ಕರಾವಳಿ

ಬೈಂದೂರು ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳ ಸಭೆ |ಕಾಂಗ್ರೆಸ್‌ನ ಗ್ಯಾರೆಂಟಿಗಳು ಮಹಿಳೆಯರ ಸಬಲೀಕರಣಕ್ಕೆ ಪೂರಕವಾಗಿದೆ: ಜಿ.ಎ ಬಾವಾ

Pinterest LinkedIn Tumblr

ಬೈಂದೂರು: ಕಳೆದ ವಿಧಾನಸಭಾ ಚುನಾವಣೆಗೂ‌ ಮೊದಲು ಕಾಂಗ್ರೆಸ್ ವಾಗ್ದಾನ ನೀಡಿದಂತೆ ಸರಕಾರ ರಚನೆಯಾದ ಬಳಿಕ ಪಂಚ ಗ್ಯಾರೆಂಟಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ನುಡಿದಂತೆ ನಡೆದಿದೆ. ಗ್ಯಾರೆಂಟಿಗಳ ಪೈಕಿ ಬಹುತೇಕ ಎಲ್ಲಾ ಕಾರ್ಯಕ್ರಮ ಮಹಿಳೆಯರ ಸಬಲೀಕರಣಕ್ಕೆ ಪೂರಕವಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಲೋಕಸಭಾ ಚುನಾವಣೆಯ ಬೈಂದೂರು ಕ್ಷೇತ್ರ ಉಸ್ತುವಾರಿ ಜಿ.ಎ ಬಾವಾ ಹೇಳಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆ ಬೈಂದೂರು ಬ್ಲಾಕ್ ಸಮಿತಿ ವತಿಯಿಂದ ಶನಿವಾರ ನಡೆದ ಬೈಂದೂರು ಕಾಂಗ್ರೆಸ್ ಮಹಿಳಾ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು‌.

ಬಿಜೆಪಿಯವರು ಮಾತೆಯರು ಎನ್ನುತ್ತಾರೆ ಹೊರತು ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡಿಲ್ಲ. ಬಡವರ ಮನೆ ಹೆಣ್ಮಕ್ಕಳ ಏಳಿಗೆ ಹಾಗೂ ಗೌರವಯುತ ಬದುಕಿಗೆ ಕಾಂಗ್ರೆಸ್ ಇಚ್ಚಾಶಕ್ತಿಯ ಕೆಲಸ ಮಾಡಿದೆ. ಈ ಬಾರಿ ಕಾಂಗ್ರೆಸ್ಸಿಗೆ ಮತ ಹಾಕುವ ಮೂಲಕ ದೇಶದಲ್ಲಿ ಮಹಿಳೆಯರು, ರೈತರು, ಶ್ರಮಿಕರು, ಯುವಜನಾಂಗಕ್ಕೆ ರೂಪಿಸಲಾದ ಇನ್ನಷ್ಟು ಯೋಜನೆ ಸಾಕಾರಗೊಳ್ಳಲು ಸಹಕಾರ ನೀಡಬೇಕು. ಬಿಜೆಪಿ‌ಅಧಿಕಾರಕ್ಕೆ ಬಂದರೆ ಮತದಾನದ ಹಕ್ಕು ಕಸಿಯುತ್ತದೆ, ನೌಕರಿ ಕಸಿಯುತ್ತದೆ ಎಂದವರು ಆರೋಪಿಸಿದರು.

ಕಾಂಗ್ರೆಸ್ ಸರಕಾರ ದೇಶದಲ್ಲಿನ ಹೆಣ್ಮಕ್ಕಳಿಗೆ ನೌಕರಿ ಕೊಡುವ ಇರಾದೆ ಹೊಂದಿದೆ. ಸೋನಿಯಾ ಗಾಂಧಿಯವರು ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಕಾಲದಲ್ಲಿ ವಿಧಾನಸಭೆ, ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರ ಸ್ಪರ್ಧೆಗೆ 33% ಮೀಸಲಾತಿ ಇಡುವುದಾಗಿ ಭರವಸೆ ನೀಡಿದ್ದಾಗ ಬಿಜೆಪಿಗರೇ ವಿರೋಧ ಮಾಡಿದ್ದು ಇದೀಗಾ ಚುನಾವಣೆ ನಾಟಕಕ್ಕಾಗಿ ತಾವು ಮಾಡುವುದಾಗಿ ಹೇಳಿಕೊಂಡಿದ್ದಾರೆ.

ಡಾ. ಬಿ.ಆರ್ ಅಂಬೇಡ್ಕರ್ ಬರೆದ ಸಂವಿಧಾನ ವಿರೋಧಿಸಿ ಮನುಸ್ಮೃತಿ ಸೇರಿಸಲು ಬಿಜೆಪಿ ಒತ್ತಾಯಿಸಿದೆ. ಕೇಂದ್ರದಲ್ಲಿನ ಬಿಜೆಪಿ ಸರಕಾರದಿಂದ ಹೆಣ್ಮಕ್ಕಳ ಪರವಾದ ಯಾವುದೇ ಕೆಲಸವಾಗುತ್ತಿಲ್ಲ.‌ ಕಾಂಗ್ರೆಸ್ ಸರಕಾರ ಮಹಿಳೆಯರು-ಮಕ್ಕಳ ರಕ್ಷಣೆಗೆ ಜಾರಿಗೆ ತಂದ ಯಾವುದೇ ಕಾನೂನು-ಕಾಯ್ದೆಗಳನ್ನು ಬಲಪಡಿಸಿಲ್ಲ. ರಾಜಕೀಯವಾಗಿ ಕೂಡ ಮಹಿಳೆಯರು ಮುನ್ನೆಲೆಗೆ ಬರಲು ಅವಕಾಶ ನೀಡಿಲ್ಲ ಎಂದವರು ಆರೋಪಿಸಿದರು.

ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೌರಿ ದೇವಾಡಿಗ, ಉಪಾಧ್ಯಕ್ಷೆ ಗುಲಾಬಿ ಪೂಜಾರಿ, ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತಿ, ಕಾರ್ಯದರ್ಶಿ ನಾಗರತ್ನಾ, ನಾವುಂದ ಗ್ರಾ‌.ಪಂ ಮಾಜಿ ಅಧ್ಯಕ್ಷೆ ಜಾನಕಿ ಮೊಗವೀರ ಮೊದಲಾದವರು ಇದ್ದರು.

ರಾಜ್ಯದ ಕಾಂಗ್ರೆಸ್‌ ಸರಕಾರ ನೀಡಿದ ಗ್ಯಾರೆಂಟಿ ಭಾಗ್ಯಗಳು ಮನೆಮನೆಗೂ ತಲುಪಿದೆ. ಇದರ ಆಧಾರದಲ್ಲಿ ಈ ಚುನಾವಣೆಯಲ್ಲಿ‌ ಮತ ಕೇಳಲು ನಮಗೆ ಬಲ ಹೆಚ್ಚಿದೆ. ಬಿಜೆಪಿಯ ಮಹಿಳಾ ವಿರೋಧಿ ನೀತಿ ಹಾಗೂ ಕಾಂಗ್ರೆಸ್ ಸರಕಾರ ಮಹಿಳೆಯರ ಪರವಾದ‌ ನಿಲುವಿನಡಿ ಮತಯಾಚನೆ ನಡೆಸಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ.
– ಗೌರಿ ದೇವಾಡಿಗ (ಬೈಂದೂರು ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷೆ)

Comments are closed.