ಕರಾವಳಿ

ಪರಸ್ತ್ರೀಗಾಗಿ ಕರುಳ‌ಕುಡಿಗಳ ಕೊಂದ ಹಂತಕ, ಪಾಪಿ ತಂದೆಗೆ ಗಲ್ಲು

Pinterest LinkedIn Tumblr

ಕುಂದಾಪುರ: ಮನೆ ಕೆಲಸದಾಕೆಯೊಡನೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದು ಆಕೆ ಇನ್ನೊಂದು ಮದುವೆಯಾದ್ದರಿಂದ ಜಿಗುಪ್ಸೆಗೊಂಡು ಮನೆಮಂದಿಗೆ ವಿಷವುಣಿಸಿ ತಾನೂ ವಿಷವುಂಡು ಇಬ್ಬರು ಮಕ್ಕಳ ಸಾವು, ಪತ್ನಿಯ ಕೊಲೆಯತ್ನಕ್ಕೆ ಕಾರಣನಾದ ಬೈಂದೂರು ಗಂಗನಾಡು ನಿವಾಸಿ ಶಂಕರನಾರಾಯಣ ಹೆಬ್ಬಾರ್‌(47) ಎಂಬ ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಕುಂದಾಪುರದಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ ಖಂಡೇರಿ ತೀರ್ಪು ಪ್ರಕಟಿಸಿದ್ದಾರೆ.

ಬೈಂದೂರು‌ ಗಂಗನಾಡು ಎಂಬಲ್ಲಿ 2016 ಅಕ್ಟೋಬರ್ 16 ರಂದು ನಡೆದಿದ್ದ ಘಟನೆ ಇದಾಗಿದೆ. ಘಟನೆಯಲ್ಲಿ ಹೆಬ್ಬಾರರ ಮಗ ಅಶ್ವಿನ್‌ಕುಮಾರ್‌(16), ಮಗಳು ಐಶ್ವರ್ಯ ಲಕ್ಷ್ಮೀ(14) ಸಾವನ್ನಪ್ಪಿದ್ದರು. ಮತ್ತು ಪತ್ನಿ ಮಹಾಲಕ್ಷ್ಮೀ ಗಂಭೀರ ಬಚಾವ್ ಆಗಿದ್ದರು. ಬೈಂದೂರು ಅಂದಿನ ಸಿಪಿಐ ರಾಘವ ಪಡೀಲ್ ಚಾರ್ಜ್ ಶೀಟ್ ಸಲ್ಲಿಸಿದ್ದರು. ಹೆಬ್ಬಾರ್ ಪತ್ನಿ ಸಹಿತ 17 ಮಂದಿ ಸಾಕ್ಷ್ಯಾಧಾರಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆದಿತ್ತು.

ಕಾಯಬೇಕಾದ ತಂದೆಯೇ ಮಕ್ಕಳನ್ನು ಬಲಿ‌ಪಡೆದಿದ್ದ ವಿಲಕ್ಷಣ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು ಆರೋಪಿ‌ ವಿರುದ್ಧ ಮಾಡಲಾದ ಕೊಲೆ (ಸೆಕ್ಷನ್ 302)ಗೆ ಮರಣದಂಡನೆ ಶಿಕ್ಷೆ, ಕೊಲೆ‌ಯತ್ನ (ಸೆಕ್ಷನ್ 307)ಗೆ 7 ವರ್ಷ ಕಠಿಣ, 10 ಸಾವಿರ ದಂಡ, ವಿಷವುಣಿಸಿದ್ದಕ್ಕೆ (ಸೆಕ್ಷನ್ 328)ರಡಿಯಲ್ಲಿ 10 ವರ್ಷ ಜೈಲು, 10 ಸಾವಿರ ದಂಡ, ಸಾಕ್ಷ್ಯನಾಶ (ಸೆಕ್ಷನ್ 201) ಮಾಡಿದ್ದಕ್ಕೆ 7 ವರ್ಷ ಕಠಿಣ ಶಿಕ್ಷೆ, ಆತ್ಮಹತ್ಯೆ ಯತ್ನ (ಸೆಕ್ಷನ್309)ಕ್ಕೆ 6 ತಿಂಗಳು ಸಾದಾ ಶಿಕ್ಷೆ ವಿಧಿಸಲಾಯಿತು. ಪತ್ನಿಯು ಕಾನೂನು ಸೇವಾ ಪ್ರಾಧಿಕಾರದಲ್ಲಿ ಪರಿಹಾರ ಕಂಡುಕೊಳ್ಳಬಹುದೆಂದು ನ್ಯಾಯಾಧೀಶರು ತಿಳಿಸಿದರು.

