ಕರ್ನಾಟಕ

ರೌಡಿಶೀಟರ್ ಲಕ್ಷ್ಮಣ್‌ ಕೊಲೆಯ ಹಿಂದೆ ಹೆಣ್ಣಿನ ನೆರಳು!

Pinterest LinkedIn Tumblr


ಬೆಂಗಳೂರು : ಮೈಸೂರು ಸಾಬೂನು ಕಂಪನಿ ರಸ್ತೆಯಲ್ಲಿ ಗುರುವಾರ ನಡೆದಿದ್ದ ರೌಡಿ ಲಕ್ಷ್ಮಣ್‌ ಕೊಲೆ ಪ್ರಕರಣದ ತನಿಖೆಯು ಸಿಸಿಬಿಗೆ ವರ್ಗವಾಗಿದ್ದು, ಈ ಹತ್ಯೆಯಲ್ಲಿ ಹೆಣ್ಣಿನ ನೆರಳಿದೆ ಎಂದು ಪೊಲೀಸರು ಬಲವಾಗಿ ಅನುಮಾನ ವ್ಯಕ್ತಪಡಿಸಿದ್ದಾರೆ.

ಇತ್ತೀಚಿಗೆ ಬ್ಯಾಡರಹಳ್ಳಿ ಠಾಣೆ ರೌಡಿಶೀಟರ್‌ ಹೇಮಂತ್‌ ಅಲಿಯಾಸ್‌ ಹೇಮಿ ಪ್ರೇಯಸಿ ಜತೆಗೆ ಲಕ್ಷ್ಮಣ್‌ ಸ್ನೇಹ ಮಾಡಿದ್ದ. ಈ ವಿಷಯವಾಗಿ ಹೇಮಂತ್‌ ಮತ್ತು ಲಕ್ಷ್ಮಣ್‌ ನಡುವೆ ದ್ವೇಷ ಬೆಳೆದಿತ್ತು. ಈ ಹಗೆತನವೂ ಸಹ ಕೊಲೆಗೆ ಕಾರಣವಾಗಿದೆ ಎನ್ನಲಾಗಿದ್ದು, ಹತ್ಯೆಗೆ ಬಳಸಲಾದ ಸ್ಕಾರ್ಪಿಯೋ ಕಾರು ಸಹ ಹೇಮಂತ್‌ಗೆ ಸೇರಿದ್ದಾಗಿದೆ ಎಂದು ಮೂಲಗಳು ಹೇಳಿವೆ.

ಇದಕ್ಕೆ ಪೂರಕ ಎನ್ನುವಂತೆ ತುಮಕೂರು ರಸ್ತೆಯ ಆರ್‌.ಜಿ.ಲಾಡ್ಜ್‌ನಲ್ಲಿ ಕೊಠಡಿ ಕಾಯ್ದಿರಿಸಿ ಮರಳುವಾಗ ಲಕ್ಷ್ಮಣ್‌ ಹತ್ಯೆ ನಡೆದಿದೆ. ಮೊದಲಿನಿಂದಲೂ ಸ್ತ್ರೀಲೋಲನಾದ ಲಕ್ಷ್ಮಣನಿಗೆ ಹಲವು ಮಹಿಳೆಯರ ಜತೆ ಸಖ್ಯವಿತ್ತು. ಈ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಆತ ಹಣ ನೀಡಿರುವುದಕ್ಕೆ ಪುರಾವೆಗಳು ಸಿಕ್ಕಿವೆ ಎಂದು ಉನ್ನತ ಪೊಲೀಸ್‌ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಅಲ್ಲದೆ, ಲಕ್ಷ್ಮಣ್‌ ಕೊಲೆಯಲ್ಲಿ ಪಶ್ಚಿಮ ವಿಭಾಗದ ಹಳೆ ಮತ್ತು ಹೊಸ ತಲೆಮಾರಿನ ರೌಡಿಗಳು ಕೈಜೋಡಿಸಿರುವ ಸಾಧ್ಯತೆಗಳಿವೆ. ಹುಡುಗಿ ವಿಚಾರವಾಗಿ ಲಕ್ಷ್ಮಣ್‌ ಮೇಲೆ ದ್ವೇಷ ಸಾಧಿಸುತ್ತಿದ್ದ ಹೇಮಂತ್‌ಗೆ ಕುಖ್ಯಾತ ರೌಡಿ ದಿ.ಮಚ್ಚಾ ಮಂಜನ ಶಿಷ್ಯ ಪಾಪರೆಡ್ಡಿಪಾಳ್ಯದ ಶ್ರೀಕಂಠ ಹಾಗೂ ಕುರಿ ಕೃಷ್ಣಮೂರ್ತಿ ಸಹಚರರು ಸಹ ಸಾಥ್‌ ನೀಡಿರಬಹುದು. ಹೀಗಾಗಿ ಕೊಲೆ ಪ್ರಕರಣದ ತನಿಖೆಯನ್ನು ಮಹಾಲಕ್ಷ್ಮೇ ಲೇಔಟ್‌ ಪೊಲೀಸರಿಂದ ಸಿಸಿಬಿಗೆ ಆಯುಕ್ತ ಟಿ.ಸುನೀಲ್‌ ಕುಮಾರ್‌ ಶುಕ್ರವಾರ ವರ್ಗಾಯಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಲೋಕ್‌ ಕುಮಾರ್‌ ತಂಡ ಭೇಟಿ:

