ಮಂಗಳೂರು : ಮಂಗಳೂರನ್ನು ಬೆಚ್ಚಿ ಬೀಳಿಸಿದ ನಗರದ ತೋಟ ಬೆಂಗ್ರೆ ಬೀಚ್ನಲ್ಲಿ ನಡೆದ 22 ವರ್ಷ ವಯಸ್ಸಿನ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮೂವರು ಆರೋಪಿಗಳು ಅಪ್ರಾಪ್ತ ವಯಸ್ಸಿನವರು ಎಂದು ತಿಳಿದು ಬಂದಿದೆ.
ದಿನಾಂಕ: 18-11-2018 ರಂದು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿ ಅಳಿವೆ ಬಾಗಿಲಿನ ಬಳಿಯಲ್ಲಿ ಹುಡುಗಿಯನ್ನು ಬಲವಂತದಿಂದ ಎಳೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರವೆಸಗಿದ್ದು, ಈ ಬಗ್ಗೆ ಮಂಗಳೂರು ಮಹಿಳಾ ಠಾಣೆಯಲ್ಲಿ 7 ಜನ ಆರೋಪಿಗಳ ವಿರುದ್ದ ಠಾಣಾ ಅ.ಕ್ರ 60/2018 ಕಲಂ 376(ಡಿ), 323, 504, 506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದಲ್ಲಿ ಈಗಾಗಲೇ ನಾಲ್ಕು ಮಂದಿ ಆರೋಪಿಗಳಾದ ಬೆಂಗ್ರೆ ಸ್ಯಾಂಡ್ಪಿಟ್ ನಿವಾಸಿಗಳಾದ ಪ್ರಜ್ವಲ್ ಸುವರ್ಣ ಯಾನೆ ಪ್ರಜ್ವಲ್ (25), ಅರುಣ್ ಯಾನೆ ಅರುಣ್ ಅಮೀನ್ (26), ತೋಟ ಬೆಂಗ್ರೆ ನಿವಾಸಿಗಳಾದ ಆದಿತ್ಯ ಸಾಲಿಯಾನ್ ಯಾನೆ ಆದಿ (25), ಅಬ್ದುಲ್ ರಿಯಾಝ್ ಯಾನೆ ರಿಯಾಝ್ (35) ಎಂಬವರ ಬಂಧನವಾಗಿದ್ದು, ತಲೆಮರೆಸಿಕೊಂಡಿದ್ದ ಇನ್ನುಳಿದ 03 ಜನ ಆರೋಪಿಗಳ ಪತ್ತೆಗಾಗಿ ಪಣಂಬೂರು ಇನ್ಸ್ಪೆಕ್ಟರ್ ರಫೀಕ್ ಕೆ.ಎಂ ಮತ್ತು ಮಂಗಳೂರು ಉತ್ತರ ಉಪ-ವಿಭಾಗದ ರೌಡಿ ನಿಗ್ರಹ ದಳದ ವಿಶೇಷ
ತಂಡದಿಂದ ಪತ್ತೆಕಾರ್ಯ ಮುಂದುವರಿದಿತ್ತು.
ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ 3 ಮಂದಿ ಅಪ್ರಾಪ್ತ ವಯಸ್ಸಿನ ಬಾಲಕರನ್ನು ಬಂದಿಸಲಾಗಿದ್ದು, ಕಾನೂನಿನೊಂದಿಗೆ ಸಂಘರ್ಷಕ್ಕಿಳಿದ ಈ ಬಾಲಕರನ್ನು ಬಂಧಿಸಿ ಬಾಲ ನ್ಯಾಯ ಮಂಡಳಿ ಮುಂದೆ ಹಾಜರುಪಡಿಸಲಾಗಿರುತ್ತದೆ.
ಘಟನೆ ವಿವರ :
ಬಿಹಾರ ಮೂಲದ ಯುವಕ ಹಾಗೂ ಕಲ್ಲಡ್ಕ ಮೂಲದ ಯುವತಿ ಕಲ್ಲಡ್ಕದ ಖಾಸಗಿ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ನ.18ರಂದು ಅವರು ತಣ್ಣೀರುಬಾವಿ ಬೀಚ್ಗೆ ಮಧ್ಯಾಹ್ನದ ವೇಳೆಗೆ ಬಂದಿದ್ದರು. ಅಲ್ಲಿಂದ ನಿರ್ಜನ ತೋಟಬೆಂಗ್ರೆ ಬೀಚ್ಗೆ ತೆರಳಿದ್ದರು. ಈ ವೇಳೆ ಏಳು ಮಂದಿ ಯುವಕರ ತಂಡ ಅವರ ಮೇಲೆ ಎರಗಿದೆ. ಯುವಕನನ್ನು ಹಿಡಿದು ಥಳಿಸಿದ ತಂಡ ಆತನನ್ನು ಬೆದರಿಸಿ ಹಿಡಿದಿಟ್ಟುಕೊಂಡಿತ್ತು. ನಂತರ ಆತನ ಎದುರಲ್ಲೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದೆ. ಗಾಂಜಾ ಅಮಲಿನಲ್ಲಿದ್ದ ಕಾರಣ ಪುಂಡರ ಗುಂಪು ಅಮಾನುಷವಾಗಿ ವರ್ತಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನೆ ಬಳಿಕ ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಸಂತ್ರಸ್ತ ಯುವತಿಗೆ ಬೆದರಿಕೆಯೊಡ್ಡಿ ಆಕೆಯ ಮೊಬೈಲ್ ನಂಬರ್ ಪಡೆದುಕೊಂಡಿದ್ದರು. ಮರುದಿನ ಯುವತಿಗೆ ಆರೋಪಿಗಳು ಕರೆ ಮಾಡಿ ಕಿರುಕುಳ ನೀಡಲು ಶುರುಮಾಡಿದ್ದರು ಎನ್ನಲಾಗಿದೆ.
