ಕರಾವಳಿ

ಜನಮನ ಸೆಳೆದ ಆಳ್ವಾಸ್ ನುಡಿಸಿರಿಯ ಸಾಂಸ್ಕೃತಿಕ ಮೆರವಣಿಗೆ : ಮೆರುಗು ನೀಡಿದ ವಿವಿಧ ರಾಜ್ಯದ ಕಲಾ ತಂಡಗಳು

Pinterest LinkedIn Tumblr

ಮೂಡುಬಿದಿರೆ, ನವೆಂಬರ್.17: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಕ್ಯಾಂಪಸ್‌ನ ಆವರಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ 15ನೆ ವರ್ಷದ ನಾಡು-ನುಡಿ-ಸಂಸ್ಕೃತಿಯ ಸಮ್ಮೇಳನ ‘ಆಳ್ವಾಸ್ ನುಡಿಸಿರಿ’ ಉದ್ಘಾಟನೆಗೆ ಪೂರ್ವಭಾವಿಯಾಗಿ ಶುಕ್ರವಾರ ಬೆಳಗ್ಗೆ ನಡೆದ ಬೃಹತ್ ಸಾಂಸ್ಕೃತಿಕ ಮೆರವಣಿಗೆ ನೆರೆದವರನ್ನು ಮೋಡಿ ಮಾಡಿತ್ತು.

ರಾಜ್ಯದ ಬೇರೆ ಬೇರೆ ಜಿಲ್ಲೆಯ ಸುಮಾರು 57 ಕಲಾ ತಂಡಗಳನ್ನೊಳಗೊಂಡ ಭವ್ಯ ಸಾಂಸ್ಕೃತಿಕ ಮೆರವಣಿಗೆಯನ್ನು ಬರೋಡಾದ ಶಶಿ ಕೇಟರರ್ಸ್‌ನ ಶಶಿಧರ ಶೆಟ್ಟಿ ಉದ್ಘಾಟಿಸಿದರು. ಶಾಸಕ ಉಮಾನಾಥ್ ಕೋಟ್ಯಾನ್ ಧ್ವಜಾರೋಹಣಗೈದರು.

ಕಾರ್ಕಳದ ರಂಜಿತ್ ಅವರ ಘಟೋತ್ಕಜ, ಮಂಡ್ಯದ ಜಾನಪದ ಕಲಾ ತಂಡದ ನಂದಿ ಧ್ವಜ, ಪುಂಜಾಲುಕಟ್ಟೆಯ ಶ್ರೀನಿವಾಸರ ತಂಡದಿಂದ 15 ಶಂಖ, ಮೂಡುಬಿದಿರೆಯ ಹರೀಶ್ ತಂಡದಿಂದ 15 ಕೊಂಬು ಮತ್ತು ಚೆಂಡೆ, ಅಶ್ವತ್ಥಪುರದ ನಾದಸ್ವರ ತಂಡ, ಬೆದ್ರ ಫ್ರೆಂಡ್ಸ್‌ನ ಹುಲಿ ವೇಷ, ಕಲ್ಲಡ್ಕದ ರಮೇಶ್ ಅವರ ಶಿಲ್ಪಾಗೊಂಬೆ ಬಳಗ, ಮಂಗಳೂರಿನ ದೀಪಕ್ ಶೆಟ್ಟಿ ಅವರ ಕಿಂಗ್ ಕೋಂಗ್, ಮಂಗಳೂರಿನ ಕೊರಗರ ಗಜಮೇಳದಿಂದ ಮಂಗಳೂರು ಡೋಲು, ಚಾಮರಾಜ ನಗರ ತಂಡದಿಂದ ಗೊರವರ ಕುಣಿತ, ಬಿಜಾಪುರದ ಲಂಬಾಣಿ, ಮಂಡ್ಯದ ದೇವರಾಜ್ ತಂಡದಿಂದ ಪೂಜಾ ಕುಣಿತ ಮತ್ತು ವೀರಭದ್ರ ಕುಣಿತ, ಬಂಟ್ವಾಳದ ಚಿಲಿಪಿಲಿ ತಂಡ, ಚಿತ್ರದುರ್ಗದ ಜಾನಪದ ತಂಡದಿಂದ ಮರಗಾಲು, ಚಿತ್ರದುರ್ಗದ ಬ್ಯಾಂಡ್ ಸೆಟ್, ಕೇರಳದ ಅರ್ಧ ನಾರೀಶ್ವರ, ಹಾವೇರಿ ಜಿಲ್ಲೆಯ ಬೇಡರ ಕುಣಿತ, ಕೇರಳದ ಸುಜಿತ್ ತಂಡದಿಂದ ಕೇರಳದ ದೇವರ ವೇಷ, ಕುಂದಾಪುರದ ಡೋಲು ಮೆರವಣಿಗೆಗೆ ಮೆರುಗು ನೀಡಿದವು.

