ರಾಷ್ಟ್ರೀಯ

ಸಿಖ್ ವಿರೋಧಿ ದಂಗೆ: ಜೀವಾವಧಿ ಶಿಕ್ಷೆ ಪ್ರಶ್ನಿಸಿ ಸುಪ್ರೀಂ ಮೊರೆ ಹೋಗಲು ಸಜ್ಜನ್ ಕುಮಾರ್ ನಿರ್ಧಾರ

Pinterest LinkedIn Tumblr

ನವದೆಹಲಿ: 1984ರ ಸಿಖ್​ ವಿರೋಧಿ ದಂಗೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಹಿರಿಯ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಅವರು ಹೈಕೋರ್ಟ್ ತೀರ್ಪು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.

ಈ ಕುರಿತು ಪಿಟಿಐ ಪ್ರತಿಕ್ರಿಯಿಸಿದ ಸಜ್ಜನ್ ಕುಮಾರ್ ಅವರ ವಕೀಲ ಅನಿಲ್ ಶರ್ಮಾ ಅವರು, ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸುತ್ತೇವೆ. ಆದರೆ ಸುಮಾರು 200 ಪುಟಗಳ ತೀರ್ಪುನ್ನು ಸಂಪೂರ್ಣ ತಿಳಿದುಕೊಳ್ಳಲು ಸಮಯ ಬೇಕು ಎಂದಿದ್ದಾರೆ.

ದೆಹಲಿ ಹೈಕೋರ್ಟ್ ನಲ್ಲಿ 73 ವರ್ಷದ ಸಜ್ಜನ್ ಕುಮಾರ್ ಪರ ವಾದ ಮಂಡಿಸಿದ್ದ ಅನಿಲ್ ಶರ್ಮಾ ಅವರು, ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಡಿಸೆಂಬರ್ 31ರ ವರೆಗೆ ಸಮಯ ನೀಡಿದ್ದು, ಅಷ್ಟರೊಳಗೆ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಒಂದು ವೇಳೆ ಡಿಸೆಂಬರ್ 31ರೊಳಗೆ ಮೇಲ್ಮನವಿ ಸಲ್ಲಿಸದಿದ್ದರೆ ಸಜ್ಜನ್ ಕುಮಾರ್ ಅವರು ಕೋರ್ಟ್ ಗೆ ಶರಣಾಗಲಿದ್ದಾರೆ ಎಂದು ಹೇಳಿದ್ದಾರೆ.

ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಸಜ್ಜನ್ ಕುಮಾರ್ ದೋಷಿ ಎಂದು ತೀರ್ಪು ನೀಡಿದ್ದ ದೆಹಲಿ ಹೈಕೋರ್ಟ್, ಅಪರಾಧಿಗೆ ಜೀವಾವಧಿ ಶಿಕ್ಷೆ ನೀಡಿದೆ. ಅಲ್ಲದೆ ಡಿಸೆಂಬರ್ 31ರೊಳಗೆ ಶರಣಾಗುವಂತೆ ಆದೇಶಿಸಿದೆ.

1984ರ ಅಕ್ಟೋಬರ್​ 31ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ಬಳಿಕ ದೆಹಲಿ ಕಂಟೋನ್ ಮೆಂಟ್​ ಏರಿಯಾದಲ್ಲಿ ಗಲಭೆ ನಡೆದಿತ್ತು. ಈ ವೇಳೆ ಐವರನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎಸ್​​ ಮುರಳೀಧರ್​ ಹಾಗೂ ನ್ಯಾ. ವಿನೋದ್​ ಗೋಯಲ್​​ ಅವರ ಪೀಠ ಇಂದು ತೀರ್ಪು ಪ್ರಕಟಿಸಿದೆ.

Comments are closed.