ಕರಾವಳಿ

ಬೋಳು ಗುಡ್ಡೆಯನ್ನು ನಂದನವನ ಮಾಡಿದ ಅಮೈ ಮಹಾಲಿಂಗ ನಾಯ್ಕರಿಗೆ ಮಂಗಳೂರು ಪ್ರೆಸ್ ಕ್ಲಬ್‌ನ ವರ್ಷದ ಪ್ರಶಸ್ತಿ

Pinterest LinkedIn Tumblr

ಮಂಗಳೂರು: ಏಕಾಂಗಿಯಾಗಿ ಅಪೂರ್ವ ಮತ್ತು ಅಪಾಯಕಾರಿಯಾದ ಕೆಲಸದ ಮೂಲಕ ಜೀವಜಲವನ್ನು ತರಿಸಿ ಬೋಳು ಗುಡ್ಡೆಯನ್ನು ನಂದನವನ ಮಾಡಿದ ಪ್ರಯತ್ನಶೀಲ ಪ್ರಗತಿಪರ ಕೃಷಿಕ ಅಮೈ ಮಹಾಲಿಂಗ ನಾಯ್ಕ ಅವರು ಮಂಗಳೂರು ಪ್ರೆಸ್ ಕ್ಲಬ್‌ನ ವರ್ಷದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಬಂಟ್ವಾಳ ತಾಲೂಕಿನ ಅಡ್ಯನಡ್ಕ ಸಮೀಪದ ಅಮೈ ನಿವಾಸಿ 73ರ ಹರೆಯದ ಮಹಾಲಿಂಗ ನಾಯ್ಕ ಅವರನ್ನು ಪ್ರೊ. ಬಾಲಕೃಷ್ಣ ಗಟ್ಟಿ, ಡಾ.ವಸಂತ ಕುಮಾರ್ ಪೆರ್ಲ ಮತ್ತು ಡಾ.ನಾಗವೇಣಿ ಮಂಚಿ ನೇತೃತ್ವದ ಆಯ್ಕೆ ಸಮಿತಿಯು 2018ನೇ ವರ್ಷದ ಮಂಗಳೂರು ಪ್ರೆಸ್ ಕ್ಲಬ್‌ನ ಪುರಸ್ಕಾರಕ್ಕೆ ಆಯ್ಕೆ ಮಾಡಿದೆ.

ಜನವರಿ 5ರಂದು ಪ್ರಶಸ್ತಿ ಪ್ರದಾನ

ಉರ್ವ ಚರ್ಚ್ ಸಭಾಂಗಣದಲ್ಲಿ ಜನವರಿ 5ರಂದು ನಡೆಯಲಿರುವ ಪ್ರೆಸ್ ಕ್ಲಬ್ ದಿನಾಚರಣೆಯಂದು ಅಮೈ ಮಹಾಲಿಂಗ ನಾಯ್ಕ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಂಗಳೂರು ಪ್ರೆಸ್ ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರಾವಳಿ ಜಿಲ್ಲೆಗಳಲ್ಲಿ ಕೃಷಿ ನಿಧಾನವಾಗಿ ಹಿನ್ನೆಲೆಗೆ ಸರಿಯುತ್ತಿರುವ ಸಂದರ್ಭದಲ್ಲಿ ಕೃಷಿಯೇ ಬದುಕಿಗೆ ಮೂಲಾಧಾರವೆಂಬ ಕಲ್ಪನೆ ಯನ್ನು ಬಿತ್ತುತ್ತಿರುವ ಸಾಧಕ ಅಮೈ ಮಾಹಾಲಿಂಗ ನಾಯ್ಕ. ಕೃಷಿಕಾಯಕದ ಮೂಲಕ ಸ್ವಾವಲಂಭಿ ಜೀವನ ಸಾಧ್ಯ ಎಂಬುದನ್ನು ಆಧುನಿಕ ತಲೆಮಾರಿಗೆ ತೋರಿಸಿಕೊಟ್ಟಿದ್ದಾರೆ.