ಆದರೆ ಮರ್ಯಾದೆಗೆ ಅಂಜಿದ ಜೋಡಿ ಪ್ರಕರಣದ ಬಗ್ಗೆ ಯಾರಿಗೂ ಹೇಳಿರಲಿಲ್ಲ. ಆರೋಪಿಗಳು ಫೋನ್ನಲ್ಲಿ ಕಿರುಕುಳ ನೀಡುತ್ತಿದ್ದರಿಂದ ಅವರು ದೂರು ನೀಡಲು ಬಂಟ್ವಾಳ ಠಾಣೆಗೆ ತೆರಳಿದ್ದರು. ಆದರೆ ಪ್ರಕರಣ ಮಂಗಳೂರಿನಲ್ಲಿ ನಡೆದಿದ್ದರಿಂದ ಅಲ್ಲೇ ದೂರು ನೀಡುವಂತೆ ತಿಳಿಸಲಾಗಿತ್ತು. ಘಟನೆ ಬಗ್ಗೆ ಸುದ್ದಿಗಳು ಹರಿದಾಡತೊಡಗಿದ್ದರಿಂದ ನಗರ ಪೊಲೀಸ್ ಆಯುಕ್ತರ ಗಮನಕ್ಕೆ ಬಂದಿದ್ದು, ಅವರು ಯುವಕ- ಯುವತಿಯನ್ನು ಮಂಗಳೂರಿಗೆ ಕರೆಸಿ ಮಾಹಿತಿ ಪಡೆದಿದ್ದಾರೆ. ಅನಂತರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ. ಪ್ರಕರಣ ದಾಖಲಾದ ಕೂಡಲೇ ಯುವತಿಯ ಮೊಬೈಲ್ನಲ್ಲಿ ದಾಖಲಾಗಿದ್ದ ದೂರವಾಣಿ ಸಂಖ್ಯೆಯ ಜಾಡು ಹಿಡಿದ ಪೊಲೀಸರು ನಾಲ್ವರು ಆರೋಪಿಗಳನ್ನು ಸೋಮವಾರ ರಾತ್ರಿ ಬಂಧಿಸಿದ್ದಾರೆ. ಯುವಕ 18 ವರ್ಷದವನಾಗಿದ್ದು, ಕಲ್ಲಡ್ಕದಲ್ಲೇ ನೆಲೆಸಿದ್ದಾನೆ. ಈತನಿಗೆ ಹಿಂದಿ ಭಾಷೆ ಬಿಟ್ಟರೆ ಬೇರೆ ಯಾವ ಭಾಷೆಯೂ ಗೊತ್ತಿಲ್ಲ. ಕಳೆದ 2 ವರ್ಷಗಳಿಂದ ಆತ ಹಾಗೂ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು.
ಸ್ಥಳ ಪರಿಶೀಲನೆ :
ಘಟನೆ ನಡೆದಿರುವ ತೋಟಬೆಂಗ್ರೆಗೆ ಹೊಂದಿಕೊಂಡಿರುವ ನಿರ್ಜನ ಪ್ರದೇಶಕ್ಕೆ ಮಂಗಳವಾರ ಬೆಳಗ್ಗೆ ಸಂತ್ರಸ್ತ ಯುವತಿ ಹಾಗೂ ಯುವಕನನ್ನು ಪೊಲೀಸರು ಕರೆದೊಯ್ದು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಏತನ್ಮಧ್ಯೆ ಘಟನೆ ಕುರಿತಂತೆ ಸ್ಥಳೀಯರೂ ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗಳ ವಿರುದ್ಧ ಕಠಿನ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಪ್ರಕರಣದಲ್ಲಿ 7 ಮಂದಿ ಅಲ್ಲ. ಬದಲಾಗಿ 8 ಮಂದಿ ಭಾಗಿ!
ತೋಟ ಬೆಂಗ್ರೆ ಬೀಚ್ಗೆ ವಿಹಾರಕ್ಕೆಂದು ಬಂದಿದ್ದ ಯುವ ಜೋಡಿಯ ಮೇಲೆ ಹಲ್ಲೆ ನಡೆಸಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವುದು 7 ಮಂದಿ ತಂಡವಲ್ಲ. ಬದಲಾಗಿ 8 ಮಂದಿ ದುಷ್ಕರ್ಮಿಗಳ ತಂಡ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Comments are closed.