ಕರಾವಳಿ

ಕೋಕ್ ಸಲ್ಫರ್ ಘಟಕದ ವಿರುದ್ಧ ಪೊರಕೆ ಮೆರವಣಿಗೆ – ಎಂಆರ್‌ಪಿಎಲ್ ಹಾಗೂ ಜಿಲ್ಲಾಡಳಿತ ಜನತೆಯ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ : ಮುನೀರ್ ಆರೋಪ

Pinterest LinkedIn Tumblr

ಮಂಗಳೂರು : ಜೋಕಟ್ಟೆ,ಕಳವಾರು, ತೋಕೂರು ಗ್ರಾಮಸ್ಥರು ವರ್ಷಗಳ ಕಾಲ ನಡೆಸಿದ ಹೋರಾಟದ ಪರಿಣಾಮವಾಗಿ ಸರಕಾರ ಹೊರಡಿಸಿದ ಆರು ಅಂಶಗಳ ಪರಿಹಾರ ಕ್ರಮದ ಆದೇಶವನ್ನು ಎಂಆರ್‌ಪಿಎಲ್ ಸಂಸ್ಥೆಯು ಜಾರಿಗೆ ತರದೆ ವಂಚಿಸಿದೆ, ಜಿಲ್ಲಾಡಳಿತವೂ ಕಂಪೆನಿಯ ಜೊತೆ ಶಾಮೀಲಾಗಿ ಜನತೆಯ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ನಾಗರಿಕ ಹೋರಾಟ ಸಮಿತಿಯ ಮುಖಂಡ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.

ಎಂಆರ್‌ಪಿಎಲ್ ಮೂರನೇ ಹಂತದ ಕೋಕ್ ಸಲ್ಫರ್ ಘಟಕದಿಂದ ಉಂಟಾದ ಕೆಮಿಕಲ್ ಮಾಲಿನ್ಯ ಸಮಸ್ಯೆಗಳ ವಿರುದ್ಧ ನಗರದ ಮಿನಿ ವಿಧಾನಸೌಧದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ನಡೆದ ಪೊರಕೆ ಮೆರವಣಿಗೆ ಮತ್ತು ಧರಣಿ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.

ಪರಿಸರ ನಿಯಮಗಳನ್ನು ಉಲ್ಲಂಘಿಸಿ, ಹಸಿರು ವಲಯ ನಿರ್ಮಿಸದೆ ಕಂಪೆನಿಯು ಜನವಸತಿ ಪ್ರದೇಶದಲ್ಲಿ ಅಕ್ರಮವಾಗಿ ಪೆಟ್‌ಕೋಕ್, ಸಲ್ಫರ್ ಘಟಕ ಸ್ಥಾಪಿಸಿದ ಪರಿಣಾಮ ಸಮೀಪದ ಗ್ರಾಮಗಳ ಜನತೆಯ ಬದುಕಿನ ಮೇಲೆ ಗಂಭೀರ ಪರಿಣಾಮ ಉಂಟಾಗಿತ್ತು. ಪೆಟ್ ಕೋಕ್, ಸಲ್ಫರ್ ಹಾರುಬೂದಿ, ಶಬ್ದ, ವಾಯು ಮಾಲಿನ್ಯದ ವ್ಯಾಪಕ ಸಮಸ್ಯೆಗಳ ವಿರುದ್ಧ ಜನತೆ ತೀವ್ರ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಹಸಿರು ವಲಯ ನಿರ್ಮಾಣ ಸಹಿತ ಆರು ಅಂಶಗಳ ಪರಿಹಾರ ಕ್ರಮ ಕೈಗೊಳ್ಳುವಂತೆ ಅಧಿಕೃತ ಆದೇಶ ಹೊರಡಿಸಿತ್ತು ಎಂದು‌ ಮುನೀರ್ ಕಾಟಿಪಳ್ಳ ತಿಳಿಸಿದರು.

ಆದೇಶ ಜಾರಿಗೆ ಸಂಬಂಧಿಸಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಂಸದ, ಶಾಸಕರು ಸದಸ್ಯರಾಗಿರುವ ಸಮಿತಿ ರಚಿಸಿತ್ತು. ಆದರೆ ಸರಕಾರದ ಆದೇಶ ಹೊರಟು ವರ್ಷಗಳು ಕಳೆದರೂ ಕೂಡಾ ಕಂಪೆನಿಯು ಅದೇಶವನ್ನು ಜಾರಿಗೆ ತರದೆ ಕಾಲಹರಣ ಮಾಡುತ್ತಿದೆ. ಜಿಲ್ಲಾಧಿಕಾರಿ ಕನಿಷ್ಠ ಸಮಿತಿಯ ಸಭೆಯನ್ನೂ ಸೇರಿಸದೆ ಕಂಪೆನಿಯ ಪರ ಮೃದುಧೋರಣೆ ತೋರಿಸುತ್ತಿದ್ದಾರೆ ಎಂದು ಮುನೀರ್ ಕಾಟಿಪಳ್ಳ ಆರೋಪಿಸಿದರು.

ಮಾರಕ ಮಾಲಿನ್ಯದಿಂದ ಕಂಗೆಟ್ಟಿರುವ ಸ್ಥಳೀಯರು ಮತ್ತೊಮ್ಮೆ ತೀವ್ರತರದ ಹೋರಾಟಕ್ಕೆ ಮುಂದಾಗಿದ್ದು, ಕಂಪೆನಿಯ ವಂಚನೆ, ಜಿಲ್ಲಾಡಳಿತದ ಕಂಪೆನಿ ಪರ ನಿಲುವುಗಳನ್ನು ವಿರೋಧಿಸಿ, ಸರಕಾರದ ಆದೇಶ ತಕ್ಷಣ ಜಾರಿಗೆ ತರಬೇಕು‌ ಮತ್ತು ಮಾಲಿನ್ಯಕಾರಕ, ವಂಚಕ ಕಂಪೆನಿ ಎಂಆರ್‌ಪಿಎಲ್‌ ಅನ್ನು ಸಾವಿರ ಎಕರೆ ಕೃಷಿ ಭೂಮಿಯಲ್ಲಿ ವಿಸ್ತರಿಸುವ ಯೋಜನೆ ಕೈ ಬಿಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ಸಂದರ್ಭ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಝ್, ಜೋಕಟ್ಟೆ ಗ್ರಾಪಂ ಸದಸ್ಯರಾದ ಅಬೂಬಕರ್, ಹೇಮಾವತಿ ಮತ್ತಿತರರು ಉಪಸ್ಥಿತರಿದ್ದರು.

Comments are closed.