡಲಾಗಿದೆ ಎಂದು ಹೇಳಿದರು.
ಈ ಸಂಬಂಧ ಪಕ್ಷದ ಜಿಲ್ಲಾ ಸಮಿತಿಯ ಸಭೆಯಲ್ಲಿ ಚರ್ಚೆ ನಡೆಸಿ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಈ ಕುರಿತು ಅಂತಿಮ ತೀರ್ಮಾನ ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ವಿಶ್ವನಾಥ್ ಅವರು ಮಾಡಲಿದ್ದಾರೆ ಎಂದು ಮುಹಮ್ಮದ್ ಕುಂಞಿ ಸ್ಪಷ್ಟಪಡಿಸಿದರು.
ಒಂದು ವೇಳೆ ಹೈಕಮಾಂಡ್ ಈ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟರೆ ಕಾಂಗ್ರೆಸ್ ಗೆ ಸಂಪೂರ್ಣ ಬೆಂಬಲ ನೀಡಲಾಗುವುದು. ಜೊತೆಗೆ ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಲಾಗುವುದು. ಜಿಲ್ಲೆಯಲ್ಲಿ ಪಕ್ಷದ ಬಲ ಕಡಿಮೆಯಿದೆ. ಆದರೆ, ಮೈತ್ರಿ ಸರಕಾರ ಬಂದ ಬಳಿಕ ಜೆಡಿಎಸ್ ಪಕ್ಷದತ್ತ ಕಾರ್ಯಕರ್ತರಲ್ಲಿ ಉತ್ಸಾಹ ಹಚ್ಚಿದೆ. ಹಾಗಾಗಿ ತಾಲೂಕು ಮತ್ತು ವಾರ್ಡ್ ಮಟ್ಟದಲ್ಲಿ ಪಕ್ಷದ ಬಲವರ್ಧನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವ್, ಪಕ್ಷದ ಪ್ರಮುಖರಾದ ಸುಶೀಲ್ ನೊರೊನ್ಹಾ, ನಾಸರ್ ಯಾದ್ಗಾರ್, ಮನಪಾ ಸದಸ್ಯೆಯಾಗಿದ್ದ ರಮೀಝಾ ನಾಸರ್ ಹಾಗೂ ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಉಪಸ್ಥಿತರಿದ್ದರು.
Comments are closed.