ಕೃಷಿಗೆ ನೀರು ಹಾಯಿಸಲು ಪಂಪ್ ಸೆಟ್‌ಗಳ ಸೌಲಭ್ಯಗಳೇ ಇಲ್ಲದ ಕಾಲದಲ್ಲಿ ಹಿಂದಿನ ತಲೆಮಾರಿನವರು ಅವಲಂಭಿಸಿದ್ದ ಸುರಂಗ ನೀರಿನ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು, ಇದೇ ವ್ಯವಸ್ಥೆಯಲ್ಲಿ ವಿದ್ಯುತ್‌ರಹಿತವಾಗಿ ಗ್ರಾವಿಟಿ ನೆರವಿನಲ್ಲಿ ಕೃಷಿಗೆ ತುಂತುರು ನೀರಾವರಿ, ಸ್ಪ್ರಿಂಕ್ಲರ್ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಯಶಸ್ವಿಯಾಗಿರುವ ಮಾಹಾಲಿಂಗ ನಾಯ್ಕ ಏಕಾಂಗಿಯಾಗಿ ಏಳು ಸುರಂಗಗಳನ್ನು ಕೊರೆದ ಒನ್ ಮ್ಯಾನ್ ಆರ್ಮಿ.

ಮಹಾಲಿಂಗ ನಾಯ್ಕರ ಬದುಕಿನ ಯಶೋಗಾಥೆ :

ಅಡಿಕೆ ,ತೆಂಗಿನ ಮರ ಏರುವುದರಲ್ಲಿ ಎಕ್ಸ್ಪರ್ಟ್ ಆಗಿದ್ದ ಕೃಷಿ ಕೂಲಿ ಕಾರ್ಮಿಕ ಮಹಾಲಿಂಗ ನಾಯ್ಕ 40 ವರ್ಷಗಳ ಹಿಂದೆ ಸ್ವಂತ ಊರಿನ ಕೃಷಿಕರ ತೋಟಗಳಲ್ಲಿ ದುಡಿಯುವಾಗ ಸ್ವಂತ ತೋಟ ಮಾಡುವ ಸ್ವಾವಲಂಭಿ ಜೀವನದ ಕನಸು ಕಂಡಿದ್ದರು.ಆದರೆ ಇದಕ್ಕಾಗಿ ಅವರಲ್ಲಿ ಜಮೀನು ಇರಲಿಲ್ಲ. ಭೂ ಮಾಲಕ ಅಮೈ ಮಹಾಬಲ ಭಟ್ಟರ ತೋಟಕ್ಕೆ ದಿನಾಲು ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಈ ಆದಾಯದಲ್ಲಿ ಅವರ ಸಂಸಾರದ ರಥ ಸಾಗುತ್ತಿತ್ತು. ಅದೊಂದು ದಿನ ಮಹಾಬಲ ಭಟ್ ಅವರು ಮಹಾಲಿಂಗ ನಾಯ್ಕರಿಗೆ ಎರಡು ಎಕ್ರೆ ಜಮೀನು ನೀಡಲು ಒಪ್ಪಿಕೊಂಡರು. 1978ರಲ್ಲಿ ಮಹಾಬಲ ಭಟ್ಟರ ಬೆಂಬಲದಿಂದಾಗಿ ಎರಡು ಎಕ್ರೆ ಗುಡ್ಡ ‘ದರ್ಖಾಸ್ತು ‘ ರೂಪದಲ್ಲಿ ಮಹಾಲಿಂಗ ನಾಯ್ಕರಿಗೆ ಪ್ರಾಪ್ತವಾಯಿತು.

