ಮಂಗಳೂರು, ಮಾರ್ಚ್.10 : ಪುಲ್ವಾಮಾದಲ್ಲಿ ಘಟನೆ ನಡೆದ ಬಳಿಕ ನಾವು ಮತ್ತೊಮ್ಮೆ ಏರ್ ಸ್ಟ್ರೈಕ್ ಮಾಡಿದೆವು. ಉರಿ,ಪುಲ್ವಾಮಾ ಕಾರ್ಯಾಚರಣೆ ಜತೆಯಲ್ಲೇ ಭಾರತೀಯ ಸೇನೆ ಸದ್ದಿಲ್ಲದೆ ಮೂರನೇ ಸರ್ಜಿಕಲ್ ದಾಳಿ ಮುಗಿಸಿದೆ ಎಂಬ ಅಚ್ಚರಿಯ ಮಾಹಿತಿಯನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಬಹಿರಂಗಪಡಿಸಿದ್ದಾರೆ.
ಶನಿವಾರ ಮಂಗಳೂರಿನ ಕೇಂದ್ರ ಮೈದಾನದಲ್ಲಿ ದ.ಕ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಲೋಕಸಭಾ ಕೇಂದ್ರ ವ್ಯಾಪ್ತಿ ಶಕ್ತಿ ಕೇಂದ್ರಗಳ ಪ್ರತಿನಿಧಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉಗ್ರರ ವಿರುದ್ಧ ಪ್ರತಿದಾಳಿ ನಡೆಸುವ ಮೂಲಕ ಸೇಡು ತೀರಿಸಿಕೊಂಡಿದ್ದೇವೆ. ಜತೆಗೆ ಪುಲ್ವಾಮಾದಲ್ಲಿ ಘಟನೆ ನಡೆದ ಬಳಿಕ ನಾವು ಮತ್ತೊಮ್ಮೆ ಏರ್ ಸ್ಟ್ರೈಕ್ ಮಾಡಿದೆವು. ಎರಡು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ದೇಶದ ಜನತೆಗೆ ಗೊತ್ತು. ಆದರೆ ಇವೆರಡರ ಹೊರತಾಗಿ ಮೂರನೇ ಸರ್ಜಿಕಲ್ ಸ್ಟ್ರೈಕ್ ನಮ್ಮ ಸೇನೆ ಮಾಡಿದೆ. ಆದರೆ ಮೂರನೇ ಏರ್ ಸ್ಟ್ರೈಕ್ ಬಗ್ಗೆ ಯಾವುದೇ ಮಾಹಿತಿಯನ್ನು ನಾನು ನೀಡಲ್ಲ ಎಂದು ಹೇಳಿದರು.
ಉಗ್ರರ ಹುಟ್ಟಡಗಿಸಲು ಮೋದಿ ನೇತ್ರತ್ವದ ಕೇಂದ್ರ ಸರ್ಕಾರ ಬದ್ಧ. ಭಾರತ ಯಾವೂದೇ ದೇಶವನ್ನು ಕೆಣಕುವುದಿಲ್ಲ. ಯಾರಿಗೂ ತೊಂದರೆ ಕೊಡುವುದಿಲ್ಲ. ಆದರೆ ನಮಗೆ ತೊಂದರೆ ಕೊಡುವ ಅವರನ್ನು ಯಾವತ್ತೂ ಬಿಡುವುದಿಲ್ಲ ಎಂದು ಹೇಳಿದರು.
ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಭಾರತ ವಿಶ್ವದ 6ನೇ ರಾಷ್ಟ್ರವಾಗಿದೆ. ಭಾರತವನ್ನು ಶಕ್ತಿ ಶಾಲಿ ರಾಷ್ಟ್ರವಾಗಿ, ತಂತ್ರಜ್ಞಾನ, ಆರ್ಥಿಕವಾಗಿ ಸಮೃದ್ಧ ರಾಷ್ಟ್ರವಾಗಿ ರೂಪಿಸುವುದು ಕೇಂದ್ರ ಸರಕಾರದ ನಿಲುವಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.
Comments are closed.