ಕರಾವಳಿ

ಭೂಗತ ಪಾತಕಿ ವಿಕ್ಕಿ ಶೆಟ್ಟಿ ಸಹಚರ ಕುಖ್ಯಾತ ರೌಡಿ ಶರಣ್‌ನಿಂದ ಬಾಲಕಿಯ ಅತ್ಯಾಚಾರ! : ಆರೋಪಿಯ ಪತ್ತೆಗೆ ವ್ಯಾಪಕ ಶೋಧ

Pinterest LinkedIn Tumblr

ಮಂಗಳೂರು, ಜನವರಿ.12: ಭೂಗತ ಪಾತಕಿ ವಿಕ್ಕಿ ಶೆಟ್ಟಿ ಸಹಚರ ಮಂಗಳೂರಿನ ಕುಖ್ಯಾತ ಕ್ರಿಮಿನಲ್, ರೌಡಿ ಶೀಟರ್ ಓರ್ವ ಹೊಸ ವರ್ಷ ಆಚರಣೆಯ ನೆಪವೊಡ್ಡಿ ಬಾಲಕಿಯನ್ನು ಪುಸಲಾಯಿಸಿ ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರ ನಡೆಸಿರುವ ಬಗ್ಗೆ ತಡವಾಗಿ ನಗರದ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಬಗ್ಗೆ ತನಿಖೆಯನ್ನು ತೀವ್ರಗೊಳಿಸಿರುವ ನಗರ ಪೊಲೀಸರು ಆರೋಪಿಯ ಪತ್ತೆಗೆ ವ್ಯಾಪಕ ಬಲೆ ಬೀಸಿದ್ದಾರೆ.

ನಗರದಲ್ಲಿ ಈ ಹಿಂದೆ ಹಲವು ಅಪರಾಧ ಪ್ರಕರಣಗಳಲ್ಲಿ ಆರೋಪ ಎದುರಿಸಿದ್ದ ರೌಡಿ ಶೀಟರ್ ಆಕಾಶಭವನದ ಚರಣ್ ಯಾನೆ ಶರಣ್ ಎಂಬಾತನ ವಿರುದ್ಧ ಬಾಲಕಿಯನ್ನು ಪುಸಲಾಯಿಸಿ ಲಾಡ್ಜ್‌ಗೆ ಕರೆದೊಯ್ದು ಮೂರು ದಿನ ಉಳಿಸಿಕೊಂಡು ಅತ್ಯಾಚಾರ ನಡೆಸಿರುವ ಆರೋಪ ಮಾಡಲಾಗಿದೆ.

ಇತ್ತೀಚಿಗೆ ಚರಣ್ ಹುಲಿವೇಷ ತರಬೇತಿ ನೀಡುತ್ತಿದ್ದು, ತರಬೇತಿ ಪಡೆಯಲೆಂದು ಬಂದಿದ್ದ ಬಾಲಕಿಯನ್ನು ಪುಸಲಾಯಿಸಿ ಜಿಲ್ಲೆಯ ಹೊರಗಿನ ಲಾಡ್ಜ್ ಒಂದಕ್ಕೆ ಕರೆದೊಯ್ದು ಅಲ್ಲಿ ಮೂರು ದಿನಗಳ ಕಾಲ ಉಳಿಸಿಕೊಂಡಿದ್ದ ವೇಳೆ ಅತ್ಯಾಚಾರ ಎಸಗಿದ್ದನೆಂದು ಆರೋಪಿಸಲಾಗಿದೆ.

ಬಾಲಕಿ ಅಸ್ವಸ್ಥಳಾದ ಹಿನ್ನೆಲೆಯಲ್ಲಿ ಪ್ರಕರಣ ಜ. 7ರಂದು ಬೆಳಕಿಗೆ ಬಂದಿದ್ದು, ಬಾಲಕಿಯನ್ನು ಮಂಗಳೂರಿನ ಸರಕಾರಿ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಹೊಸ ವರ್ಷಾಚರಣೆ ಸಂದರ್ಭ ಘಟನೆ ನಡೆದಿದ್ದು, ಒಂದು ವಾರದ ಬಳಿಕ ಘಟನೆ ಬೆಳಕಿಗೆ ಬಂದಿದೆ., ಇದೀಗ ಶರಣ್ ವಿರುದ್ಧ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ, ಕೊಲೆ ಬೆದರಿಕೆ ಸೇರಿದಂತೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಸಂತ್ರಸ್ತ ಬಾಲಕಿಯನ್ನು ಘಟನೆ ಆನಂತರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಒದಗಿಸಲಾಗಿತ್ತು. ಸದ್ಯ ಸಂತ್ರಸ್ತೆ ಮನೆಗೆ ತೆರಳಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿ ವಿರುದ್ಧ ವಿವಿಧ ಪ್ರಕರಣ: ಮಂಗಳೂರು ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಆಕಾಶ ಭವನದ ಚರಣ್ ತಲೆಮರೆಸಿಕೊಂಡಿದ್ದಾನೆ. ಚರಣ್ ವಿರುದ್ಧ ಸುಳ್ಯದ ಕೆವಿಜಿ ಸಂಸ್ಥೆಯ ಡಾ. ರಾಮಕೃಷ್ಣ ಕೊಲೆ ಪ್ರಕರಣ ಸೇರಿದಂತೆ ಕೊಲೆ ಮತ್ತು ಕೊಲೆಯತ್ನ ಪ್ರಕರಣ, ವಯಸ್ಕ ಮಹಿಳೆಯೋರ್ವರ ಅತ್ಯಾಚಾರ ಪ್ರಕರಣ ಸಹಿತ ಹಲವು ಪ್ರಕರಣಗಳ ಆರೋಪಿಯಾಗಿದ್ದಾನೆ.

ಅತ್ಯಾಚಾರ ಪ್ರಕರಣದ ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಆತನ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿ ದ್ದಾರೆ. ಕೊಲೆ, ಸುಲಿಗೆ, ಅತ್ಯಾಚಾರ ಸಹಿತ 20 ಕ್ಕೂ ಅಧಿಕ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಚರಣ್ ಮೇಲಿದ್ದು, ಪೊಲೀಸರು ಈಗಾಗಲೇ ಈತನನ್ನು ರೌಡಿಶೀಟರ್ ಪಟ್ಟಿಗೂ ಸೇರಿಸಿದ್ದಾರೆ.

ಇದೀಗ ಆರೋಪಿಯ ಬಂಧನಕ್ಕೆ ಮಂಗಳೂರು ನಗರ ಪೊಲೀಸರು ಬಲೆ ಬೀಸಿದ್ದಾರೆ. ಕೃತ್ಯದಲ್ಲಿ ಆರೋಪಿ ಜೊತೆ ಇನ್ನೂ ಹಲವರು ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದ್ದು, ತನಿಖೆ ಚುರುಕುಗೊಂಡಿದೆ.

Comments are closed.