ಕರಾವಳಿ

ಇಂದಿನಿಂದ ಬೋಳೂರಿನಲ್ಲಿ ಅಮೃತ ಸಂಗಮ – 2019 : ಮಂಗಳೂರಿಗೆ ಆಗಮಿಸಿದ ಅಮ್ಮ

Pinterest LinkedIn Tumblr

ಮಂಗಳೂರು, ಮಾರ್ಚ್ 08: ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿ (ಅಮ್ಮ)ಯವರ ಮಂಗಳೂರು ಕಾರ್ಯಕ್ರಮ ಮಾರ್ಚ್ 8 ಮತ್ತು ಮಾರ್ಚ್ 9ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ಅವರು ಗುರುವಾರ ಸಂಜೆ ಮಂಗಳೂರು ಬೋಳೂರಿನ ಸುಲ್ತಾನ್ ಬತ್ತೇರಿ ಅಮೃತ ವಿದ್ಯಾಲಯಂ ಮಠಕ್ಕೆ ಆಗಮಿಸಿದ್ದಾರೆ.

ಈ ವೇಳೆ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರನ್ನು ಬೋಳೂರಿನ ಮಾತಾ ಅಮೃತಾನಂದಮಯಿ ಮಠದ ಮಂಗಳಾಮೃತ ಚೈತನ್ಯ, ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಅಧ್ಯಕ್ಷ ಪ್ರಸಾದ್‌ರಾಜ್‌ ಕಾಂಚನ್‌, ಸಮಿತಿಯ ಪ್ರಮುಖರಾದ ಡಾ| ಜೀವರಾಜ್‌ ಸೊರಕೆ, ಡಾ| ಸನತ್‌ ಹೆಗ್ಡೆ, ಶ್ರುತಿ ಹೆಗ್ಡೆ, ವಾಮನ್‌ ಕಾಮತ್‌, ಸಂತೋಷ್‌ ಅಮೀನ್‌, ಮಾದವ ಸುವರ್ಣ ಸ್ವಾಗತಿಸಿದರು.

ಬಳಿಕ ನಗರದ ಸುಲ್ತಾನ್ ಬತ್ತೇರಿಯ ಅಮೃತ ವಿದ್ಯಾಲಯಂ ಮೈದಾನದಲ್ಲಿ ನಿರ್ಮಿಸಿರುವ ಬೃಹತ್ ವೇದಿಕೆಯಲ್ಲಿ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರು ಸತ್ಸಂಗದಲ್ಲಿ ಭಾಗವಹಿಸಿ ಆಶೀರ್ವಚಿಸಿದರು. ಇದೇ ವೇಳೆ ಅವರು ಆಗಮಿಸಿದ ಭಕ್ತಾಧಿಗಳಿಗೆ ಪ್ರಸಾದ ವಿತರಿಸಿದರು.

ಇಂದು ಅಮೃತ ಸಂಗಮ -2019

ಅಮೃತ ವಿದ್ಯಾಲಯಂ ಮೈದಾನದಲ್ಲಿ ಮಾ.8 ಮತ್ತು ಮಾ. 9ರಂದು ನಡೆಯಲಿರುವ ಅಮೃತ ಸಂಗಮ- 2019ರಲ್ಲಿ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರು ಪಾಲ್ಗೊಳ್ಳಲಿದ್ದಾರೆ. ಎರಡೂ ದಿನ ಪ್ರವಚನ, ಸತ್ಸಂಗ, ಭಜನೆ, ಧ್ಯಾನ, ಮಾನಸ ಪೂಜೆ ನಡೆಯಲಿದೆ.

ಮಾರ್ಚ್ 8ರಂದು ರಂದು ಬೆಳಗ್ಗೆ 10ಕ್ಕೆ ಸಭಾ ಕಾರ್ಯಕ್ರಮವಿದ್ದು ಅಂದು ವಿಕಲ ಚೇತನರಿಗಾಗಿ ಗಾಲಿ ಕುರ್ಚಿಗಳ ವಿತರಣೆ, ಸ್ಕಾಲರ್ ಶಿಪ್ ವಿತರಣೆ, ಅರ್ಹ ಫಲಾನುಭವಿಗಳಿಗೆ ಪಿಂಚಣಿ ವಿತರಣೆ, ಅಮಲ ಭಾರತ (ಸ್ವಚ್ಛ ಭಾರತ) ಅಭಿಯಾನದ ಅಂಗವಾಗಿ ಆಧುನಿಕ ಮಾದರಿಯ ಶೌಚಾಲಯ ನಿರ್ಮಾಣಕ್ಕೆ ಚಾಲನೆ, ಅಮೃತ ಸಂಗಮ- ಸ್ಮರಣ ಸಂಚಿಕೆ ಬಿಡುಗಡೆ, ಅಮೃತ ಶ್ರೀ ಯೋಜನೆಯ ಮಹಿಳಾ ಸ್ವಾವಲಂಬಿ, ಸ್ವ ಉದ್ಯೋಗ ಯೋಜನೆಯ ಅಂಗವಾಗಿ ಹೊಲಿಗೆ ಯಂತ್ರ ವಿತರಣೆ, ಅಮೃತ ಶ್ರೀ ಯೋಜನೆಯ ಸದಸ್ಯರಿಗೆ ಸೀರೆ ವಿತರಣೆ ನಡೆಯಲಿದೆ.

ಎಲ್ಲರಿಗೂ ಅಮ್ಮನವರ ದರ್ಶನ :

ಇಂದು ಬೆಳಗ್ಗೆಯಿಂದ ಎಲ್ಲರಿಗೂ ಅಮ್ಮನವರ ಅನುಗ್ರಹ ದರ್ಶನವಿರುತ್ತದೆ. ಅಮ್ಮನ ದರ್ಶನ ಪಡೆಯಲು ಯಾವುದೇ ಶುಲ್ಕ ಇರುವುದಿಲ್ಲ. ಅಗತ್ಯವಾದ ಟೋಕನ್ ಗಳನ್ನು ಸ್ಥಳದಲ್ಲೇ ಉಚಿತವಾಗಿ ನೀಡಲಾಗುತ್ತದೆ. ಸಕಾಲದಲ್ಲಿ ಆಗಮಿಸಿ ಆಸೀನರಾಗಿರುವ ವರೆಲ್ಲರಿಗೂ ಅವರು ಆಗಮಿಸಿದ ಸಮಯಾನುಸಾರದಂತೆ ದರ್ಶನ ಪಡೆಯಲು ಅವಕಾಶವಿರುತ್ತದೆ.ಸಾರ್ವಜನಿಕರ ಅಭಿಪ್ರಾಯದಂತೆ ಇನ್ನಷ್ಟು ಸರಳವಾಗಿ ಅಮ್ಮನ ದರ್ಶನದ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸೇವಾ ಸಮಿತಿಯ ಅಧ್ಯಕ್ಷ ಪ್ರಸಾದರಾಜ್ ಕಾಂಚನ್ ತಿಳಿಸಿದ್ದಾರೆ.

Comments are closed.