ಕರಾವಳಿ

ಎಂಆರ್‌ಪಿಎಲ್ ವಿಸ್ತರಣೆ ವಿರೋಧಿಸಿ ನಾಳೆ ಮಂಗಳೂರಿನಲ್ಲಿ ‘ತುಳುನಾಡು ಉಳಿಸಿ’ ಜನಾಗ್ರಹ ಸಭೆ

Pinterest LinkedIn Tumblr

ಮಂಗಳೂರು,ಡಿಸೆಂಬರ್.20: ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆ (ಕೆಕೆಜೆವಿ) ಯ ಆಶ್ರಯದಲ್ಲಿ ಎಂಆರ್‌ಪಿಎಲ್ ವಿಸ್ತರಣೆ ವಿರೋಧಿಸಿ ನಾಳೆ ( ಡಿ.21) ಅಪರಾಹ್ಣ 3 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ‘ತುಳುನಾಡು ಉಳಿಸಿ’ ಜನಾಗ್ರಹ ಸಭೆ ಆಯೋಜಿಸಲಾಗಿದೆ ಎಂದು ವೇದಿಕೆಯ ಸ್ಥಾಪಕ ಟಿ.ಆರ್. ಭಟ್ ತಿಳಿಸಿದ್ದಾರೆ.

ಎಂಆರ್‌ಪಿಎಲ್ ತನ್ನ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು 1,011 ಎಕರೆ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಎಂಆರ್‌ಪಿಎಲ್‌ನಿಂದ ಈಗಾಗಲೇ ಸ್ಥಳೀಯ ಜನರು ಅನೇಕ ತೊಂದರೆ ಅನುಭವಿಸುತ್ತಿದ್ದಾರೆ. ನಾಲ್ಕನೇ ಹಂತದ ವಿಸ್ತರಣೆಯಿಂದ ಮಂಗಳೂರು ಪರಿಸರದ ಜನತೆ ಮತ್ತಷ್ಟು ತೊಂದರೆಗೆ ಒಳಗಾಗಲಿದ್ದಾರೆ.

ಈ ಹಿನ್ನೆಲೆಯಲ್ಲಿ ಎಂಆರ್‌ಪಿಎಲ್‌ನ ಉದ್ದೇಶಿತ ವಿಸ್ತರಣಾ ಯೋಜನೆ ಕೈಬಿಡಬೇಕು ಎಂದು ಆಗ್ರಹಿಸಲು ಪ್ರತಿಭಟನೆ ನಡೆಸಲಾಗುತ್ತಿದೆ. ಸಭೆಯಲ್ಲಿ ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಸಾಮಾಜಿಕ ಕಾರ್ಯಕರ್ತರು, ರೈತರು, ಕಾರ್ಮಿಕರು ಭಾಗವಹಿಸಲಿದ್ದಾರೆ ಎಂದರು.

ಭೋಪಾಲ್ ಅನಿಲ ದುರಂತದ ಸಂತ್ರಸರ ಪರ ಹೋರಾಟಗಾರ ಡಾ. ಸತಿನಾಥ ಸಾರಂಗಿ ಭೂಪಾಲ್ ಪ್ರಧಾನ ಭಾಷಣ ಮಾಡುವರು. ಸತಿನಾಥ ಸಾರಂಗಿಯವರು ಐಐಟಿ ವಾರಾಣಸಿಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ, ಭೋಪಾಲದ ಅನಿಲ ದುರಂತ ಸಂತ್ರಸ್ತರ ಪುನರ್ವಸತಿ, ಚಿಕಿತ್ಸೆ, ಪರಿಹಾರಕ್ಕಾಗಿ ಹಾಗು ಕಾನೂನು ಹೋರಾಟಗಳಲ್ಲಿ ತನ್ನನ್ನು ತೊಡಗಿಸಿಕೊಡ್ಡಿದರೆ.

ಮುಂದೆ ಎಲ್ಲಿಯೂ ಅಂಥಹಾ ಮಾನವ ಪ್ರೇರಿತ ದುರಂತಗಳ ತಡೆಗೆ ಕಾರ್ಯೋನ್ಮುಖರಾದವರು. ದೇಶ ವಿದೇಶಗಳಲ್ಲಿ ಅನೇಕ ಕಡೆ ಭೋಪಾಲ ದುರಂತದ ಬಗ್ಗೆ ತಮ್ಮ ಭಾಷಣ,ಬರಹ, ಹಾಗೂ ಚರ್ಚಾಕೂಟಗಳ ಮೂಲಕ ಜಾಗೃತಿ ನೀಡುತ್ತಾ ಬಂದಿದ್ದಾರೆ. ತಾವೇ ಸ್ಥಾಪಿಸಿದ ಸಂಭಾವನಾ ಟ್ರಸ್ಟ್ ಕ್ಲಿನಿಕ್ ಮೂಲಕ ಇಂದಿಗೂ ಅನಿಲ ಸೋರಿಕೆಯುಂದ ಉಂಟಾಗಿರುವ ಸಂತ್ರಸ್ತರ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಅವರ ನಿಸ್ವಾರ್ಥ ಸೇವೆಗೆ ಅನೇಕ ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದಿವೆ.