ಮನೆ ಕಟ್ಟಲು ಅಸಾಧ್ಯವಾದ, ನೀರಿಲ್ಲದ ಇಳಿಜಾರು ಬೋಳು ಗುಡ್ಡದಲ್ಲಿ ಕೃಷಿ ತೋಟ ಮಾಡುವುದು ಮಹಾಲಿಂಗ ನಾಯ್ಕರಿಗೆ ಸವಾಲಾಗಿ ಕಂಡು ಬಂದರೂ ಅವರು ತನ್ನ ಪ್ರಯತ್ನವನ್ನು ಬಿಡಲಿಲ್ಲ. ಅಲ್ಲೆÃ ಭವಿಷ್ಯ ರೂಪಿಸುವ ಉದ್ದೆÃಶದಿಂದ ಸ್ವಲ್ಪ ಜಾಗವನ್ನು ಸಮತಟ್ಟು ಮಾಡಿ ಸಣ್ಣದೊಂದು ಗುಡಿಸಲು ಕಟ್ಟಿದರು. ಕುಡಿಯುವ ನೀರಿಗಾಗಿ ಪಕ್ಕದ ಮನೆಯವರನ್ನು ಆಶ್ರಯಿಸಿದ್ದ ಮಹಾಲಿಂಗ ನಾಯ್ಕರಿಗೆ ಬಾವಿ ತೋಡಿಸಲು ಕೈಯಲ್ಲಿ ದುಡ್ಡಿರಲಿಲ್ಲ. ಬಾವಿ ತೋಡಿದರೆ ನೀರು ದೊರೆಯುವ ಸಾಧ್ಯತೆ ಇರಲಿಲ್ಲ. ಏಕಾಂಗಿಯಾಗಿ ಬಾವಿ ತೋಡುವುದು ಅಸಾಧ್ಯ ಮಾತು. ಆಗ ಅವರಿಗೆ ಹೊಳೆದುದು ಸುರಂಗ ಕೊರೆತ. ಅರ್ಧ ದಿನ ಕೂಲಿ ಕೆಲಸ , ಉಳಿದರ್ಧ ದಿನ ಮತ್ತು ರಾತ್ರಿ ಹೊತ್ತು ಸುರಂಗ ಕೊರೆಯುವ ಮೂಲಕ ಜೀವಜಲ ಹುಡುಕುವ ಭಗೀರಥ ಪ್ರಯತ್ನ.

ಮಹಾಲಿಂಗ ನಾಯ್ಕ ಮೊದಲು 30 ಮೀಟರ್ ಉದ್ದದ ಸುರಂಗ ಕೊರೆದರೂ ನೀರು ಸಿಗಲಿಲ್ಲ. ಇದರಿಂದ ನಿರಾಸೆಯಾಗದ ಅವರು ಮತ್ತೆ ಪ್ರಯತ್ನ ಮುಂದುವರಿಸಿ ಸೀಮೆ ಎಣ್ಣೆ , ತೆಂಗಿನೆಣ್ಣೆ ದೀಪದ ಬೆಳಕಿನಲ್ಲಿ ಪ್ರತಿ ವರ್ಷ ತಲಾ ಒಂದರಂತೆ 25-30 ಮೀಟರ್ ಉದ್ದದ ಸತತ ಐದು ಸುರಂಗಗಳನ್ನು ಕೊರೆದರು. ಆದರೆ ಅವರ ಅಪಾಯಕಾರಿ ಪ್ರಯತ್ನಕ್ಕೆ ಫಲ ದೊರೆಯಲಿಲ್ಲ. ಅವರ ಪ್ರಯತ್ನವನ್ನು ನೋಡಿ ಹಲವರು ಗೇಲಿ ಮಾಡಿದ್ದರು ಎಂದು ಮಾಹಾಲಿಂಗ ನಾಯ್ಕ ಅಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

ಯಾರು ಏನು ಹೇಳಿದರೂ ತನ್ನ ಭಗೀರಥ ಪ್ರಯತ್ನವನ್ನು ನಿಲ್ಲಿಸದೆ ಮುಂದುವರಿಸಿದ ಮಹಾಲಿಂಗ ನಾಯ್ಕರಿಗೆ ಆರನೇ ಪ್ರಯತ್ನ ಫಲ ನೀಡಿತು. ಈ ಪ್ರಯತ್ನದಲ್ಲಿ ನೀರು ಕಾಣಿಸಿತು. 25 ಮೀಟರ್ ಉದ್ದದ ಸುರಂಗದಲ್ಲಿ ಸಿಕ್ಕಿದ ನೀರಿನಲ್ಲಿ ಕೃಷಿ ಸಾಧ್ಯವಿಲ್ಲ ಎನ್ನುವುದು ಅವರಿಗೆ ಅರಿವಾಯಿತು.

