ಕರಾವಳಿ

ಮಂಗಳೂರಿಗೆ ಬಂದ ಇಟೆಲಿ ಮೂಲದ ಐಷಾರಾಮಿ ಎಂಎಸ್‌ಸಿ ಲಿರಿಕಾ ಪ್ರವಾಸಿ ಹಡಗು

Pinterest LinkedIn Tumblr

ಪಣಂಬೂರು: ಇಟೆಲಿ ಮೂಲದ ಎಂಎಸ್‌ಸಿ ಲಿರಿಕಾ ಪ್ರವಾಸಿ ಹಡಗು ಗುರುವಾರ ನವಮಂಗಳೂರು ಬಂದರಿಗೆ ಆಗಮಿಸಿತು. ಬೆಳಗ್ಗೆ ಎನ್‌ಎಂಪಿಟಿಗೆ ಆಗಮಿಸಿದ ಹಡಗು ಸಂಜೆಯವರೆಗೆ ಬಂದರಿನಲ್ಲಿದ್ದು, ಬಳಿಕ ಹಡಗಿನಲ್ಲಿದ್ದ ಪ್ರವಾಸಿಗರೊಂದಿಗೆ ಗೋವಾಕ್ಕೆ ಪ್ರಯಾಣ ಬೆಳೆಸಿತು. 1,831 ಪ್ರವಾಸಿಗರು ಹಾಗೂ 742 ಸಿಬಂದಿ ಈ ಐಷಾರಾಮಿ ಹಡಗಿನಲ್ಲಿದ್ದಾರೆ.

ನವ ಮಂಗಳೂರು ಬಂದರು ತೀರಕ್ಕೆ ವರ್ಷದಲ್ಲಿ ನೂರಾರು ಸಂಖ್ಯೆಯ ಪ್ರವಾಸಿ ಹಡಗುಗಳ ಆಗಮನವಾಗುತ್ತದೆ. ವಿದೇಶಿ ಪ್ರವಾಸಿಗರು ಈ ಪ್ರವಾಸಿ ಹಡಗುಗಳ ಮೂಲಕ ಭಾರತದ ವಿವಿಧ ಬಂದರು ಪ್ರದೇಶಗಳ ಮೂಲಕ ಇಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಇಲ್ಲಿನ ಸೌಂದರ್ಯವನ್ನು ಕಣ್ತುಂಬಿಸಿಕೊಂಡು ಹೋಗುತ್ತಾರೆ. ಅಂತಹ ಒಂದು ಐಷಾರಾಮಿ ಸೌಲಭ್ಯಗಳಿಂದ ಕೂಡಿದ ಪ್ರವಾಸಿ ಹಡಗೊಂದು ಗುರುವಾರ ಮಂಗಳೂರಿನ ಕಡಲ ತೀರಕ್ಕೆ ಪ್ರವಾಸಿಗರನ್ನು ಹೊತ್ತು ಬಂದಿತ್ತು.

ಮಸ್ಕತ್‌ನಿಂದ ಪ್ರಯಾಣ ಬೆಳೆಸಿ ಮಂಗಳೂರಿಗೆ ಆಗಮಿಸಿದ ಲಿರಿಕಾ ಹಡಗಿನಲ್ಲಿದ್ದ ಪ್ರಯಾಣಿಕರು ಮಂಗಳೂರು, ಮೂಡುಬಿದಿರೆ, ಕಾರ್ಕಳ ಸಹಿತ ವಿವಿಧ ಪ್ರವಾಸಿ ಸ್ಥಳಗಳನ್ನು, ದೇವಸ್ಥಾನಗಳನ್ನು, ಶಾಪಿಂಗ್‌ ಮಾಲ್‌ಗಳನ್ನು ಸಂದರ್ಶಿಸಿದರು. ಮಂಗಳೂರು ಬಂದರಿನಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ ಲಂಗರು ಹಾಕಿದ್ದ ವೇಳೆ ಹಡಗಿನಲ್ಲಿದ್ದ ಕೆಲ ಪ್ರವಾಸಿಗರು ಇಲ್ಲಿನ ಖಾಸಗಿ ವಾಹನಗಳ ಮೂಲಕ ಸ್ಥಳೀಯ ದೇವಸ್ಥಾನಗಳಿಗೆ ಭೇಟಿ ನೀಡಿದರು. ಹಡಗಿನಲ್ಲಿದ್ದ ಮತ್ತೆ ಕೆಲವು ಪ್ರವಾಸಿಗರು ಹಡಗಿನ ತೆರೆದ ಮೇಲ್ಛಾವಣಿಯಲ್ಲಿನ ಸ್ವಿಮ್ಮಿಂಗ್ ಪೂಲ್‌ನಲ್ಲಿ ನೀರಿನಲ್ಲಿ ಆಟವಾಡುತ್ತಾ, ಬಿಸಿಲಿಗೆ ಮೈಯೊಡ್ಡುತ್ತಾ, ಪುಸ್ತಕಗಳನ್ನು ಓದುತ್ತಾ ಮಂಗಳೂರಿನ ಕಡಲ ತೀರದ ಸೌಂದರ್ಯವನ್ನು ಕಣ್ತುಂಬಿಕೊಂಡರು.

