ರಾಷ್ಟ್ರೀಯ

ಪತ್ರಕರ್ತ​ ರಾಮಚಂದರ್ ಛತ್ರಪತಿ ಹತ್ಯೆ ಪ್ರಕರಣ: ಸ್ವಯಂಘೋಷಿತ ದೇವಮಾನವ ರಾಮ್​​ ರಹೀಮ್​​ ಸಿಂಗ್​​ಗೆ ಜೀವಾವಧಿ ಶಿಕ್ಷೆ!

Pinterest LinkedIn Tumblr

ನವದೆಹಲಿ: ಪತ್ರಕರ್ತ ರಾಮಚಂದರ್ ಛತ್ರಪತಿ ಹತ್ಯೆ ಪ್ರಕರಣ ಸಂಬಂಧ ಸ್ವಯಂಘೋಷಿತ ದೇವಮಾನವ ಹಾಗೂ ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಬಾಬಾ ರಾಮ್ ರಹೀಮ್ ಸೇರಿ ನಾಲ್ವರಿಗೆ ಹರಿಯಾಣದ ಸಿಬಿಐ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ, ಮಹತ್ವದ ಆದೇಶ ನೀಡಿದೆ.

ಡೇರಾ ಮುಖ್ಯಸ್ಥನ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಆರೋಪ ಮಾಡಿದ್ದರ ಕುರಿತು 2002ರಲ್ಲಿ ಪತ್ರಕರ್ತ ಛತ್ರಪತಿ ತನ್ನ ಪತ್ರಿಕೆಯಲ್ಲಿ ವರದಿ ಮಾಡಿದ್ದರು. ಆನಂತರ ಅವರ ಕೊಲೆಯಾಗಿತ್ತು. ಈ ಕೊಲೆಯಲ್ಲಿ ರಾಮ್​ ರಹೀಂ ಸೇರಿ ಇತರೆ ಮೂವರ ಕೈವಾಡ ಇರುವುದು ರುಜುವಾತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ.

ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಹರಿಯಾಣದ ಪಂಚಕುಲ ಮತ್ತು ಸಿರ್ಸಾ ಭಾಗದ ಡೇರಾ ಸಚ್ ಸೌಧದ ಮುಖ್ಯಸ್ಥಳಗಳಲ್ಲಿ ಹಾಗೂ ರಾಜ್ಯದ ಇತರೆ ಭಾಗಗಳಲ್ಲಿ ಹೆಚ್ಚಿನ ಬಿಗಿಭದ್ರತೆ ಒದಗಿಸಲಾಗಿತ್ತು. ಕೋರ್ಟ್​ ಸುತ್ತಮುತ್ತ ಪೊಲೀಸರು ಬ್ಯಾರಿಕೇಡ್​ಗಳನ್ನು ಹಾಕಿ ಖಾಸಗಿ ವ್ಯಕ್ತಿಗಳು, ಭಕ್ತರು ಅಲ್ಲಿ ಬರದಂತೆ ಮುಂಜಾಗ್ರತಾ ಕ್ರಮವನ್ನು ವಹಿಸಲಾಗಿತ್ತು.

ಭದ್ರತೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಜೈಲಿನಿಂದಲೇ ರಾಮ್​ ರಹೀಂನನ್ನು ವಿಡಿಯೋ ಕಾನ್ಫರೆನ್ಸ್​ ಮೂಲಕ ವಿಚಾರಣೆ ನಡೆಸುವಂತೆ ನೆನ್ನೆ ಹರಿಯಾಣ ಸರ್ಕಾರ ಮಾಡಿದ್ದ ಮನವಿಯನ್ನು ಪುರಸ್ಕರಿಸಿದ್ದ ನ್ಯಾಯಾಲಯ ವಿಡಿಯೋ ಕಾನ್ಫರೆನ್ಸ್​ ಮೂಲಕ ವಿಚಾರಣೆ ನಡೆಸಿ, ಈ ಆದೇಶ ನೀಡಿದೆ.

ಇಬ್ಬರು ಮಹಿಳಾ ಅನುಯಾಯಿಗಳ ಅತ್ಯಾಚಾರ ಪ್ರಕರಣದಲ್ಲಿ 51 ವರ್ಷದ ರಾಮ್​ ರಹೀಂ 20 ವರ್ಷ ಶಿಕ್ಷೆಗೆ ಒಳಗಾಗಿ ರೋಹ್ಟಕ್​ನ ಸುನಾರಿಯಾ ಜೈಲಿನಲ್ಲಿದ್ದಾರೆ.

ರಾಮ್​ ರಹೀಂ ಜೊತೆಗೆ ಕುಲದೀಫ್​ ಸಿಂಗ್, ನಿರ್ಮಲ್ ಸಿಂಗ್ ಮತ್ತು ಕೃಷ್ಣ ಲಾಲ್​ ಎಂಬುವವರು ವಿರುದ್ಧ ಪ್ರಕರಣ ದಾಖಲಾಗಿ ಅವರು ಅಂಬಲ ಜೈಲಿನಲ್ಲಿದ್ದಾರೆ.

Comments are closed.