
ಮಂಗಳೂರು : ಕನ್ನಡ ಪುಸ್ತಕ ಪಗ್ರಾಧಿಕಾರವು 2017ರ ಸಾಲಿನ ಯುವಬರಹಗಾರರ ಚೊಚ್ಚಲ ಪ್ರೋತ್ಸಾಹಧನ ಹಸ್ತಪ್ರತಿಗಾಗಿ ಯುವ ಬರಹಗಾರರಾದ ಅಕ್ಷತಾರಾಜ್ ಪೆರ್ಲ ಅವರ “ಸಂಚಿಯೊಳಗಿನ ಸಂಜೆಗಳು” ಕೃತಿ ಆಯ್ಕೆಯಾಗಿದ್ದು ಜನವರಿ 23ರಂದು ಬೆಂಗಳೂರಿನ ಕನ್ನಡಭವನದ ಸಭಾಂಗಣದಲ್ಲಿ ಬಿಡುಗಡೆ ನಡೆಯಲಿದೆ.
2017ನೇ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿ ಬಿಡುಗಡೆ ಯೋಜನೆಯಲ್ಲಿ ಕಾಸರಗೋಡು, ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ಆಯ್ಕೆಯಾದ ಏಕೈಕ ಯುವ ಕವಯಿತ್ರಿ ಇವರಾಗಿದ್ದು ಈಗಾಗಲೇ ತುಳು – ಕನ್ನಡ ಸಾಹಿತ್ಯ ರಚನೆಯಲ್ಲಿ ಹೆಸರುವಾಸಿ ಯಾಗಿದ್ದಾರೆ.
ಈ ಯೋಜನೆಯಲ್ಲಿ ಒಟ್ಟು 136 ಬರಹಗಾರರು ಸ್ಪರ್ಧಿಸಿದ್ದು 51 ಕೃತಿಗಳನ್ನು ಆಯ್ಕೆ ಮಾಡಿರುವುದು ಗಮನಾರ್ಹ. ಕಾಸರಗೋಡು ಜಿಲ್ಲೆಯ ಪೆರ್ಲ ಸಮೀಪದ ಕಯ್ಯಂಕೂಡ್ಲುವಿನಲ್ಲಿರುವ ಅಕ್ಷತಾರಾಜ್ ಈಗಾಗಲೇ ತಮ್ಮ ಸಾಹಿತ್ಯಕ್ಕಾಗಿ ಕೊಡಗಿನ ಗೌರಮ್ಮ ಸಾಹಿತ್ಯ ಪುರಸ್ಕಾರವನ್ನು 2016ರಲ್ಲಿ ದ್ವಿತೀಯ ಹಾಗೂ 2018ರಲ್ಲಿ ಪ್ರಥಮ ಸ್ಥಾನದೊಂದಿಗೆ ಜೊತೆಗೆ 2016ರ ಪೂವರಿ ತುಳು ಸಾಹಿತ್ಯ ಪ್ರಶಸ್ತಿಯನ್ನು ಗಳಿಸಿಕೊಂಡಿದ್ದಾರೆ.
ಕಾವ್ಯ,ಕಥೆ,ಲಘು ಪ್ರಬಂಧ ಹೀಗೆ ಹಲವು ಪ್ರಕಾರಗಳಲ್ಲಿ ಹವ್ಯಕ – ತುಳು – ಕನ್ನಡ ಭಾಷೆಗಳಲ್ಲಿ ಸೃಜನಶೀಲರಾಗಿ ಗುರುತಿಸಿ ಕೊಂಡಿದ್ದಾರೆ. ಮಂಗಳೂರು ಆಕಾಶವಾಣಿ ಕೇಂದ್ರದಲ್ಲಿ ತಾತ್ಕಾಲಿಕ ಕಾರ್ಯಕ್ರಮ ನಿರ್ಮಾಣ ಸಹಾಯಕರಾಗಿ ತುಳುವಿನ ಪದರಂಗೀತ ಮುಂತಾದ ಕಾರ್ಯಕ್ರಮ ಹಾಗೂ ಕನ್ನಡದ ವನಿತಾವಾಣಿ ವಿಭಾಗದಲ್ಲಿ ಕರೆಗೊಂದು ಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಯಕ್ಷಗಾನ ತಾಳಮದ್ದಳೆಯ ಅರ್ಥಗಾರಿಕೆಯಲ್ಲಿಯೂ ತೊಡಗಿಸಿಕೊಂಡು ಕಾವ್ಯಕಮ್ಮಟ, ಬೇಸಿಗೆ ಶಿಬಿರಗಳ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ಅನುಭವ ಇವರದು.
Comments are closed.