ಕರಾವಳಿ

ಕುಂದಾಪುರ ಗೋಳಿಯಂಗಡಿಯ ಶ್ರೀ ಮಾರುತಿ ಜ್ಯುವೆಲರ್ಸ್​ನಲ್ಲಿ ಕಳ್ಳತನ:  4 ಲಕ್ಷಕ್ಕೂ ಅಧಿಕ ಬೆಳ್ಳಿಯಾಭರಣ, ಸೊತ್ತುವಿಗೆ ಕನ್ನ

Pinterest LinkedIn Tumblr

ಕುಂದಾಪುರ: ತಾಲೂಕಿನ ಗೋಳಿಯಂಗಡಿ ಮುಖ್ಯ ಪೇಟೆಯಲ್ಲಿರುವ ಗೋಪಾಲ ಆಚಾರ್ಯ ಮಾಲಿಕತ್ವದ  ಶ್ರೀ ಮಾರುತಿ ಜುವೆಲ್ಲರ್ಸ್ ಎನ್ನುವ ಚಿನ್ನದಂಗಡಿಗೆ ಮಂಗಳವಾರ ತಡರಾತ್ರಿ ಕನ್ನ ಹಾಕಿದ ಕಳ್ಳರು ಸುಮಾರು 4 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತು ದೋಚಿದ್ದು ಬುಧವಾರ ಈ ಘಟನೆ ಬೆಳಕಿಗೆ ಬಂದಿದೆ.

ಬೆಳ್ಳಿ ಆಭರಣಗಳು, ಟಿವಿ, ಸಿಸಿ ಕ್ಯಾಮೆರಾ, ಡಿ.ವಿ.ಆರ್ ಕಳ್ಳತನವಾಗಿದ್ದು ಇವುಗಳ ಒಟ್ಟು ಮೌಲ್ಯ ನಾಲ್ಕು ಲಕ್ಷಕ್ಕೂ ಅಧಿಕ ಎನ್ನಲಾಗಿದೆ.

ಲಾಕರ್ ಮುರಿಯಲು ವಿಫಲ ಯತ್ನ…
ರಾತ್ರಿ ಸುಮಾರು 1.30ರ ಸುಮಾರಿಗೆ ಕಾರಿನಲ್ಲಿ ಬರುವ ಖದೀಮರು ಚಿನ್ನದಂಗಡಿಯ ಶಟರ್ ಬಾಗಿಲು ಮುರಿದು ಒಳಪ್ರವೇಶಿಸಿದ್ದಾರೆ. ಬಳಿಕ ಚಿನ್ನಾಭರಣಗಳಿಗಾಗಿ ಹುಡುಕಾಡಿದ್ದು ಚಿನ್ನ ಲಾಕರಿನಲ್ಲಿದ್ದಿದ್ದನ್ನು ಮನಗಂಡ ಖದೀಮರು ಲಾಕರ್ ಮುರಿಯಲು ವಿಫಲ ಯತ್ನ ಮಾಡಿದ್ದಾರೆ. ಗ್ಯಾಸ್ ಕಟ್ಟರ್ ಮೂಲಕ ಲಾಕರ್ ಕತ್ತರಿಸಲು ಹರಸಾಹಸ ಪಟ್ಟಿದ್ದು ಬೆಳಕಿಗೆ ಬಂದಿದೆ. ಬಳಿಕ ಅಂಗಡಿಯ ಶೋಕೆಸಿನಲ್ಲಿದ್ದ ಬೆಳ್ಳಿಯ ಆಭರಣ, ಸಿಸಿ ಟಿವಿ, ಟಿವಿ ಹಾಗೂ ಡಿ.ವಿ.ಆರ್ ಕಳವುಗೈದು ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಉಡುಪಿ ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಕುಂದಾಪುರ ಡಿವೈಎಸ್ಪಿ ದಿನೇಶ್ ಕುಮಾರ್, ಬೈಂದೂರು ವೃತ್ತನಿರೀಕ್ಷಕ ಪರಮೇಶ್ವರ ಗುನಗ,  ಶಂಕರನಾರಾಯಣ ಪಿಎಸ್ಐ ಪ್ರಕಾಶ್, ಕುಂದಾಪುರ ಗ್ರಾಮಾಂತರ ಠಾಣೆ ಪಿಎಸ್ಐ ಶ್ರೀಧರ್ ನಾಯ್ಕ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದು ತನಿಖೆ ಮುಂದುವರೆಸಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.