ಮಂಗಳೂರು, ಮಾರ್ಚ್.02: ನಗರದ ರಸ್ತೆ ಬದಿಗಳಲ್ಲಿ ನೋ ಪಾರ್ಕಿಂಗ್ ಸ್ಥಳದಲ್ಲಿ ಮತ್ತು ಪಾರ್ಕಿಂಗ್ ಜಾಗದಲ್ಲಿಯೂ ಅನಧಿಕೃತ ವಾಗಿ ನಿಲ್ಲಿಸುವ ವಾಹನಗಳನ್ನು ಎತ್ತಿ ಕೊಂಡೊಯ್ಯುವ ಟೋಯಿಂಗ್ ವಾಹನವು ಮಾ. 2ರಿಂದ ಕಾರ್ಯಾಚರಿಸಲಿದ್ದು, ನಗರದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಅನಧಿಕೃತವಾಗಿ ವಾಹನಗಳನ್ನು ನಿಲುಗಡೆ ಮಾಡಿದರೆ ಕಡ್ಡಾಯವಾಗಿ ದಂಡ ಕಟ್ಟಬೇಕಾಗುತ್ತದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ತಮ್ಮ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್ ಇನ್ ಕಾರ್ಯಕ್ರಮ ಸಂದರ್ಭ ಸುದ್ಧಿಗಾರರ ಜೊತೆ ಮಾತನಾಡಿದ ಅವರು, ನಗರದ ರಸ್ತೆ ಬದಿ ಎಲ್ಲೆಂದರಲ್ಲಿ ಅನಧಿಕೃತವಾಗಿ ವಾಹನಗಳನ್ನು ಪಾರ್ಕ್ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಇನ್ನು ಮುಂದೆ ಎಲ್ಲೆಂದರಲ್ಲಿ ಅನಧಿಕೃತವಾಗಿ ನಿಲುಗಡೆ ಮಾಡುವ ವಾಹನಗಳನ್ನು ಈ ಟೋಯಿಂಗ್ ವಾಹನದಲ್ಲಿ ಸಂಬಂಧ ಪಟ್ಟ ಪೊಲೀಸ್ ಠಾಣೆಗೆ ಕೊಂಡೊಯ್ಯಲಾಗುವುದು. ವಾಹನ ಮಾಲಕ/ ಚಾಲಕರು ನಿಗದಿತ ದಂಡ ಶುಲ್ಕ ಪಾವತಿಸಿ ವಾಹನವನ್ನು ಬಿಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ ನಾಲ್ಕು ಟ್ರಾಫಿಕ್ ಪೊಲೀಸ್ ಠಾಣೆಗಳಿಗೆ (ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ) ತಲಾ ಒಂದು ಟೋಯಿಂಗ್ ವಾಹನ ಹೊಂದಲು 4 ಟೋಯಿಂಗ್ ವಾಹನಗಳಿಗೆ ಟೆಂಡರ್ ಆಹ್ವಾನಿಸಲಾಗಿತ್ತು. ಇದೀಗ ಒಂದು ಟೋಯಿಂಗ್ ವಾಹನ ಬಂದಿದೆ. ಹೊರ ಗುತ್ತಿಗೆ ಆಧಾರದಲ್ಲಿ ಇದು ಕಾರ್ಯನಿರ್ವಹಿಸಲಿದೆ ಎಂದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾಹಿತಿ ನೀಡಿದರು.
ದಂಡ ಶುಲ್ಕ – ವಿವರ : ಭಾರೀ ವಾಹನಗಳಿಗೆ 1,600 ರೂ. / ಮಧ್ಯಮ ವಾಹನಗಳಿಗೆ 1,350 ರೂ. / ಲಘು ವಾಹನಗಳಿಗೆ 1,100 ರೂ. / ದ್ವಿಚಕ್ರ ವಾಹನಗಳಿಗೆ 750 ರೂ.
Comments are closed.