ಕರಾವಳಿ

ಎಸ್ಸಿ,ಎಸ್ಸ್ಟಿ ಗುತ್ತಿಗೆದಾರರಿಗೆ ಕಾಮಗಾರಿ ನೀಡದ ಬಗ್ಗೆ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದಿಂದ ತನಿಖೆ- ಜಿಲ್ಲಾಧಿಕಾರಿ

Pinterest LinkedIn Tumblr

ಉಡುಪಿ: ಲೋಕೋಪಯೋಗಿ ಇಲಾಖೆ, ಪಿ.ಆರ್.ಇ.ಡಿ ಸೇರಿದಂತೆ ವಿವಿಧ ಇಲಾಖೆಯ ಕಾಮಗಾರಿಗಳಲ್ಲಿ ಪ.ಜಾತಿ ಮತ್ತು ಪಂಗಡದ ಗುತ್ತಿಗೆದಾರರಿಗೆ ಶೇ.25 ಮೀಸಲಾತಿ ಇಡಬೇಕೆಂಬ ನಿಯಮವಿದ್ದರೂ ಇದನ್ನು ಉಲ್ಲಂಘಿಸಿ ಇತರರಿಗೆ ಕಾಮಗಾರಿಗಳನ್ನು ನೀಡುತ್ತಿರುವ ಕುರಿತು ಪ.ಜಾತಿ ಮತ್ತು ಪ.ಪಂಗಡದ ಗುತ್ತಿಗೆದಾರರ ದೂರಿನ ಹಿನ್ನಲೆಯಲ್ಲಿ ಈ ಕುರಿತಂತೆ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದಿಂದ ತನಿಖೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.

ಅವರು ಬುಧವಾರ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಪ.ಜಾತಿ ಹಾಗೂ ಪ.ಪಂಗಡಗಳ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ.ಜಾತಿ ಮತ್ತು ಪಂಗಡದ ಗುತ್ತಿಗೆದಾರರಿಗೆ ಶೇ.25 ಮೀಸಲಾತಿಯಂತರ ಕಾಮಗಾರಿಗಳನ್ನು ನೀಡುತ್ತಿಲ್ಲ ಹಾಗೂ ಕಾಮಗಾರಿಗಳನ್ನು ರ್ಯಾಂಡಮೈಶೆನ್ ಮೂಲಕ ಮಾಡದೇ ಹೊಂದಾಣಿಕೆ ಮೂಲಕ ಮಾಡಿಕೊಳ್ಳುವಂತೆ ಅಧಿಕಾರಿಗಳು ಸೂಚಿಸುತ್ತಿದ್ದಾರೆ ಎಂದು ಪ.ಜಾತಿ ಮತ್ತು ಪಂಗಡದ ಗುತ್ತಿಗೆದಾರರು ದೂರಿದ ಹಿನ್ನಲೆಯಲ್ಲಿ, ಈ ಬಗ್ಗೆ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದಿಂದ ತನಿಖೆ ನಡೆಸಿ ಸಂಬಂದಪಟ್ಟವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ತಿಳಿಸಿದರು.

ಜಿಲ್ಲೆಯಲ್ಲಿ ಡಿಸಿ ಮನ್ನಾ ಜಾಗ ಮಂಜೂರು ಮಾಡುವ ಬಗ್ಗೆ ಸಂಬಂದಪಟ್ಟ ಗ್ರಾಮ ಪಂಚಾಯತ್ ಪಿಡಿಓ ಗಳು ಪರಿಶೀಲಿಸಿ ಸರಿಯಾದ ನಿರ್ಣಯ ಮಾಡಿ, ತಪ್ಪು ನಿರ್ಣಯಗಳಾಗಿದ್ದಲ್ಲಿ ಕೂಡಲೇ ರದ್ದು ಪಡಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಡಿಸಿ ಮನ್ನಾ ಭೂಮಿ ಅತಿಕ್ರಮಣವಾಗಿರುವ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಎಲ್ಲಾ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.

