ಕರಾವಳಿ

ಜಾತ್ರೆ ನಡೀತಾಯಿದೆ, ಬೈಕ್ ನಿಲ್ಲಿಸಿ ಹೋಗಿ ಎಂದಿದ್ದಕ್ಕೆ ಪೊಲೀಸರಿಗೆ ಬೈದು ಹಲ್ಲೆ

Pinterest LinkedIn Tumblr

ಕುಂದಾಪುರ: ಜಾತ್ರೆಯಿದೆ, ಈ ರಸ್ತೆಯಲ್ಲಿ ಬೈಕ್ ಚಲಾಯಿಸಬೇಡಿ, ಇಲ್ಲೇ ನಿಲ್ಲಿಸಿ ಹೋಗಿ ಎಂದಿದ್ದಕ್ಕೆ ಪೊಲೀಸರ ಮೇಲೆಯೇ ಯುವಕನೋರ್ವ ಎಗರಿಬಿದ್ದ ಘಟನೆ ತಾಲೂಕಿನ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಗಂಗೊಳ್ಳಿ ಮಹಂಕಾಳಿ ಮಾರಿಕಾಂಬಾ ದೇವಸ್ಥಾನದ ಜಾತ್ರೆ ನಡೆಯುತ್ತಿದ್ದು ಇಂದು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಿದ್ದ ಬೈಂದೂರು ಪೊಲಿಸ್ ಠಾಣೆಯ ಕೇಶವ ಮತ್ತು ಗಂಗೊಳ್ಳಿ ಪೊಲೀಸ್ ಠಾಣೆಯ ಮಂಜುನಾಥ ಗಂಗೊಳ್ಳಿ ಪೇಟೆಯಲ್ಲಿ ಕಡಲಕೂಗು ಗಣೇಶ ಎನ್ನುವರ ಮನೆಯ ಸಮೀಪದಲ್ಲಿ ಸಮವಸ್ತ್ರದಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿದ್ದರು. ಈ ವೇಳೆ ನವೀನ ಎಂಬಾತ KA-20-EE-8702 ನೇ ಬೈಕಿನಲ್ಲಿ ಬಂದಿದ್ದು, ಈ ರಸ್ತೆಯಲ್ಲಿ ಮೋಟಾರು ಸೈಕಲ್ ಕೊಂಡು ಹೋಗಬೇಡ ಹತ್ತಿರದ ಪಾರ್ಕಿಂಗ್ ಸ್ಥಳದಲ್ಲಿ ಮೋಟಾರು ಸೈಕಲ್ ನಿಲ್ಲಿಸಿ ನಡೆದುಕೊಂಡು ಹೋಗುವಂತೆ ಪೊಲೀಸರು ತಿಳುವಳಿಕೆ ಹೇಳಿದ್ದರು.

ಆ ಸಮಯ ನವೀನನು ಮೋಟಾರು ಸೈಕಲನ್ನು ರಸ್ತೆಯ ಬದಿ ನಿಲ್ಲಿಸಿ ಕೇಶವ ಮತ್ತು ಮಂಜುನಾಥರವರಿಗೆ ಅವಾಚ್ಯವಾಗಿ ಬೈದು ಮಕ್ಕಳೇ ಪೊಲೀಸರೇ ನಿಮಗೆ ಭಾರಿ ಅಹಂಕಾರ, ಅದನ್ನು ಕೇಳಲು ನೀವು ಯಾರು, ಇದು ನಮ್ಮ ಊರು, ಎಂದು ಹೇಳಿ ಕೈ ಯಿಂದ ಸಿಬ್ಬಂದಿಯವರಿಗೆ ದೂಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.