2100 ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿರುವ ಎಂಎಸ್‌ಸಿ ಲಿರಿಕಾ, ಮಂಗಳೂರು ಬಂದರಿನಿಂದ ಗೋವಾ ಮೂಲಕ ಮುಂಬೈ ಬಂದರಿಗೆ ಭೇಟಿ ನೀಡಿ ಬಳಿಕ ಮಸ್ಕತ್‌ಗೆ ಹಿಂತಿರುಗಿ ಅಲ್ಲಿಂದ ತನ್ನ ಮುಂದಿನ ಪ್ರಯಾಣ ಬೆಳೆಸಲಿದೆ.ಐಷಾರಾಮಿ ಹಡಗು ಬಹು ಮಹಡಿ ಹೊಂದಿದ್ದು, ಲಾಂಜ್‌, ಈಜುಕೊಳ, ಜಿಮ್‌, ಕಾಫಿ ಸೆಂಟರ್‌, ಹೊಟೇಲ್‌, ಕ್ಯಾಸಿನೋ, ಅಮ್ಯೂಸ್‌ಮೆಂಟ್‌ ಪಾರ್ಕ್‌ ಸಹಿತ ಎಲ್ಲ ಸೌಲಭ್ಯ ಹೊಂದಿದೆ.

ಎಂಎಸ್‌ಸಿ ಲಿರಿಕಾ ಹಡಗು ಕೆಲ ಗಂಟೆಗಳ ಕಾಲ ಪಣಂಬೂರಿನ ಎನ್‌ಎಂಪಿಟಿಯಲ್ಲಿ ಲಂಗರು ಹಾಕಿದ್ದ ಸಂದರ್ಭ ಎಂಎಸ್‌ಸಿ ಸಂಸ್ಥೆಯು ಈ ಪ್ರವಾಸಿ ಹಡಗಿನ ವೀಕ್ಷಣೆಗೆ ಪಾಸ್ ವ್ಯವಸ್ಥೆಯ ಮೂಲಕ ಅವಕಾಶ ಕಲ್ಪಿಸಿತ್ತು. ಕೆಲ ದಿನಗಳ ಮುಂಚಿತವಾಗಿಯೇ ಗುರುತು ಪತ್ರದ ಮೂಲಕ ವೀಕ್ಷಣೆಗೆ ಪ್ರವೇಶವನ್ನು ಕಾಯ್ದಿರಿಸಿಕೊಳ್ಳಲಾಗಿತ್ತು. ವೀಕ್ಷಕರಿಗೆ ಮಾತ್ರವಲ್ಲದೆ, ಹಡಗಿನ ಪ್ರವಾಸಿಗರಿಗೂ ಪಣಂಬೂರಿನ ಎನ್‌ಎಂಪಿಟಿ ಪ್ರವೇಶ ದ್ವಾರದಿಂದ ಹಿಡಿದು ಹಡಗಿನ ಪ್ರವೇಶ ದ್ವಾರದವರೆಗೂ ನಾಲ್ಕು ಹಂತಗಳಲ್ಲಿ ತಪಾಸಣೆ, ಪರಿಶೀಲನೆಯ ಮೂಲಕವೇ ಒಳಗೆ ಪ್ರವೇಶ ಹಾಗೂ ನಿರ್ಗಮನಕ್ಕೆ ಅವಕಾಶ ನೀಡಲಾಗಿತ್ತು.

Comments are closed.