ಶಿಕ್ಷೆ ಪ್ರಮಾಣ ಪ್ರಕಟ ಕುರಿತು ವಾದ ಮಂಡನೆ ವೇಳೆ ಅಪರಾಧಿಗೆ ಕಾನೂನು ವ್ಯಾಪ್ತಿಯಲ್ಲಿ ಗರಿಷ್ಟ ಶಿಕ್ಷೆ ನೀಡಲು ಜಿಲ್ಲಾ ಸರಕಾರಿ ಅಭಿಯೋಜಕ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.

ಮರಣ ದಂಡನೆ ತೀರ್ಪು...
ವಿರಳಾತಿವಿರಳ ಪ್ರಕರಣ ಇದಾಗಿದ್ದು ಈ ಹಿಂದೆ ಉಚ್ಚ ನ್ಯಾಯಾಲಯದಲ್ಲಿನ ಒಂದು ಹಾಗೂ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆದ  ಪ್ರಕರಣವೊಂದರ ವಿವರಣೆಯನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಲಾಗಿತ್ತು. ಅಪ್ರಾಪ್ತ ಮುಗ್ಧ ಮಕ್ಕಳನ್ನು ಹಾಗೂ ಹೆಂಡತಿಯನ್ನು ಕೊಲ್ಲಲು ಯತ್ನಿಸಿದ ಆರೋಪಿ ಕಟುಕ. ಮಕ್ಕಳನ್ನು ದೇವರೆಂದು ಪೂಜಿಸಲಾಗುತ್ತದೆ. ಮಕ್ಕಳು 12-15 ವಯಸ್ಸಿನವರಾಗಿದ್ದು ತಂದೆಯನ್ನು ಅವಲಂಭಿಸಿರುತ್ತಾರೆ, ಅದೊಂದು ವಿಶ್ವಾಸದ ಸಂಭಂಧವಾಗಿರಬೇಕು. ಅದನ್ನು ದುರುಪಯೋಗ ಮಾಡಿಕೊಂಡು ಸಾಕುವ ಜವಬ್ದಾರಿಯನ್ನು ಮರೆತು ಕೊಂದಿದ್ದಾನೆ. ಈ ಕೃತ್ಯದಿಂದ ಈತನ ಪತ್ನಿ (ಮಕ್ಕಳಿಬ್ಬರ ಕಳೆದುಕೊಂಡ ತಾಯಿ) ಜೀವಂತ ಶವವಾಗಿದ್ದಾರೆ. ಅವರ ಇಡೀ ಕುಟುಂಬ ನೊಂದಿದೆ. ಸಂಪೂರ್ಣ ಈ ಪ್ರಕರಣವನ್ನು ಗಮನಿಸಿದಾಗ ಇಂದೊಂದು ಹೆಣ್ಣಿಗಾಗಿ ಮಾಡಿದ ಪೂರ್ವನಿಯೋಜಿತ ಕೃತ್ಯ ಮತ್ತು ಕ್ರೂರತ್ವದ ಪರಮಾವಧಿ. ಇಂತಹ ಅಪರಾಧಿಗೆ ಶಿಕ್ಷೆ ಪ್ರಮಾಣದಲ್ಲಿ ಯಾವುದೇ ಕನಿಕರ ತೋರಬಾರದು. ಹೆಂಡತಿ ಮಕ್ಕಳ ಮೇಲೆ ದಯೆಯಿಲ್ಲದ ಇಂತವರಿಗೆ ನ್ಯಾಯಾಲಯ ದಯೆ ತೋರಬಾರದು. ಸಮಾಜದಲ್ಲಿ ಬದುಕುವ ಹಕ್ಕಿಲ್ಲ ಎಂದು ಸರಕಾರದ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕರು ವಾದ ಮಂಡಿಸಿದ್ದರು.

