ಕರಾವಳಿ

ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನ :ಶ್ರೀ ಕ್ಷೇತ್ರಕ್ಕೆ ಹರಿದು ಬರುತ್ತಿದೆ ಹೊರೆಕಾಣಿಕೆ

Pinterest LinkedIn Tumblr

ಪೊಳಲಿ : ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಸಂಭ್ರಮ ಮನೆಮಾಡಿದೆ. ಮಾ.4ರಿಂದ 13ರವರೆಗೆ ವೈವಿಧ್ಯಮಯ ವೈದಿಕ-ಸಾಂಸ್ಕೃತಿಕ-ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಬ್ರಹ್ಮಕಲಶೋತ್ಸವ ಸಂಪನ್ನಗೊಳ್ಳಲಿದೆ.

ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಜಿಲ್ಲೆಯ ನಾನಾ ಭಾಗಗಳಿಂದ ಹಸಿರುವಾಣಿ ಹೊರೆಕಾಣಿಕೆ ಹರಿದುಬರುತ್ತಿದೆ. ಅಂತೆಯೇ ಪುತ್ತಿಗೆ ಸೋಮನಾಥೇಶ್ವರ ದೇವಸ್ಥಾನ ಹಾಗೂ ಮೂಡಬಿದಿರೆಯ ಚೌಟರಸರ ಅರಮನೆಯಿಂದ ಹೊರೆಕಾಣಿಗೆ ಆಗಮಿಸಿದ್ದು, ದೇವಸ್ಥಾನದ ವತಿಯಿಂದ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಪುತ್ತಿಗೆ ಹಾಗು ಚೌಟರಸರರಿಗೂ ಪೊಳಲಿಗೆ ಒಂದು ರೀತಿಯ ವಿಶೇಷ ಸಂಬಂಧವಿದೆ. ಯಾಕೆಂದರೆ ಪೊಳಲಿಯ ಜಾತ್ರೆಯ ದಿನ ನಿಗದಿಪಡಿಸುವ ಮುನ್ನ ಪೊಳಲಿಯ ನಟ್ಟೋಜರು ಪುತ್ತಿಗೆ ಜೋಯಿಸರಲ್ಲಿಗೆ ತೆರಳಿ ದಿನ ನಿಗದಿ ಮಾಡಿ ಬರುತ್ತಾರೆ. ಮರುದಿನ ಕುದಿ ಕರೆಯುವ ಮುನ್ನ ಆರಾಡದ ದಿನಗಳನ್ನು ಸೇರಿಗಾರನ ಕಿವಿಯಲ್ಲಿ ಉಸುರಿ, ಸೇರಿಗಾರರು ಕುದಿ ಕರೆಯುವ ಪಂಬದರಲ್ಲಿ ಹೇಳುತ್ತಾರೆ. ಪಂಬದರು ಡಂಗೂರದ ರೀತಿಯಲ್ಲಿ ದೇವಸ್ಥಾನದಲ್ಲಿ ನಡೆಯಲಿರುವ ಜಾತ್ರಾದಿನಗಳ ಬಗ್ಗೆ ಹೇಳಿಕೊಂಡು ಬರುತ್ತಿರುವುದು ವಿಶೇಷವಾಗಿದೆ.

ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆಯುವ ವೈದಿಕ ಕಾರ್ಯಕ್ರಮಗಳು ಈಗಾಗಲೇ ಆರಂಭಗೊಂಡಿದ್ದು ನಿನ್ನೆ ಬೆಳಗ್ಗಿನಿಂದ ಅಥರ್ವಶೀರ್ಷ ಗಣಯಾಗ, ಶ್ರೀ ದುರ್ಗಾಪರಮೇಶ್ವರಿ ಮತ್ತು ಸಹಪರಿವಾರ ರಾಜರಾಜೇಶ್ವರಿ ದೇವರುಗಳಿಗೆ ಕ್ಷಾಲಾನಾದಿ ಬಿಂಬಶುದ್ಧಿ, ಶಾಂತಿಹೋಮಗಳು, ಪ್ರಾಯಶ್ಚಿತ ಹೋಮಗಳು, ಹೋಮ ಕಲಶಾಭಿಷೇಕ ನಡೆಸಿ ಮಧ್ಯಾಹ್ನ ಮಹಾಪೂಜೆ ನಡೆಸಲಾಯಿತು. ಸಂಜೆ ಅಂಕರಾರೋಹಣೆ, ಭದ್ರಕಾಳಿಗೆ ಮಂಡಲಪೂಜೆ, ಮಹಾಪೂಜೆ ಹಾಗು ಕುಂಡ ಶುದ್ಧಾದಿ ಪ್ರಕ್ರಿಯೆಗಳು ನಡೆದವು.