ಸಿಸಿಬಿಗೆ ಲಕ್ಷ್ಮಣ್‌ ಕೊಲೆ ಪ್ರಕರಣ ವರ್ಗಗೊಂಡ ಬೆನ್ನಲ್ಲೆ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ ಅವರು, ಬೆಳಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮಹಾಲಕ್ಷ್ಮೇ ಲೇಔಟ್‌ ಠಾಣೆಗೆ ತೆರಳಿದ ಹೆಚ್ಚುವರಿ ಆಯುಕ್ತರು, ಪ್ರಾಥಮಿಕ ಹಂತದ ತನಿಖೆ ನಡೆಸಿದ ಉತ್ತರ ವಿಭಾಗದ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು.

ಲಾಡ್ಜ್‌ನಲ್ಲಿ ರೂಮ್‌ ಬುಕ್‌ ಮಾಡಿದ್ದ!

ತುಮಕೂರು ರಸ್ತೆಯ ಆರ್‌.ಜಿ.ಲಾಡ್ಜ್‌ನಲ್ಲಿ ಗುರುವಾರ 12ರ ಸುಮಾರಿಗೆ ತೆರಳಿದ ಲಕ್ಷ್ಮಣ, ಅಲ್ಲಿ ತನ್ನ ಹೆಸರಿನಲ್ಲೇ ಕೊಠಡಿಯೊಂದನ್ನು ಕಾಯ್ದಿರಿಸಿ ಬಳಿಕ ಪರಿಚಿತ ಮಹಿಳೆಗೆ ಕರೆ ಮಾಡಿರುವ ಸಂಗತಿ ತನಿಖೆಯಲ್ಲಿ ಗೊತ್ತಾಗಿದೆ ಎಂದು ಮೂಲಗಳು ಹೇಳಿವೆ.

ಅದೇ ಲಾಡ್ಜ್‌ನಲ್ಲಿ ಬುಧವಾರ ತನ್ನ ಕಾರು ಚಾಲಕನ ಹೆಸರಿನಲ್ಲಿ ಆತ ಕೊಠಡಿ ಬುಕ್‌ ಮಾಡಲು ಯತ್ನಿಸಿದ್ದ. ಆದರೆ ಲಾಡ್ಜ್‌ ಸಿಬ್ಬಂದಿ ಗುರುತಿನ ಚೀಟಿ ಕೇಳಿದ್ದರು. ಹೀಗಾಗಿ ಕೊಠಡಿಗೆ ಕಾಯ್ದಿರಿಸದೆ ಮರಳಿದ ಲಕ್ಷ್ಮಣ, ಗುರುವಾರ ಮತ್ತೆ ಲಾಡ್ಜ್‌ಗೆ ಒಬ್ಬನೇ ಹೋಗಿ ರೂಮ್‌ ಬುಕ್‌ ಮಾಡಿ ಬಂದಿದ್ದ. ಎರಡ್ಮೂರು ದಿನಗಳಿಂದಲೇ ಲಕ್ಷ್ಮಣ್‌ ಬೆನ್ನಹತ್ತಿದ್ದ ಹಂತಕರಿಗೆ ಲಾಡ್ಜ್‌ನಲ್ಲಿ ಕೊಠಡಿಗೆ ಪಡೆದಿರುವ ಸುಳಿವು ಸಿಕ್ಕಿತು. ಕೊನೆಗೆ ಎದುರಾಳಿಗಳು ಹತ್ಯೆ ಸಂಚು ಕಾರ್ಯಗತಗೊಳಿಸಿರುವ ಸಾಧ್ಯತೆಗಳಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Comments are closed.