ಆರನೇ ಸುರಂಗದ ಪಕ್ಕದಲ್ಲಿ ಇನ್ನೊಂದು ಸುರಂಗ ಕೊರೆದರು. 25 ಮೀಟರ್ ತಲುಪುವಾಗ ನೀರು ಕಾಣಿಸಿಕೊಂಡಿತು. ಮತ್ತೆ ಮುಂದುವರಿಸಿ 75 ಮೀಟರ್ ಉದ್ದದ ಸುರಂಗವಾಗುವ ಹೊತ್ತಿಗೆ ಯೆಥೇಚ್ಚ ನೀರು ಸಿಕ್ಕಿತು. ಆಗ ಅವರ ತೋಟದ ಕನಸು ಮತ್ತೆ ಗರಿಗೆದರಿತು. ಸುರಂಗದ ನೀರನ್ನು ಸಂಗ್ರಹಿಸಲು ಮಣ್ಣಿನ ಟ್ಯಾಂಕ್ ನಿರ್ಮಿಸಿದರು. ನೀರಿನ ಸಂಪನ್ನತೆಯಿಂದಾಗಿ ತೋಟ ಮಾಡುವ ಕನಸು ನನಸಾಯಿತು. ಗುಡ್ಡವನ್ನು ಸಮತಟ್ಟು ಮಾಡಿ ಭತ್ತ, ಅಡಿಕೆ, ತೆಂಗು , ಬಾಳೆ ಕೃಷಿ ಕೈಗೊಂಡರು. ಮಡದಿ ಲಲಿತ ಮೂವರು ಮಕ್ಕಳು ಪ್ರಯತ್ನಕ್ಕೆ ಕೈ ಜೋಡಿಸಿದರು.

ಬದುಕಿನಲ್ಲಿ ಎದುರಾದ ದುರಂತ :

ಕೃಷಿಯಿಂದ ಆದಾಯ ಬರುತ್ತಿದ್ದರೂ ಅವರು ಹಿಂದಿನ ದುಡಿಮೆಯ ಕಾಯಕವನ್ನು ನಿಲ್ಲಿಸಿರಲಿಲ್ಲ ಹದಿನಾಲ್ಕು ವರ್ಷಗಳ ಹಿಂದೆ ನೆಗಳಗುಳಿ ಎಂಬಲ್ಲಿ ಕೃಷಿಕರೊಬ್ಬರ ತೋಟದಲ್ಲಿ ತೆಂಗಿನ ಮರ ಹತ್ತುತ್ತಿದ್ದಾಗ ಮಹಾಲಿಂಗ ನಾಯ್ಕ ಆಕಸ್ಮಿಕವಾಗಿ ಕೆಳ ಜಾರಿ ಬಿದ್ದು ಗಾಯ ಗೊಂಡರು. ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆ ಸೇರಿದ ಮಹಾಲಿಂಗ ನಾಯ್ಕ್ಕ ಮೂರು ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿದ್ದರು. ಬಳಿಕ ಮನೆಗೆ ಮರಳಿದ್ದರೂ ಚೇತರಿಸಿಕೊಳ್ಳುವ ಹೊತ್ತಿಗೆ ಒಂದು ವರ್ಷ ಕಳೆದಿತ್ತು. ದುಡಿದು ಉಳಿಸಿದ ಹಣ ಅವರ ಕಷ್ಟದ ಕಾಲಕ್ಕೆ ನೆರವಿಗೆ ಬಂತು. ಈ ಘಟನೆಯ ಬಳಿಕ ಅಡಿಕೆ, ತೆಂಗಿನ ಮರ ಹತ್ತುವ ಕಾಯಕದಿಂದ ನಿವೃತ್ತರಾದರು. ಆದರೆ ಕೃಷಿಯನ್ನು ಮುಂದುವರಿಸಿದರು.