ಡಿ. 21 ಕ್ಕೆ ಬೆಳಿಗ್ಗೆ ಸತಿನಾಥ ಸಾರಂಗಿಯವರು ಎಮ್ ಆರ್ ಪಿ ಎಲ್ ಭೂಸ್ವಾಧೀನಕೊಳಗಾಗಲಿರುವ ಮತ್ತು ವಿಷಕಾರುವ ಕಾರ್ಖಾನೆಗಳಿರುವ ಪ್ರದೇಶಕ್ಕೆ ಭೇಟಿ ಕೊಟ್ಟು ಅಲ್ಲಿನ ಪರಿಸ್ಥಿತಿಯ ಬಗ್ಗೆ ಸ್ಥಳಿಯರೊಂದಿಗೆ ಚರ್ಚಿಸಲಿರುವರು. ಬಳಿಕ ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆ (ಕೆಕೆಜೆವಿ) ಯ ಆಶ್ರಯದಲ್ಲಿ ಅಪರಾಹ್ಣ 3 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ನಡೆಯುವ ‘ಎಂಆರ್ ಪಿ ಎಲ್ ವಿಸ್ತರಣೆ ವಿರೋಧಿಸಿ, ತುಳುನಾಡನ್ನು ಉಳಿಸಿ’ ಜನಾಗ್ರಹ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ದಿನಾಂಕ 22 ರಂದು ಬೆಳಿಗ್ಗೆ 10 ರಿಂದ 12 ಗಂಟೆ ವರಗೆ ಸಂತ ಅಲೋ‌ಸಿಯಸ್ ಕಾಲೇಜಿನ ಸಭಾಂಗಣದಲ್ಲಿ ಹೋರಾಟಗಾರು, ಪತ್ರಕರ್ತರು, ಸಂಘಸಂಸ್ಥೆ ಹೊಣೆಗಾರರು ಹಾಗು ವಿದಾರ್ಥಿಗಳೊಂದಿಗೆ ಮುಕ್ತ ಸಂವಾದ ನಡೆಸಲಿದ್ದಾರೆ.

ಎಂಆರ್‌ಪಿಎಲ್ ಮತ್ತು ಸುತ್ತಲಿನ ವಿಷಕಾರಿ ಉದ್ದಿಮೆಗಳಿಂದ ಮಾನವನ ಆರೋಗ್ಯ, ಪರಿಸರ, ಮೀನುಗಾರಿಕೆ ಅಪಾಯದಲ್ಲಿದೆ. ಜನವಸತಿ ಪ್ರದೇಶದಲ್ಲಿ ಅಪಾಯಕಾರಿ ಕಾರ್ಖಾನೆಗಳು ಇರಬಾರದು ಎಂಬ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮವನ್ನು ಇಲ್ಲಿ ಉಲ್ಲಂಘಿಸಲಾಗಿದೆ. ಪಣಂಬೂರು-ಬೈಕಂಪಾಡಿಯಲ್ಲಿ ಈಗಾಗಲೇ ಭೀಕರ ದುರ್ಘಟನೆ ಸಾಧ್ಯತೆಯಿರುವ 11 ರಾಸಾಯನಿಕ ಸ್ಥಾವರಗಳಿವೆ.

2011-18ರ ಅವಧಿಯಲ್ಲಿ ಎಂಆರ್‌ಪಿಎಲ್ ಪ್ರದೇಶದಲ್ಲಿ 34 ಅಪಘಾತ ಸಂಭವಿಸಿದೆ. 12 ಮಾರಣಾಂತಿಕವಾಗಿದ್ದು, 18 ಸಾವು ಸಂಭವಿಸಿದೆ. ಸಮುದ್ರಕ್ಕೆ ಕಲುಷಿತ ನೀರು ಬಿಡುತ್ತಿರುವುದರಿಂದ ಸಮುದ್ರದ ನೀರೂ ವಿಷವಾಗುವ ಜತೆಗೆ ಮೀನು ಉತ್ಪತ್ತಿ ಕಡಿಮೆಯಾಗುತ್ತಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಎಂಆರ್‌ಪಿಎಲ್ ವಿಸ್ತರಣೆಗೆ ಅವಕಾಶ ನೀಡಬಾರದು ಎಂದು ಟಿ.ಆರ್.ಭಟ್ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.

Comments are closed.