ರಾಷ್ಟ್ರೀಯ

ರಾಹುಲ್‌ ಗಾಂಧಿಯನ್ನು ಅಣಕಿಸಿದ ಪುಟ್ಟ ಬಾಲಕ?

Pinterest LinkedIn Tumblr


ಬೆಂಗಳೂರು: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯನ್ನು ಪುಟ್ಟಬಾಲಕನೊಬ್ಬ ಅಣಕಿಸಿದ್ದಾನೆ ಎಂಬರ್ಥದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ರಾಹುಲ್‌ ಗಾಂಧಿ ಪುಟ್ಟಮಗುವೊಂದರ ಬಳಿ ಹೂವು ನೀಡಿ ಮಾತನಾಡಲು ಪ್ರಯತ್ನಿಸುತ್ತಾರೆ.

ಆಗ ಆ ಮಗು ‘ಮೋದಿ, ಮೋದಿ’ ಎನ್ನುವ ಮೂಲಕ ತಂದೆಯೆಡೆಗೆ ಮುಖ ಮಾಡುವ ದೃಶ್ಯವಿದೆ. ಆಮ್‌ ಪ್ರೆಸ್‌ ಎಂಬ ಹೆಸರಿನ ಫೇಸ್‌ಬುಕ್‌ ಪೇಜ್‌ ಈ ವಿಡಿಯೋವನ್ನು ಜನವರಿ 25ರಂದು ಪೋಸ್ಟ್‌ ಮಾಡಿ, ‘ಇಂತಹ ಘಟನೆಗೆ ಸಾಕ್ಷಿಯಾಗುವುದಕ್ಕೂ ಮೊದಲು ನಾನೇಕೆ ಸಾಯಬಾರದು. ಬಿಜೆಪಿಯನ್ನು ಬೆಂಬಲಿಸುವ ಪುಟ್ಟಬಾಲಕ ಕೂಡ ರಾಹುಲ್‌ ಅನ್ನು ಅಣಕಿಸುತ್ತಾನೆ’ ಎಂದು ಹಿಂದಿಯಲ್ಲಿ ಒಕ್ಕಣೆ ಬರೆದಿದೆ. ಸದ್ಯ ಈ ಪೋಸ್ಟ್‌ 70,000 ವೀಕ್ಷಣೆ ಪಡೆದಿದ್ದು, 600 ಬಾರಿ ಶೇರ್‌ ಆಗಿದೆ. ಇದೇ ಶೀರ್ಷಿಕೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಆದರೆ ನಿಜಕ್ಕೂ ಪುಟ್ಟಬಾಲಕ ರಾಹುಲ್‌ ಗಾಂಧಿಯನ್ನು ಹೀಗೆ ಅಣಕಿಸಿದ್ದು ನಿಜವೇ ಎಂದು ಬೂಮ್‌ಲೈವ್‌ ಸುದ್ದಿ ಸಂಸ್ಥೆ ಪರಿಶೀಲಿಸಿದಾಗ ವಿಡಿಯೋವನ್ನು ಎಡಿಟ್‌ ಮಾಡಿ ಈ ರೀತಿ ಸುಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಮೂಲ ವಿಡಿಯೋವನ್ನು ರಾಹುಲ್‌ ಗಾಂಧಿ ಅವರ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಜನವರಿ 23ರಂದು ಪೋಸ್ಟ್‌ ಮಾಡಲಾಗಿದ್ದು, ಅದರಲ್ಲಿ ಪುಟ್ಟಬಾಲ ರಾಹುಲ್‌ ಗಾಂಧಿಯೊಂದಿಗೆ ಏನೂ ಮಾತನಾಡಿಲ್ಲ.

ವಿಡಿಯೋದಲ್ಲಿ ಇರುವುದು ಇಷ್ಟೆ; ರಾಹುಲ್‌ ಗಾಂಧಿ ಪುಟ್ಟಬಾಲಕನ ಬಳಿ ‘ಏನು ಹೇಳಲು ಇಷ್ಟಪಡುತ್ತೀಯ’ ಎಂದು ಕೇಳುತ್ತಾರೆ. ಆಗ ಬಾಲಕ ನಾಚಿಕೆಯಿಂದ ಏನನ್ನೂ ಹೇಳದೆ ತಂದೆಯೆಡೆಗೆ ಮುಖ ತಿರುಗಿಸಿಕೊಳ್ಳುತ್ತಾನೆ. ಕಂಕುಳಲ್ಲಿ ಮಗುವನ್ನು ಎತ್ತಕೊಂಡಿದ್ದ ಬಾಲಕನ ತಂದೆ ‘ಏನಾದರೂ ಹೇಳು’ ಎಂದು ಒತ್ತಾಯಿಸುತ್ತಾರೆ. ಆದರೂ ಬಾಲಕ ಏನನ್ನೂ ಹೇಳುವುದಿಲ್ಲ. ಈ ಮೂಲ ವಿಡಿಯೋವನ್ನು ತಿರುಚಿ ಮೋದಿ, ಮೋದಿ ಎಂಬ ಪದವನ್ನು ಸೇರಿಸಿ ಹೀಗೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತದೆ.

Comments are closed.