ಕರಾವಳಿ

ಅಯ್ಯಪ್ಪ ಮಾಲಾಧಾರಿಗಳ ಮೇಲೆ ಕಿಡಿಗೇಡಿಗಳಿಂದ ಹಲ್ಲೆ : ಇಬ್ಬರು ಗಂಭೀರ

Pinterest LinkedIn Tumblr

ಮಂಗಳೂರು, ಜನವರಿ 04: ಕರ್ನಾಟಕ-ಕೇರಳದ ಗಡಿಭಾಗವಾದ ಮಂಜೇಶ್ವರ ಬಳಿಯ ಕುಂಜತ್ತೂರು ಎಂಬಲ್ಲಿ ಗುರುವಾರ ತಡರಾತ್ರಿ ಐವರು ಅಯ್ಯಪ್ಪ ಮಾಲಾಧಾರಿಗಳ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಘಟನೆಯಲ್ಲಿ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಅಯ್ಯಪ್ಪ ವ್ರತಧಾರಿಗಳು ಕರ್ನಾಟಕದಿಂದ ತೆರಳಿದವರು ಎಂದು ಹೇಳಲಾಗಿದೆ. ಸಂತೋಷ್, ಶರತ್, ರಾಜೇಶ್, ನಿತೇಶ್, ಗುಣಪಾಲ್ ಎಂಬವರ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ.ಅದಲ್ಲದೇ ಮಂಜೇಶ್ವರದ ಕಡಂಬಾರು ದೇವಸ್ಥಾನದ ಬಳಿಯಿದ್ದ ಇಬ್ಬರು ಯುವಕರ ಮೇಲೆ ದುಷ್ಕರ್ಮಿಗಳು ತಲವಾರಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಇಬ್ಬರು ಮಹಿಳೆಯರು ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸಿದ್ದನ್ನು ಖಂಡಿಸಿ ಕೇರಳದಲ್ಲಿ ನಡೆಯುತ್ತಿರುವ ಘರ್ಷಣೆ ಕರ್ನಾಟಕ ಗಡಿ ಭಾಗವಾದ ಕಾಸರಗೋಡಿಗೂ ಹಬ್ಬಿದ್ದು, ಕಾಸರಗೋಡಿನಲ್ಲಿ ಹಿಂಸಾಕೃತ್ಯಗಳು ಮುಂದುವರೆದ ಹಿನ್ನೆಲೆಯಲ್ಲಿ ಮಂಗಜೇಶ್ವರ ತಾಲೂಕಿನಲ್ಲಿ 144 ಸೆಕ್ಷನ್ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ.

ಇದೇ ವೇಳೆ ಮಂಜೇಶ್ವರದಲ್ಲಿ ಕರ್ನಾಟಕದಿಂದ ತೆರಳಿದ ಅಯ್ಯಪ್ಪ ಮಾಲಾಧಾರಿಗಳ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ಆರಂಭಿಸಿದ್ದಾರೆ. ಪರಿಸರದಲ್ಲಿ ಹಿಂಸೆ ಕೋಮುದ್ವೇಷಕ್ಕೆ ತಿರುಗದಂತೆ ಹೆಚ್ಚುವರಿ ಪೊಲೀಸರನ್ನು ನಿಯೋಜನೆಗೊಳಿಸಲಾಗಿದ್ದು ಆಯಕಟ್ಟಿನ ಜಾಗಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡೆಸಲಾಗಿದೆ.

Comments are closed.