ಕರಾವಳಿ

ದ.ಕ.ಜಿಲ್ಲೆಯ ಸಂಘ‌ ಪರಿವಾರದ ಮೂವರು ಮುಖಂಡರ ವಿರುದ್ಧ ದಾಳಿಗೆ ಸಂಚು? ; ಎಚ್ಚರಿಕೆ ವಹಿಸುವಂತೆ ಪೊಲೀಸ್ ಇಲಾಖೆ ಸೂಚನೆ?

Pinterest LinkedIn Tumblr

ಮಂಗಳೂರು, ಜನವರಿ 11: ಕರಾವಳಿಯ ಸಂಘ‌ ಪರಿವಾರದ ಮೂವರು ಮುಖಂಡರ ವಿರುದ್ಧ ದಾಳಿಗೆ ಸಂಚು ರೂಪಿಸಲಾಗುತ್ತಿದೆ ಎಂಬ ಮಾಹಿತಿ ಪೊಲೀಸ್ ಗುಪ್ತಚಾರ ಇಲಾಖೆಗೆ ಲಭಿಸಿದೆ ಎಂಬ ವದಂತಿ ಹರಡಿದೆ.

ಆರ್‌ಎಸ್ಎಸ್ ಮುಖಂಡ ಡಾ ಕಲ್ಲಡ್ಕ ಪ್ರಭಾಕರ್ ಭಟ್, ವಿಎಚ್ ಪಿ ಮುಖಂಡರಾದ ಶರಣ್ ಪಂಪ್ ವೆಲ್ ಹಾಗೂ ಜಗದೀಶ್ ಶೇಣವ ವಿರುದ್ಧ ಸ್ಕೆಚ್ ರೂಪಿಸಲಾಗಿದ್ದು, ಯಾವೂದೇ ಸಂದರ್ಭದಲ್ಲೂ ದಾಳಿಯಾಗುವ ಸಾಧ್ಯತೆ ಇದೆ ಎಂಬ ವದಂತಿ ಇದೀಗ ಎಲ್ಲೆಡೆ ಹಬ್ಬಿದೆ.

ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ ಪೊಲೀಸ್ ಇಲಾಖೆಯಿಂದ ದೂರವಾಣಿ ಕರೆ ಮಾಡಲಾಗಿದ್ದು, ಜಾಗೃತೆಯಾಗಿ ಇರುವಂತೆ ಸೂಚಿಸಲಾಗಿದೆ ಎನ್ನಲಾಗಿದೆ. ಇದೇ ವೇಳೆ ಆರ್ ಎಸ್ ಎಸ್ ಮುಖಂಡ ಡಾ ಕಲ್ಲಡ್ಕ ಪ್ರಭಾಕರ್ ಭಟ್, ವಿಎಚ್ ಪಿ ಮುಖಂಡ ಜಗದೀಶ ಶೇಣವ ಅವರಿಗೂ ಕೂಡ ಎಚ್ಚರಿಕೆ ವಹಿಸುವಂತೆ ಮಂಗಳೂರು ಪೊಲೀಸರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಪೊಲೀಸರು ದೂರವಾಣಿ ಮೂಲಕ ಮಾಹಿತಿ ನೀಡಿದ್ದು, ಜಾಗೃತೆಯಾಗಿರುವಂತೆ ತಿಳಿಸಿದ್ದಾರೆ. ಒಂದೇ ಕಡೆ ಹೆಚ್ಚು ದಿನ ತಂಗಬೇಡಿ. ಒಬ್ಬರೇ ಎಲ್ಲಿಯೂ ತೆರಳದಂತೆ ಎಚ್ಚರಿಸಿದ್ದಾರೆ ಎಂದು ಶರಣ್ ಪಂಪ್ ವೆಲ್ ಸುದ್ಧಿಗಾರರಲ್ಲಿ ತಿಳಿಸಿದ್ದಾರೆ. ಆದರೆ ಯಾವ ಕಡೆಯಿಂದ ಬೆದರಿಕೆ ಇದೆ ಎನ್ನುವ ಮಾಹಿತಿಯನ್ನು ಪೊಲೀಸರು ನೀಡಿಲ್ಲ ಎಂದವರು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಆರ್‌ಎಸ್ಎಸ್ ಮುಖಂಡ ಡಾ ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೂ ಎಚ್ಚರಿಕೆ ವಹಿಸುವಂತೆ ಪೊಲೀಸ್ ಇಲಾಖೆ ಸೂಚನೆ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ತಮ್ಮ ರಕ್ಷಣೆಗೆ ಐವರು ಗನ್ ಮ್ಯಾನ್‍‍ಗಳನ್ನು ಹೊಂದಿರುವ ಭಟ್ ಅವರಿಗೆ ಸುರಕ್ಷಿತ ಸ್ಥಳದಲ್ಲಿರುವಂತೆ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ರಸ್ತೆ ಮಾರ್ಗದ ಮೂಲಕ ಬೆಂಗಳೂರಿಗೆ ತೆರಳಬೇಕಿದ್ದ ಪ್ರಭಾಕರ್ ಭಟ್ ಅವರನ್ನು ವಿಮಾನದಲ್ಲಿ ತೆರಳುವಂತೆ ಪೊಲೀಸರು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಡಾ ಕಲ್ಲಡ್ಕ ಪ್ರಭಾಕರ್ ಭಟ್ ವಿಮಾನದ ಮೂಲಕ ಬೆಂಗಳೂರಿಗೆ ತೆರಳಿದ್ದಾರೆ. ವಿಮಾನ ನಿಲ್ದಾಣಕ್ಕೆ ತೆರಳುವ ಸಂದರ್ಭದಲ್ಲಿಯೂ ಪ್ರಭಾಕರ್ ಭಟ್ ಅವರಿಗೆ ಪೊಲೀಸರು ಬೆಂಗಾವಲು ನೀಡಿದ್ದರು ಎಂದು ಹೇಳಲಾಗಿದೆ.

Comments are closed.