ಕೆಲಸದಾಕೆಯೊಂದಿಗೆ ಲವ್ವಿಡವ್ವಿ..!
ಅಡುಗೆ ಹಾಗೂ ಕೃಷಿ ಕೆಲಸ ಮಾಡಿಕೊಂಡಿದ್ದ ಶಂಕರನಾರಾಯಣ ಹೆಬ್ಬಾರ್ ತನ್ನ ಮನೆಯ ಕೆಲಸದಾಕೆಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದು ಆಕೆ ಇನ್ನೊಬ್ಬನ ಜೊತೆ ವಿವಾಹವಾದಾಗ ಆ ವಿರಹವೇದನೆಯನ್ನು ತಾಳದ ಶಂಕರನಾರಾಯಣ ಆಕೆಯಿಲ್ಲದೇ ನಾವ್ಯಾರು ಬದುಕಬಾರದು ಎಂದು ತನ್ನ ಮತ್ತು ಆಕೆಯ ಸಲುಗೆಯ ಕುರಿತು ಮತ್ತು ತನ್ನ  ಮನದಾಳದ ಪ್ರೀತಿಯ ಕುರಿತು ಸುದೀರ್ಘ 18 ಪುಟಗಳ ಡೆತ್ ನೋಟ್ ಬೆರೆದಿಟ್ಟಿದ್ದ. ಅದರಲ್ಲಿ ಅವರಿಬ್ಬರ ನಡುವಿನ ಎಲ್ಲಾ ಸಂಬಂದಗಳನ್ನು ಉಲ್ಲೇಖಿಸಿದ್ದ. ಆಕೆ ಇಲ್ಲದೇ ತನ್ನ ಬದುಕೇ ಇಲ್ಲ ಎಂಬುದು ಆ ಬರಹಗಳಲ್ಲಿ ಕಂಡುಬಂದಿತ್ತು. ಆಕೆ ಬಾರದೇ ಯಾರ ಶವವನ್ನು ಸಂಸ್ಕಾರ ಮಾಡಬೇಡಿ. ಅವಳು ಅಂತಿಮ ದರ್ಶನ ಪಡೆದ ಮೇಲೆಯೇ ನಮ್ಮ ಅಂತ್ಯಕ್ರಿಯೆ ನಡೆಸಬೇಕೆಂಬುದು ಕೂಡ ಆ ಪತ್ರದಲ್ಲಿತ್ತು. ಮಾಧ್ಯಮ ಮಿತ್ರರ ಸ್ನೇಹ ಹೊಂದಿದ್ದ ಹೆಬ್ಬಾರ್ ಆತ್ಮಹತ್ಯೆ ಮೊದಲು ಪರಿಚಯದ ಮಾಧ್ಯಮಮಿತ್ರರ ವ್ಯಾಟ್ಸ್ಯಾಪ್‌ಗೆ ಸಂದೇಶ ಕಳುಹಿಸಿದ್ದರು. ನಾಳೆ ಬೆಳಿಗ್ಗೆ ದಯವಿಟ್ಟು ಗಂಗನಾಡುಗೆ ಬನ್ನಿ. ನಿಮಗೆ ಹಾಟ್‌ ನ್ಯೂಸ್‌ ಸಿಗುತ್ತೆ. ಟಿವಿ ಮಾಧ್ಯಮದವರು ಬರಲಿ ಎಂದು ಸಂದೇಶ ರವಾನಿಸಿದ್ದ.

