ಕರಾವಳಿ

ಯಕ್ಷಗಾನ ಸೇವೆಯಿಂದ ಧರ್ಮ ಜಾಗೃತಿ : ಲಕ್ಷ್ಮೀನಾರಾಯಣ ಆಸ್ರಣ್ಣ

Pinterest LinkedIn Tumblr

ಮಂಗಳೂರು: ‘ಯಕ್ಷಗಾನವು ಪುರಾಣ-ಪುಣ್ಯಕಥೆಗಳನ್ನು ಜನ ಸಾಮಾನ್ಯರಿಗೆ ಪರಿಚಯಿಸುವ ಪ್ರಸಿದ್ಧ ಕಲೆ. ಕಲಾವಿದರಾಗಿ, ಕಲಾಪೋಷಕರಾಗಿ ಯಕ್ಷಗಾನ ಸೇವೆಮಾಡುವವರಿಂದ ಸಮಾಜದಲ್ಲಿ ಧರ್ಮ ಜಾಗೃತಿಯುಂಟಾಗುವುದಲ್ಲದೆ , ದೈವಾನುಗ್ರಹವೂ ಲಭಿಸುವುದು’ ಎಂದು ಕಟೀಲು ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದ್ದಾರೆ.

ಶ್ರೀದೇವಿ ಪ್ರಸಾದ್ ಕೂಳೂರು ಇವರು ಕೂಳೂರು ಗೋಪಿನಿಲಯ ವಠಾರದಲ್ಲಿ 55 ನೇ ಯಕ್ಷ ಸಂಭ್ರಮ ಸೇವೆ ಬಯಲಾಟದ ಸಂದರ್ಭದಲ್ಲಿ ಏರ್ಪಡಿಸಿದ ‘ ಬಿ.ಕೆ.ವಿಶ್ವನಾಥ ಸ್ಮೃತಿ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಆಶೀರ್ಚನ ನೀಡಿದರು.

ಲಕ್ಷ್ಮಣ ಕೋಟ್ಯಾನ್ ರಿಗೆ ಪ್ರಶಸ್ತಿ :

ಕಟೀಲು ಮೇಳದ ಹಿರಿಯ ವೇಷಧಾರಿ ಹಾಗೂ ಅತ್ಯುತ್ತಮ ಕ್ರೀಡಾಪಟು ಲಕ್ಷ್ಮಣ ಕೋಟ್ಯಾನ್ ಅವರಿಗೆ 2018-19 ನೇ ಸಾಲಿನ ‘ದಿ.ಬಿ.ಕೆ.ವಿಶ್ವನಾಥ ಸ್ಮೃತಿ ಪ್ರಶಸ್ತಿ’ ಯನ್ನು ನೀಡಿ ಗೌರವಿಸಲಾಯ್ತು. ‘ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆಯ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅಭಿನಂದನಾ ಭಾಷಣ ಮಾಡಿದರು . ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಯೋಗೀಶ್ ಕಾಂಚನ್ ಬೈಕಂಪಾಡಿ ಸನ್ಮಾನ ಪತ್ರ ವಾಚಿಸಿದರು.

ಕಟೀಲು ಕ್ಷೇತ್ರದ ಅರ್ಚಕರಾದ ವಾಸುದೇವ ಆಸ್ರಣ್ಣ, ವೆಂಕಟ್ರಮಣ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ ಹಾಗೂ ಕೂಳೂರು ಬೀಡಿನ ವಜ್ರಕುಮಾರ್ ಕರ್ಣಂತಾಯ ಬಲ್ಲಾಳರು ಮುಖ್ಯ ಅತಿಥಿಗಳಾಗಿದ್ದರು. ಸೇವಾಕರ್ತರಾದ ಬಿ.ಕೆ.ರಾಜೀವಿ ವಿಶ್ವನಾಥ ಮತ್ತು ಮಕ್ಕಳು ಉಪಸ್ಥಿತರಿದ್ದರು.

ಶ್ರೀದೇವಿಪ್ರಸಾದ್ ನ ಬಿ.ಕೆ.ಸಂದೀಪ್ ಸ್ವಾಗತಿಸಿದರು. ಬಿ.ಕೆ.ಶೈಲೇಂದ್ರ ವಂದಿಸಿದರು.ಶಿವರಾಮ ಪಣಂಬೂರು, ಬಿ.ಕೆ.ಸುಜೀತ್, ಗಂಗಾಧರ, ಹರೀಶ್ ಮತ್ತು ಸುಮಾ ರಾಜೇಂದ್ರ ಸಹಕರಿಸಿದರು. ಬಳಿಕ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯಿಂದ ‘ಸಂಪೂರ್ಣ ಶ್ರೀದೇವಿ ಮಹಾತ್ಮೆ’ ಸೇವಾ ಬಯಲಾಟ ಜರಗಿತು.

Comments are closed.