ಬೆಳಗ್ಗೆ 6ರಿಂದ ಪುಣ್ಯಾಹ, ಗಣಪತಿ ಹೋಮ, ವಿಷ್ಣುಸಹಸ್ರನಾಮ ಹೋಮ, ಸಪರಿವಾರ ಶ್ರೀರಾಜರಾಜೇಶ್ವರಿ ದೇವರುಗಳಿಗೆ ಕ್ಷಾಲನಾದಿ ಬಿಂಬಶುದ್ಧಿ, ಸ್ಕಂದಪ್ರೋಕ್ತ ಹೋಮ, ವಿಘ್ನಪ್ರೋಕ್ತಹೋಮ, ದ್ವಾರಶಾಂತಿ, ಭದ್ರಕಾಳಿ ದೇವರಿಗೆ ವಿಶೇಷ ಶಾಂತಿಹೋಮ, ಹೋಮ ಕಲಶಾಭಿಷೇಕ, ಅಂಕುರ ಪೂಜೆ ಮಧ್ಯಾಹ್ನ ಮಹಾಪೂಜೆ. ಸಾಯಂಕಾಲ 5ರಿಂದ ದುರ್ಗಾಪೂಜೆ, ಕುಂಡಶುದ್ಧಾದಿಗಳು, ಅಂಕುರ ಪೂಜೆ ಹಾಗು ಮಹಾಪೂಜೆ ನಡೆಯಿತು.

ವೇದಿಕೆಯಲ್ಲಿ ಬೆಳಿಗ್ಗೆ  ಮೇಘ ಸಾಲಿಗ್ರಾಮ ಹಾಗು ಬಳಗದವರಿಂದ ಸ್ಯಾಕ್ಸೋಫೋನ್ ವಾದನ, ಶ್ರೀಮಂಜುನಾಥೇಶ್ವರ ಕಾಳಭೈರವ ಭಜನಾ ಮಂದಿರ ಮಟ್ಟಿ ಮಳಲಿ ತಂಡದಿಂದ ಭಜನೆ,  ಶ್ರೀದೇವಿ ಭಜನಾ ಮಂಡಳಿ ಮೂಡುಶೆಡ್ಡೆ ತಂಡದಿಂದ ಭಜನೆ, ಸಂಜೆ 4ರಿಂದ ಶ್ರೀಗಣೇಶ್ ಮತ್ತು ಪಾಂಡುರಂಗ ಭಜನಾ ಮಂಡಳಿ ವಾಮದಪದವು ತಂಡದಿಂದ ಭಜನೆ ನಡೆಯಿತು.

ಶ್ರೀರಾಜರಾಜೇಶ್ವರಿ ವೇದಿಕೆಯಲ್ಲಿ 11.30ರಿಂದ ರಾಜೇಶ್ ಪೊಳಲಿ ಅವರಿಂದ ಸ್ಯಾಕ್ಸೋಫೋನ್ ವಾದನ, ಮಧ್ಯಾಹ್ನ 12.30ರಿಂದ ಶಿವಾಂಕಂ ಬೆಂಗಳೂರು ಅವರಿಂದ ಭರತನಾಟ್ಯ, ಮಧ್ಯಾಹ್ನ 1.30ರಿಂದ ಅತ್ರೇಯಿ ಕೃಷ್ಣ ಕಾರ್ಕಳ ಇವರಿಂದ ಕರ್ಣಾಟಕ ಸಂಗೀತ, 2.30ರಿಂದ ಅಶ್ವಿನಿ ಕುಂಡದಕುಳಿ ಅವರಿಂದ ಯಕ್ಷಗಾನ ನಡೆಯಿತು.

ಸಂಜೆ 7ರಿಂದ ಫಯಾಸ್‌ಖಾನ್ ಮತ್ತು ಬಳಗ ಬೆಂಗಳೂರು ಇವರಿಂದ ಹಿಂದೂಸ್ಥಾನಿ ಗಾಯನ, ರಾತ್ರಿ 9ರಿಂದ ನೃತ್ಯ ನಿಕೇತನ ಕೊಡವೂರು ಪ್ರಸ್ತುತದ ನೃತ್ಯ ವೈವಿಧ್ಯ-ನಿರ್ದೇಶನ ವಿದ್ವಾನ್ ಸುದೀರ್ ರಾವ್ ಕೊಡವೂರು, ರಾತ್ರಿ 10ರಿಂದ ಶ್ರೀ ಭಗವತೀ ತೀಯಾ ಸೇವಾ ಸಮಿತಿ ಪೊಳಲಿ ಇವರಿಂದ ಯಕ್ಷಗಾನ ನಡೆಯಿತು.

ಧಾರ್ಮಿಕ ಕಾರ್ಯಕ್ರಮ:

ಮಂಗಳವಾರ ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀಗುರುದೇವದತ್ತ ಸಂಸ್ಥಾನಂ ಶ್ರೀಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

Comments are closed.