ಒಂದು ಎಕರೆಯಲ್ಲಿ ಕೃಷಿ :

ಮಹಾಲಿಂಗ ನಾಯ್ಕ ಒಂದು ಎಕ್ರೆಯಲ್ಲಿ ಅಡಿಕೆ, ತೆಂಗು, ಬಾಳೆ, ಕಾಳುಮೆಣಸಿನ ಕೃಷಿ ಕೈಗೊಂಡಿದ್ದಾರೆ. ಇನ್ನೊಂದು ಎಕ್ರೆಯಲ್ಲಿ ಕಾಡು ಬೆಳೆಸಿದ್ದಾರೆ. ಗೇರು ಕೃಷಿಯೂ ಇದೆ. ಮಣ್ಣಿನ ಟ್ಯಾಂಕಿಯಿಂದ ವಿದ್ಯುತ್‌ನ ಖರ್ಚಿಲ್ಲದೆ ಗ್ರಾವಿಟಿ ಮೂಲಕ ಅಡಿಕೆ, ತೆಂಗು ಮತ್ತು ಬಾಳೆ ಗಿಡಗಳಿಗೆ ನೀರು ಉಣಿಸುತ್ತಾರೆ. ಅವರ ತೋಟದಲ್ಲಿ 300 ಅಡಿಕೆ, 75 ತೆಂಗು, 200 ಬಾಳೆ ಗಿಡಗಳಿವೆ. ಹಟ್ಟಿಗೊಬ್ಬರ , ಕಾಂಪೋಸ್ಟ್ ಹೊರತು ಬೇರೆ ಯಾವುದೇ ಗೊಬ್ಬರದ ಬಗ್ಗೆ ಮಾಹಾಲಿಂಗ ನಾಯ್ಕರಿಗೆ ಗೊತ್ತಿಲ್ಲ ಜಮೀನಿನಲ್ಲಿ ಇಂಗು ಗುಂಡಿಗಳ ಮೂಲಕ ಜಲಕೊಯ್ಲು ಮಾಡುತ್ತಾರೆ. ನಾಲ್ಕು ವರ್ಷಗಳ ಹಿಂದೆ ಎರಡು ಬೋರ್ ವೆಲ್ ತೆಗೆಸಿದ್ದಾರೆ. ಮೊದಲ ಬೋರ್‌ವೆಲ್ 400 ಅಡಿ ಸಾಗಿದ್ದರೂ ನೀರು ದೊರೆಯಲಿಲ್ಲ. ಎರಡನೇ ಬೋರ್‌ನಲ್ಲಿ 370 ಅಡಿ ತಲುಪುವ ಹೊತ್ತಿಗೆ ಒಂದು ಇಂಚು ನೀರು ಸಿಕ್ಕಿದೆ. ಇದೀಗ ಬೋರ್ ವೆಲ್‌ಗೆ ಪಂಪ್ ಸೆಟ್ ಇದೀಗ ಅಳವಡಿಸಿದ್ದಾರೆ.

ಸಾಲಕ್ಕಾಗಿ ಯಾವುದೇ ಬ್ಯಾಂಕ್ ಮೊರೆ ಹೋಗಿಲ್ಲ. ಕೃಷಿಯಲ್ಲಿ ದೊರೆತ ಆದಾಯದಿಂದ ಸ್ವಂತ ಮನೆ ಕಟ್ಟಿದ್ದಾರೆ. ಮನೆಗೆ ವಿದ್ಯುತ್ ಸೇರಿದಂತೆ ಮೂಲಸೌಕರ್ಯಗಳು ಬಂದಿವೆ. ಶಾಲಾ ಕಾಲೇಜುಗಳ ಮೆಟ್ಟಿಲು ಹತ್ತದ ಛಲಗಾರ ಮಹಾಲಿಂಗ ನಾಯ್ಕರಿಗೆ ದುಡಿಮೆ ಎಲ್ಲವನ್ನು ನೀಡಿದೆ.ಮಹಾಲಿಂಗ ನಾಯ್ಕರ ಏಕಾಂಗಿ ಸಾಧನೆಯನ್ನು ದೂರದರ್ಶನ ತನ್ನ ‘ವಾಟರ್ ವಾರಿಯರ್’ ಧಾರಾವಾಹಿಯಲ್ಲಿ ಬಿತ್ತರಿಸಿದೆ.

Comments are closed.