ಕರಾವಳಿ

ಕುಖ್ಯಾತ ಕ್ರಿಮಿನಲ್‌ಗೆ ಗೌಪ್ಯ ಮಾಹಿತಿ ನೀಡುತ್ತಿದ್ದ ಸಿಸಿಬಿ ಪೊಲೀಸ್ : ಆಡಿಯೋ ವೈರಲ್ – ಬೆಚ್ಚಿಬಿದ್ದ ಅಧಿಕಾರಿಗಳು

Pinterest LinkedIn Tumblr

ಮಂಗಳೂರು, ಡಿಸೆಂಬರ್ 05: ದ.ಕ.ಜಿಲ್ಲೆಯ ಪೊಲೀಸ್ ಇಲಾಖೆಯ ಕೆಲವು ಪ್ರಮುಖ ಗೌಪ್ಯ ಮಾಹಿತಿಗಳನ್ನು ಮಂಗಳೂರಿನ ಸಿಸಿಬಿ ಪೊಲೀಸ್ ಸಿಬ್ಬಂದಿ ಓರ್ವ ಕುಖ್ಯಾತ ನಟೋರಿಯಸ್ ಆರೋಪಿಗೆ ನೀಡುತ್ತಿದ್ದ ಎಂಬ ಗಂಭೀರ ಆರೋಪ ಕೇಳಿ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸ್ ಆಯುಕ್ತರು ಇಲಾಖಾ ತನಿಖೆಗೆ ಆದೇಶಿಸಿದ್ದಾರೆ.

ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಕುಖ್ಯಾತ ಕ್ರಿಮಿನಲ್ ಕೇರಳ ಮಂಜೇಶ್ವರದ ತಲಕಿ ರಫೀಕ್ ಜತೆ ಮಂಗಳೂರು ಸಿಟಿ ಕ್ರೈಂ ಬ್ರಾಂಚ್ (ಸಿಸಿಬಿ) ಕಾನ್‌ಸ್ಟೇಬಲ್ ಚಂದ್ರ ಎಂಬವರು ಹಣಕಾಸಿನ ವಿಚಾರದಲ್ಲಿ ಮೊಬೈಲ್ ಮೂಲಕ ನಡೆಸಿರುವ ಮಾತುಕತೆಯ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಿಸಿಬಿ ಪೊಲೀಸ್ ಚಂದ್ರ ಹಲವು ಪ್ರಕರಣದ ಪ್ರಮುಖ ಆರೋಪಿ ಕೇರಳದ ಮಂಜೇಶ್ವರ ನಿವಾಸಿ ನಟೋರಿಯಸ್ ತಲಕಿ ರಫೀಕ್ ಗೆ ಇಲಾಖೆಯ ಗೌಪ್ಯ ಮಾಹಿತಿ ನೀಡುತ್ತಿದ್ದ. ಪ್ರತಿ ಮಾಹಿತಿಗೆ ಇಂತಿಷ್ಟು ಅಮೌಂಟ್ ಎಂದು ಮೊದಲೇ ಡೀಲ್ ಮಾಡುತ್ತಿದ್ದ ಎಂದು ಹೇಳಲಾಗಿದೆ.

ಪಾತಕಿ ತಲಕಿ ರಫೀಕ್ ವಿರುದ್ಧ ವಿವಿಧ ಠಾಣೆಗಳಲ್ಲಿ ಸುಮಾರು 19 ಪ್ರಕರಣಗಳಿವೆ. ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾನೆ. ಈತನಿಗೆ ಬೇಕಾದವರ ಅಥವಾ ವಿರೋಧಿ ಗ್ಯಾಂಗ್‌ನ ಸದಸ್ಯರ ಮೊಬೈಲ್ ಲೊಕೇಶನ್ ಮಾಹಿತಿ, ವ್ಯಕ್ತಿಗಳ ಹಿನ್ನೆಲೆ ಸೇರಿದಂತೆ ಪೊಲೀಸ್ ಇಲಾಖೆಯ ಕೆಲವೊಂದು ಗೌಪ್ಯ ಮಾಹಿತಿಗಳನ್ನು ಚಂದ್ರ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.

ಬಹಿರಂಗಗೊಂಡಿರುವ ಆಡಿಯೋ ಕ್ಲಿಪ್ ಮಲಯಾಳಂ ಭಾಷೆಯಲ್ಲಿದ್ದು, ಮೊಬೈಲ್ ಸಿಡಿಆರ್ ರಿಪೋರ್ಟ್ ನೀಡುವ ಬಗ್ಗೆ ಡೀಲ್ ಮಾತುಕತೆ ಇದೆ. ಚಂದ್ರ ನೀಡುತ್ತಿದ್ದ ಮಾಹಿತಿಯನ್ನು ಬಳಸಿಕೊಂಡು ರಫೀಕ್ ದುಷ್ಕೃತ್ಯ ಎಸಗಲು ಬಳಸುತ್ತಿದ್ದ ಎಂದು ಹೇಳಲಾಗಿದೆ.

ಮಂಗಳೂರು ದಕ್ಷಿಣ ಠಾಣೆಯ ರೌಡಿ ನಿಗ್ರಹ ದಳ ಪೊಲೀಸರು ಅಕ್ರಮ ಆಯುಧ ಹಾಗೂ ಮಾದಕ ವಸ್ತು ಹೊಂದಿದ ಆರೋಪದಲ್ಲಿ ಕಳೆದ ಜೂನ್ ನಲ್ಲಿ ತಲಕಿ ರಫೀಕ್ ನನ್ನು ಬಂಧಿಸಿದ್ದರು

ಆರೋಪ ಸಾಬೀತಾದರೆ ಸೂಕ್ತ ಕ್ರಮ : ಕಮಿಷನರ್

ಸಾಮಾಜಿಕ ಜಾಲತಾಣದಲ್ಲಿ ಈ ಆಡಿಯೋ ಕ್ಲಿಪ್ ಬಹಿರಂಗವಾಗುತ್ತಿದ್ದಂತೆ ಮಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಸಿಸಿಬಿ ಪೊಲೀಸ್ ಒಬ್ಬರು ಆರೋಪಿ ತಲಕಿ ರಫೀಕ್ ಜತೆ ನಡೆಸಿದ ಆಡಿಯೊದ ವಿಚಾರ ಗಮನಕ್ಕೆ ಬಂದಿದೆ. ಪೊಲೀಸ್ ಸಿಬ್ಬಂದಿ ಆತನಲ್ಲಿ ಯಾವ ವಿಚಾರದಲ್ಲಿ ? ಯಾವ ಕಾರಣಕ್ಕೆ ? ಯಾವಾಗ ? ಮಾತುಕತೆ ನಡೆಸಿದ್ದಾರೆ. ಆ ಮಾತುಕತೆಯ ಆಡಿಯೊ ಈಗ ಹೇಗೆ ಬಹಿರಂಗಗೊಂಡಿತು ? ಎನ್ನುವ ವಿಚಾರದಲ್ಲಿ ತನಿಖೆ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಸಲು ಸೂಚನೆ ನೀಡಲಾಗಿದೆ. ಸಿಬ್ಬಂದಿ ತಪ್ಪು ಎಸಗಿರುವುದು ಸಾಬೀತಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

Comments are closed.