ಪ.ಜಾತಿ, ಪಂಗಡದವರ ಹೆಸರಲ್ಲಿ ಹಣ ದುರುಪಯೋಗವಾಗುತ್ತಿದೆ, ಫಲಾನುಭವಿಗಳು ಇಲ್ಲದಿದ್ದರೂ ಸಹ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂಬ ದೂರಿನ ಹಿನ್ನಲೆಯಲ್ಲಿ ಪ.ಜಾತಿ ಪಂಗಡದ ಅಭಿವೃಧ್ದಿಗಾಗಿ ಕಾಮಗಾರಿ ಆರಂಭಿಸುವಾಗ, ಆ ಸ್ಥಳದಲ್ಲಿ ಕಡ್ಡಾಯವಾಗಿ ಫಲಾನುಭವಿಗಳು ಇರುವ ಬಗ್ಗೆ ಖಚಿತಪಡಿಸಿಕೊಂಡು ಕಾಮಗಾರಿ ನಿರ್ವಹಿಸಿ ಇಲ್ಲವಾದಲ್ಲಿ ಸಂಬಂದಪಟ್ಟವರ ವಿರುದ್ದ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದಿಂದ ತನಿಖೆ ನಡೆಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಹೇಳಿದರು.

ಸಭೆಯಲ್ಲಿ ಕುಕ್ಕೆಹಳ್ಳಿಯಲ್ಲಿ ಖಾಸಗಿ ಕಂಪೆನಿಯಿಂದ ಕುಡಿಯುವ ನೀರು ಕಲುಶಿತಗೊಳ್ಳುತ್ತಿದ್ದು, ಸಮಾಜ ಕಲ್ಯಾಣ ಇಲಾಖೆ ನೀರು ಸರಬರಾಜು ಮಾಡುವ ಬಾವಿಯ ನೀರು ಕಲುಶಿತಗೊಂಡಿದೆ ಎಂದು ಪ್ರತಿನಿಧಿಯೊಬ್ಬರು ತಿಳಿಸಿದರು. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಂಬಂಧ ಪಟ್ಟ ಸಂಸ್ಥೆಗೆ ನೋಟಿಸ್ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಮಾಹಿತಿ ನೀಡಿದರು. ಈ ಬಗ್ಗೆ ಜಿಲ್ಲಾಧಿಕಾರಿ ಮಾತನಾಡಿ, ಸಂಬಂಧ ಪಟ್ಟ ಸಂಸ್ಥೆ ಲೈಸೆನ್ಸ್ ನಿಯಮಗಳಿಗೆ ವಿರುದ್ದವಾಗಿ ಕೆಲಸ ಮಾಡುತ್ತಿದ್ದರೆ ಕ್ರಮ ಕೈಗೊಂಡು ವರದಿ ನೀಡಿ ಎಂದು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗೆ ಸೂಚನೆ ನೀಡಿದರು.

ಶಿರೂರಿನ ಗೀತಾ ಎಂಬುವವರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಬಗ್ಗೆ ನೀಡಿದ ದೂರಿನ ಬಗ್ಗೆ ನಡೆದ ಚರ್ಚೆಯಲ್ಲಿ ಗ್ರಾಮಸ್ಥರೊಬ್ಬರು ಮಾತನಾಡಿ, ಶಿರೂರು ಭಾಗದಲ್ಲಿ ಇರುವ ಎಸ್.ಸಿ/ ಎಸ್.ಟಿ ಜಾಗದಲ್ಲಿ, 13 ಎಕರೆ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರು ಅತಿಕ್ರಮಿಸಿ ಮನೆ ನಿರ್ಮಿಸಿದ್ದಾರೆ. ಆ ಜಾಗಕ್ಕೆ ಈಗಾಗಲೇ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು, ಗೀತಾ ಅವರ ಮನೆಗೆ ಇನ್ನೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯೂ ಗಮನ ಹರಿಸುತ್ತಿಲ್ಲ ಎಂದು ದೂರಿದರು. ಇದಕ್ಕೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ಈ ಬಗ್ಗೆ 20 ದಿನಗಳೊಳಗೆ ಮಾಹಿತಿ ನೀಡುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಂಕರ ನಾರಾಯಣದಲ್ಲಿ ಅಂಬೆಡ್ಕರ್ ವಸತಿ ಶಾಲೆ ನಿವೇಶನ ಮಂಜೂರಾಗಿದ್ದರೂ ಇನ್ನೂ ಯಾವುದೇ ಪ್ರಗತಿ ಆಗಿಲ್ಲ ಎಂದು ದೂರಿನ ಕುರಿತು ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಶಂಕರನಾರಾಯಣದಲ್ಲಿ ವಸತಿ ಶಾಲೆ ನಿರ್ಮಾಣಕ್ಕೆ ಸೂಚಿಸಿದ ಜಾಗ ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿ ಬಂದಿದ್ದು, ವಸತಿ ಶಾಲೆಯನ್ನು ಅಂಪಾರಿನಲ್ಲಿ ನಿರ್ಮಿಸಲು ಯೋಜನೆ ಹಾಕಲಾಗಿದೆ. ಆಕ್ಷೇಪಣೆ ಇಲ್ಲದ್ದಿದ್ದರೆ ಅಂಪಾರಿನಲ್ಲಿ ಅಂಬೆಡ್ಕರ್ ವಸತಿ ಶಾಲೆಯನ್ನು ನಿರ್ಮಿಸಲಾಗುತ್ತದೆ ಎಂದು ತಿಳಿಸಿದರು.