ಕೈಯಾರೇ ವಿಷವಿಕ್ಕಿದ ಕಿರಾತಕ..
ಆತ್ಮಹತ್ಯೆಗೆ ಸ್ಕೆಚ್ ನಡೆಸಿ ಅದಕ್ಕಾಗಿಯೇ ತಾನೇ ಉಪಹಾರ ತಯಾರು ಮಾಡಿ ಅದಕ್ಕೆ ವಿಷ ಹಾಕಿ ಮಕ್ಕಳು ಹಾಗೂ ಪತ್ನಿಗೆ ನೀಡುತ್ತಾನೆ. ಅಲ್ಲದೇ ತನ್ನ ಮೇಲೆ ಅನುಮಾನ ಬಾರದಿರಲಿ ಎಂಬಂತೆ ಸ್ವಲ್ಪ ಪ್ರಮಾಣದಲ್ಲಿ ತಾನೂ ಕೂಡ ಸೇವಿಸುತ್ತಾನೆ. ಪ್ರತಿನಿತ್ಯ ಆ ಕುಟುಂಬದಲ್ಲಿ ಸಮೀಪದ ಹಾಲು ಡೇರಿಗೆ ಹಾಲು ನೀಡಲಾಗುತ್ತಿತ್ತು. ಆದರೆ ಮಾರನೇ ದಿನ ಮುಂಜಾನೆ ಹಾಲು ತಾರದಿದ್ದಾಗ ಅಕ್ಕಪಕ್ಕದವರು ಮನೆ ಬಳಿ ಬಂದಿದ್ದು ವಿಷಾಹಾರ ಸೇವಿಸಿ ನಾಲ್ವರು ಅಸ್ವಸ್ಥಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಲಾಯಿತಾದರೂ ಕೂಡ ಮಕ್ಕಳಿಬ್ಬರು ಮೃತರಾಗಿ ಪತ್ನಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆ ಪಾಲಾಗಿದ್ದು ಕೆಲ ಸಮಯಗಳ ನಂತರ ಸುಧಾರಿಸಿದ್ದರು.

ಪ್ರತಿಭಾನ್ವಿತರಾಗಿದ್ದ ಮಕ್ಕಳು
ಮಗ ಆಶ್ವಿನ್‌ಕುಮಾರ್‌(16) ಬೈಂದೂರು ಸರಕಾರಿ ಪಪೂ ಕಾಲೇಜಿನ ಪ್ರೌಢಶಾಲೆ ವಿಭಾಗದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯಾಗಿದ್ದ. ಮಗಳು ಐಶ್ವರ್ಯ ಲಕ್ಷ್ಮೀ(14) 8ನೇ ತರಗತಿಯಲ್ಲಿ ಓದುತ್ತಿದ್ದಳು. ಇಬ್ಬರೂ ಕೂಡ ಆ ಶಾಲೆಯಲ್ಲಿ ಚುರುಕಿನ ವಿದ್ಯಾರ್ಥಿಗಳು. ಪ್ರತಿಭಾನ್ವಿತ ಇಬ್ಬರು ಮಕ್ಕಳನ್ನು ತನ್ನ ಅಕ್ರಮ ಅನೈತಿಕ ಪ್ರೇಮದ ಬಲಿಪಡೆದ ಈ ವಿಲಕ್ಷಣ ಘಟನೆ ಆ ಗ್ರಾಮದ ಜನರನ್ನು ಬೆಚ್ಚಿಬೀಳಿಸಿತ್ತು.

(ವರದಿ- ಯೋಗೀಶ್ ಕುಂಭಾಸಿ)

Comments are closed.