ಕರಾವಳಿ

ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರಕ್ಕೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಭೇಟಿ

Pinterest LinkedIn Tumblr

ಮಂಗಳೂರು : ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಳಕ್ಕೆ ಶನಿವಾರ ಸಂಜೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಭೇಟಿ ನೀಡಿ, ಅಮ್ಮನವರ ದರ್ಶನ ಪಡೆದರು.

ಶನಿವಾರ ಮಂಗಳೂರಿನ ಕೇಂದ್ರ ಮೈದಾನದಲ್ಲಿ ದ.ಕ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಲೋಕಸಭಾ ಕೇಂದ್ರ ವ್ಯಾಪ್ತಿ ಶಕ್ತಿ ಕೇಂದ್ರಗಳ ಪ್ರತಿನಿಧಿಗಳ ಸಮಾವೇಶದಲ್ಲಿ ಪಾಲ್ಗೊಳ್ಳಲು ಮಂಗಳೂರಿಗಾಗಮಿಸಿದ್ದ ಅವರು, ವಾಪಸ್ ದೆಹಲಿಗೆ ತೆರಳುವ ಸಂದರ್ಭ ಪೊಳಲಿ ಕ್ಷೇತ್ರಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಸಚಿವರೊಂದಿಗೆ ಇದ್ದರು. ದೇವಳದ ಹೊರಾಂಗಣದಲ್ಲಿ ಸಚಿವ ರಾಜನಾಥ ಸಿಂಗ್ ಅವರನ್ನು ಬ್ರಹ್ಮಕಲಶ ಸಮಿತಿ ಅಧ್ಯಕ್ಷ, ಶಾಸಕ ಯು.ರಾಜೇಶ್ ನಾಯ್ಕ್, ಗೌರವಾಧ್ಯಕ್ಷ ನಾಗರಾಜ ಶೆಟ್ಟಿ, ಏರ್ಯ ಲಕ್ಷೀನಾರಾಯಣ ಆಳ್ವ, ಶಾಸಕ ಉಮಾನಾಥ ಕೋಟ್ಯಾನ್, ದೇವಳದ ಅನುವಂಶಿಕ ಆಡಳಿತ ಮೊಕ್ತೇಸರರಾದ ಅಮ್ಮುಂಜೆಗುತ್ತು ಡಾ.ಮಂಜಯ್ಯ ಶೆಟ್ಟಿ, ಮೊಕ್ತೇಸರ ತಾರನಾಥ ಆಳ್ವ ಉಳಿಪಾಡಿಗುತ್ತು, ಚೇರಸೂರ್ಯನಾರಾಯಣ ರಾವ್ ಮೊದಲಾದವರು ಸ್ವಾಗತಿಸಿದರು.

ಶ್ರೀದೇವರ ದರ್ಶನ ಪಡೆದ ಸಚಿವರಿಗೆ ಅರ್ಚಕರು, ತಂತ್ರಿವರ್ಯರು ದೇವಳದ ಐತಿಹ್ಯವನ್ನು ಸಂಸ್ಕೃತದಲ್ಲಿ ವಿವರಿಸಿದರಲ್ಲದೆ ಪ್ರಾರ್ಥಿಸಿ ಪ್ರಸಾದವಿತ್ತರು.

ಶಾಸಕ ಯು.ರಾಜೇಶ್ ನಾಯ್ಕ್ ಅವರು ದೇವಳದ ಇತಿಹಾಸ ಪುಸ್ತಕ, ಸ್ಮರಣಿಕೆ ನೀಡಿ ಗೌರವಿಸಿದರು. ತಾಪಂ ಸದಸ್ಯ ಯಶವಂತ ಪೊಳಲಿ, ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ, ಉದಯಕುಮಾರ್ ರಾವ್ ಬಂಟ್ವಾಳ,ಪವನ್ ಕುಮಾರ್ ಶೆಟ್ಟಿ, ಡಾ. ಆಶಾಜ್ಯೋತಿ ರೈ ಮೊದಲಾದವರು ಉಪಸ್ಥಿತರಿದ್ದರು.

ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅಗಮನ ಮತ್ತು ದೇವಳದ ಒಳಾಂಗಣದಲ್ಲಿ ವೈಧಿಕ ವಿಧಿವಿಧಾನಗಳ ಹಿನ್ನಲೆಯಲ್ಲಿ ಶ್ರೀ ಕ್ಷೇತ್ರದ ಸುತ್ತಮುತ್ತ ಐಜಿಪಿ ಅರುಣ್ ಚಕ್ರವರ್ತಿ ಅವರ ನೇತೃತ್ವದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Comments are closed.