ಕರಾವಳಿ

ಪಂಜಿಮೊಗರು ಸಮೀಪ ಯುವಕನ ಬರ್ಬರ ಹತ್ಯೆ : ಪ್ರೇಯಸಿಯ ಅಣ್ಣನ ಮೇಲೆ ಶಂಕೆ!

Pinterest LinkedIn Tumblr

ಮಂಗಳೂರು, ಜನವರಿ 04: ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಂಜಿಮೊಗರು ಸಮೀಪ ಗುರುವಾರ ರಾತ್ರಿ ಯುವಕನೋರ್ವ ನನ್ನು ಮಾರಕಾಯುಧಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದ ಘಟನೆ ನಡೆದಿದ್ದು, ಪ್ರೇಮ ಪ್ರಕರಣಕ್ಕೆ ಸಂಬಂಧಿಸಿ ಈ ಕೊಲೆ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಮೃತ ಯುವಕನನ್ನು ಪಂಜಿಮೊಗರು ಸಮೀಪದ ಉರುಂದಾಡಿ ಗುಡ್ಡೆ ನಿವಾಸಿ ಯೋಗೀಶ್ ಎಂಬವರ ಪುತ್ರ ರಾಕೇಶ್(27) ಎಂದು ಗುರುತಿಸಲಾಗಿದೆ.

ಕೂಲಿ ಕಾರ್ಮಿಕನಾಗಿದ್ದ ರಾಕೇಶ್ ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ತನ್ನ ಸ್ಕೂಟರ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ಕೃತ್ಯ ಎಸಗಲಾಗಿದೆ. ರಾಕೇಶ್ ಅವರ ಸ್ಕೂಟರ್ ಪಂಜಿಮೊಗರು ಸಮೀಪದ ಮಾಲಾಡಿ ರೋಡ್ ಎಂಬಲ್ಲಿಗೆ ತಲುಪಿದಾಗ ದುಷ್ಕರ್ಮಿಗಳು ಅವರನ್ನು ಅಡ್ಡಗಟ್ಟಿ ಮಾರಕಾಯುಧಗಳಿಂದ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಗಂಭೀರ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ರಾಕೇಶ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಈ ಕೊಲೆಗೆ ಇದೇ ಕಾರಣವಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ರಾಕೇಶ್ ಅವರ ಪ್ರೇಯಸಿಯ ಅಣ್ಣನಿಂದ ಈ ಕೃತ್ಯ ನಡೆದಿದೆ ಎಂದು ಆರೋಪಿಸಲಾಗಿದೆ. ನಿನ್ನೆ ರಾತ್ರಿ ತಂಗಿಯ ಪ್ರೀತಿಯ ಬಗ್ಗೆ ಮಾತನಾಡಲು ರಾಕೇಶ್ ನನ್ನು ಕರೆಯಲಾಗಿತ್ತು ಎಂದು ಹೇಳಲಾಗಿದೆ. ರಾಕೇಶ್ ಬರುತ್ತಿದ್ದಂತೆ ಮಾರಕಾಸ್ತ್ರದಿಂದ ತಂಡ ದಾಳಿ ಮಾಡಿ ಪರಾರಿಯಾಗಿದೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಲಾಗಿದೆ.

ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ

Comments are closed.