ಕರಾವಳಿ

ಭ್ರೂಣಲಿಂಗ ಪತ್ತೆ ಕಂಡು ಬಂದರೆ ಆರೋಪಿಗಳಿಗೆ ಜೈಲು ಶಿಕ್ಷೆ : ಈ ಬಗ್ಗೆ ಮಾಹಿತಿ ನೀಡಲು ಆರೋಗ್ಯಾಧಿಕಾರಿ ಸೂಚನೆ

Pinterest LinkedIn Tumblr

ಮಂಗಳೂರು: ಭ್ರೂಣಲಿಂಗ ಪತ್ತೆ ಕಾನೂನು ಪ್ರಕಾರ ಮಹಾಪರಾಧ. ಯಾವುದೇ ಆಸ್ಪತ್ರೆಯಲ್ಲಿ ವೈದ್ಯರಾಗಲೀ ಅಥವಾ ಹೆತ್ತವರಾಗಲಿ ಭ್ರೂಣಲಿಂಗ ಪತ್ತೆಗೆ ಮುಂದಾಗಬಾರದು. ಒಂದುವೇಳೆ ಇಂತಹ ಪ್ರಕರಣಗಳು ಕಂಡು ಬಂದರೆ ಸಾರ್ವಜನಿಕರು ತಕ್ಷಣ ಮಾಹಿತಿ ನೀಡಬೇಕು. ಆರೋಗ್ಯ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ಎಚ್ಚರಿಸಿದ್ದಾರೆ.

ಅವರು ಬುಧವಾರ ಪತ್ರಕರ್ತರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಭ್ರೂಣಲಿಂಗ ಪತ್ತೆ ಪ್ರಕರಣ ಕಂಡು ಬಂದಿಲ್ಲ. ಒಂದು ವೇಳೆ ಭ್ರೂಣ ಲಿಂಗ ಪತ್ತೆ ಹಚ್ಚಲು ಮುಂದಾದ ಬಗ್ಗೆ ಗಮನಕ್ಕೆ ಬಂದಲ್ಲಿ ಸಾರ್ವಜನಿಕರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳಲಾಗುವುದು. ಆರೋಪಿಗಳಿಗೆ ಕಾನೂನಿನಡಿ ಜೈಲು ಶಿಕ್ಷೆ ಹಾಗೂ ದಂಡ ಶಿಕ್ಷೆ ಇದೆ ಎಂದವರು ತಿಳಿಸಿದರು.

ಸಂಯೋಜಿತ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ 1650 ಚಿಕಿತ್ಸಾ ವಿಧಾನಗಳಿವೆ. 5 ಲಕ್ಷದವರೆಗೆ ಚಿಕಿತ್ಸಾ ಸೌಲಭ್ಯ ದೊರೆಯಲಿದೆ. ಆದರೆ ರೋಗಿಗಳು ಸರಕಾರಿ ಆಸ್ಪತ್ರೆಗೇ ದಾಖಲಾಗಬೇಕು. ಅಲ್ಲಿ ಅಂತಹ ಚಿಕಿತ್ಸೆ ಲಭ್ಯವಾಗದೇ ಇದ್ದಲ್ಲಿ ಬಳಿಕ ಆಯುಷ್ಮಾನ್ ಕಾರ್ಡ್ ಮೂಲಕ ಬೇರೆ ಖಾಸಗಿ ಆಸ್ಪತ್ರೆಗೆ ದಾಖಲಾಗಬಹುದು. ಜನತೆ ಈ ಬಗ್ಗೆ ಹೆಚ್ಚಿನ ಗಮನ ಕೊಡಬೇಕಿದೆ. ಸರಕಾರಿ ಆಸ್ಪತ್ರೆಗಳಲ್ಲಿಯೇ ಸಾಕಷ್ಟು ವ್ಯವಸ್ಥೆಗಳಿದ್ದು, ಇಲ್ಲಿ ಸೇವೆ ಪಡೆಯಬೇಕು ಎಂದು ಆರೋಗ್ಯಾಧಿಕಾರಿ ರಾಮಕೃಷ್ಣ ರಾವ್ ವಿವರಿಸಿದರು.

ಜಿಲ್ಲೆಯಲ್ಲಿ ಈವರೆಗೆ 1902  ಮಂದಿ ವಿವಿಧ ರೀತಿಯ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಯೋಜನೆ ಆರಂಭವಾದಂದಿನಿಂದ ಇಲ್ಲಿವರೆಗೆ ವೆನ್‌ಲಾಕ್ ಜಿಲ್ಲಾಸ್ಪತ್ರೆಯಲ್ಲಿ 33,735 ಮಂದಿ ಮತ್ತು ಮಂಗಳೂರು ವನ್ ಕೇಂದ್ರಗಳಲ್ಲಿ 13581 ಮಂದಿ ಆರೋಗ್ಯ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ತಾಲೂಕು ಆಸ್ಪತ್ರೆಗಳಲ್ಲಿಯೂ ಪ್ರಸ್ತುತ ಆರೋಗ್ಯ ಕಾರ್ಡ್ ಮಾಡಿಸಲಾಗುತ್ತಿದೆ ಎಂದವರು ಮಾಹಿತಿ ನೀಡಿದರು.

Comments are closed.