ಅಂಬೇಡ್ಕರ್ ಸಮುದಾಯ ಭವನಗಳ ನಿರ್ಮಾಣಕ್ಕೆ ಇರುವ ಅಡೆತಡೆಗಳು ಹಾಗೂ ಸಮರ್ಪಕವಾಗಿ ನಿರ್ವಹಣೆ ಇಲ್ಲದ ಕುರಿತಂತೆ ಹಲವು ದೂರುಗಳು ಬಂದವು. ಈ ಬಗ್ಗೆ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಈ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗೆ ತಿಳಿಸಿದರು.

ಹಂಗಾರುಕಟ್ಟೆಯ ಮೀನು ಕಟ್ಟಿಂಗ್ ಘಟಕದಿಂದ ಶಾಲೆಗೆ ಹೋಗುವ ಪ.ಜಾತಿ ಪಂಗಡದ ಮಕ್ಕಳಿಗೆ ತೊಂದರೆಯಾಗುತ್ತಿರುವ ಕುರಿತಂತೆ ಬಂದ ದೂರಿನ ಹಿನ್ನಲೆಯಲ್ಲಿ, ಸದ್ರಿ ಘಟಕಕ್ಕೆ ಇದುವರೆಗೆ ಪರಿಸರ ಇಲಾಖೆಯಿಂದ ಅನುಮತಿ ದೊರೆಯದ ಹಿನ್ನಲೆಯಲ್ಲಿ, ಘಟಕಕ್ಕೆ ಪಂಚಾಯತ್ನಿಂದ ನೀಡಿರುವ ಅನುಮತಿ ಪತ್ರ ವಾಪಸ್ ಪಡೆದು ವರದಿ ನೀಡುವಂತೆ ಪಿಡಿಓಗೆ ಡಿಸಿ ಸೂಚಿಸಿದರು.
ಪಂಚಾಯತ್ಗಳಲ್ಲಿ ನಿಗಧಿತವಾಗಿ ಎಸ್.ಸಿ. ಎಸ್.ಟಿ. ವಿಶೇಷ ಗ್ರಾಮ ಸಭೆ ನಡೆಯದ ಬಗ್ಗೆ, ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸದ ಬಗ್ಗೆ, ರಸ್ತೆ ಸಂಪರ್ಕ ಒದಗಿಸುವ ಬಗ್ಗೆ, ಪ.ಜಾತಿ ಮತ್ತು ಪಂಗಡದ ಅಭಿವೃದ್ದಿಗಾಗಿ ಇರುವ ವಿವಿಧ ನಿಗಮಗಳಿಂದ ಜಿಲ್ಲೆಗೆ ಹೆಚ್ಚಿನ ಗುರಿ ನೀಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ವಿವಿಧ ಸಂಘಟನೆಗಳ ಮುಖಂಡರಾದ ಸುಂದರ ಮಾಸ್ತರ್, ಉದಯ ಕುಮಾರ್ ತಲ್ಲೂರು, ಸುಂದರ್ ಕಪ್ಪೆಟ್ಟು, ಶೇಖರ್ ಹಾವಂಜೆ, ರಮೇಶ್ ಕೋಟ್ಯಾನ್, ವಾಸುದೇವ ಮುದೂರು, ರಾಜು ಬೆಟ್ಟಿನಮನೆ, ಮಂಜುನಾಥ ಗಿಳಿಯಾರ್, ವಿಶ್ವನಾಥ ಪೇತ್ರಿ, ವಿಜಯಲಕ್ಷ್ಮಿ , ವಕೀಲ ಮಹಾಬಲ , ಮುಂಜುನಾಥ ಬಾಳ್ಕುದ್ರು ಮತ್ತಿತರರು ಉಪಸ್ಥಿತರಿದ್ದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧೂ ಬಿ ರೂಪೇಶ್, ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ಬ ನಿಂಬರಗಿ, ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ಪಿ ವೇದಮೂರ್ತಿ, ಕಾರ್ಕಳ ಎಎಸ್ಪಿ ಕೃಷ್ಣಕುಮಾರ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಭುಜಬಲಿ ಉಪಸ್ಥಿತರಿದ್ದರು.

Comments are closed.