ಕರ್ನಾಟಕ

ರಾಜ್ಯ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ! ಡಿ.22ಕ್ಕೆ ಸಂಪುಟ ವಿಸ್ತರಣೆ, ಕಾಂಗ್ರೆಸ್ ನ 6, ಜೆಡಿಎಸ್ ನ 2 ಶಾಸಕರಿಗೆ ಸಚಿವ ಸ್ಥಾನದ ಭಾಗ್ಯ

Pinterest LinkedIn Tumblr

ಬೆಂಗಳೂರು: ಭಾರಿ ಕುತೂಹಲ ಕೆರಳಿಸಿದ್ದ ರಾಜ್ಯ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದ್ದು, ಇದೇ ಡಿಸೆಂಬರ್ 22ರಂದು ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ನಿರ್ಧರಿಸಿದೆ.

ಈ ಬಗ್ಗೆ ಇಂದು ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಇದೇ ತಿಂಗಳ 22 ರಂದು ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ. ಆ ಮೂಲಕ ಜೆಡಿಎಸ್ ಇಬ್ಬರು ಶಾಸಕರು ಮತ್ತು ಕಾಂಗ್ರೆಸ್ ನ 6 ಶಾಸಕರನ್ನು ಸಚಿವರಾಗಿ ಆಯ್ಕೆ ಮಾಡಲು ಇಂದಿನ ಸಭೆಯಲ್ಲಿ ನಿರ್ಧರಿಸಲಾಗಿದೆ.

ಸಮನ್ವಯ ಸಮಿತಿ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಡಿಸೆಂಬರ್ 22ರಂದು ಸಂಪುಟ ವಿಸ್ತರಣೆ ನಡೆಯಲಿದ್ದು, ಅಂದೇ ನಿಗಮ ಮಂಡಳಿಗಳಿಗೂ ನೇಮಕ ಮಾಡಲಾಗುವುದು ಎಂದು ತಿಳಿಸಿದ್ದಾರೆ.

‘ಡಿಸೆಂಬರ್ 22ರಂದು ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಆರು ಮಂದಿ ಕಾಂಗ್ರೆಸ್​ ಶಾಸಕರು, ಇಬ್ಬರು ಜೆಡಿಎಸ್​ ಶಾಸಕರು ಸಂಪುಟ ಸೇರಲಿದ್ದಾರೆ. ಅಂದೇ ನಿಗಮ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರನ್ನೂ ನೇಮಿಸಲಾಗುತ್ತದೆ. ಜತೆಗೆ, ಸಂಸದೀಯ ಕಾರ್ಯದರ್ಶಿ ಹಾಗೂ ರಾಜಕೀಯ ಕಾರ್ಯದರ್ಶಿ ಹುದ್ದೆಗಳಿಗೂ ನೇಮಕ ಮಾಡಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಆಪರೇಷನ್​ ಕಮಲ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕಾಂಗ್ರೆಸ್​ ಮತ್ತು ಜೆಡಿಎಸ್​ನ ಯಾವ ಶಾಸಕರು ಬಿಜೆಪಿಯತ್ತ ಮುಖ ಮಾಡುವುದಿಲ್ಲ. ಬಿಜೆಪಿ ಆಪರೇಷನ್​ ಕಮಲ ಮಾಡಲು ಹೋಗಿ ವಿಫಲವಾಗಿದೆ. ರಾಜ್ಯದಲ್ಲಿ ಸರ್ಕಾರ ರಚಿಸುವ ಬಗ್ಗೆ ಬಿಜೆಪಿ ಹಗಲುಗನಸು ಕಾಣುತ್ತಿದೆ ಎಂದು ಟೀಕಿಸಿದರು. ಅಂತೆಯೇ ಭಿನ್ನಮತೀಯ ಚಟುವಟಿಕೆಯಲ್ಲಿ ತೊಡಗಿಡರುವ ಜಾರಕಿಹೊಳಿ ಸೋದರರ ಕುರಿತು ಮಾತನಾಡಿದ ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ, ರಮೇಶ್​ ಜಾರಕಿಹೊಳಿ ಪಕ್ಷ ತೊರೆಯುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಯಾವ ದೇಶದಲ್ಲಿ ಭೂಕಂಪನವಾಗುತ್ತದೆಯಂತೆ? ಯಡಿಯೂರಪ್ಪ ಹೇಳಿದ್ದನ್ನು ಕೇಳಿಸಿಕೊಂಡು ಜಾವ್ಡೇಕರ್​ ಹೀಗೆ ಹೇಳಿದ್ದಾರೆ ಎಂದು ವ್ಯಂಗ್ಯವಾಡಿದರು.

ಇನ್ನು ಪರಿಷತ್​ ಸಭಾಪತಿ ಸ್ಥಾನದ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಇನ್ನೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಬೆಂಗಳೂರಿನ ಕುಮಾರ ಕೃಪಾ ಗೆಸ್ಟ್​ ಹೌಸ್​ನಲ್ಲಿ ನಡೆದ ಈ ಸಭೆಯಲ್ಲಿ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ, ಸದಸ್ಯರೂ ಆಗಿರುವ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಪರಮೇಶ್ವರ್​, ರಾಜ್ಯ ಕಾಂಗ್ರೆಸ್​ ಉಸ್ತುವಾರಿ ವೇಣುಗೋಪಾಲ್​ ಮತ್ತು ಜೆಡಿಎಸ್​ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್​ ಅಲಿ ಹಾಜರಾಗಿದ್ದರು.

Comments are closed.