ಉಡುಪಿ ಮಂದಾರ್ತಿ ತಂಡದಿಂದ ಗುಮ್ಟೆ ಕುಣಿತ, ಬಳ್ಳಾರಿಯ ಅಶ್ವರಾಮ ತಂಡದಿಂದ ಹಗಲು ವೇಷ, ಮೈಸೂರಿನ ಮಂಜು ತಂಡದಿಂದ ಪುರುಷರ ಮತ್ತು ಮಹಿಳೆಯರ ನಗಾರಿ, ಬೆಳ್ತಂಗಡಿಯ ಶೆಟ್ಟಿ ಆರ್ಟ್ಸ್‌ನ ತಂಡದಿಂದ ಬೊಂಬೆಗಳು, ಹಾವೇರಿಯ ಜಾನಪದ ಕಲಾ ತಂಡದಿಂದ ಪುರವಂತಿಕೆ, ಕೇರಳದ ತೆಯ್ಯಮ್ ಮತ್ತು ಪಂಚವಾದ್ಯ, ಧಾರವಾಡದ ಜಾನಪದ ಕಲಾ ತಂಡದಿಂದ ಜಗ್ಗಳಿಕೆ ಮೇಳ, ಮೂಕಾಂಬಿಕಾ ಚೆಂಡೆ ಬಳಗದಿಂದ ಕೊಂಚಾಡಿ ಚೆಂಡೆ, ಕಾರ್ಕದ ದಿವಾಕರ್ ಅವರ ಕೋಳಿಗಳು, ಸಲೀಂ ಹಂಡೇಲು ಅವರ ತಂಡದಿಂದ ದಫ್, ಉಡುಪಿ ತಂಡದಿಂದ ಗೂಳಿ, ಬಿದಿರೆ ಆರ್ಟ್ಸ್‌ನ ಯಶೋಧರ ಬಂಗೇರ ತಂಡದಿಂದ ಕೀಲುಕುದುರೆ ಮತ್ತು ಗೊಂಬೆಗಳು, ಹೊನ್ನಾವರ ಜೇಮ್ಸ್ ಅವರ ಬ್ಯಾಂಡ್ ಸೆಟ್, ಬೆಳ್ತಂಗಡಿಯ ರಾಜೀವ್ ಮತ್ತು ತಂಡದಿಂದ ವಂಶಿಕಾ ಗೊಂಬೆ ಬಳಗ, ಶಿವಮೊಗ್ಗದ ಬುದಿಯಪ್ಪ ಮತ್ತು ತಂಡದಿಂದ ಡೊಳ್ಳು ಕುಣಿತ, ಪ್ರಸಾದ್ ಮಿಜಾರು ತಂಡದಿಂದ ತುಳುನಾಡ ವಾದ್ಯ, ಸಿರಿಗೆರೆಯ ಮಕ್ಕಳ ತಂಡ ಮತ್ತು ರೈತರು ಮತ್ತು ಮೂಡುಬಿದಿರೆ ಕೇಶವ ಶೇರಿಗಾರ್ ಸ್ಯಾಕ್ಸೋಫೋನ್ ನೋಡುಗರನ್ನು ಮೋಡಿ ಮಾಡಿದವು.

 ವಿದ್ಯಾರ್ಥಿಗಳ ಕಲಾ ತಂಡಗಳ ಸೊಬಗು:

ಆಳ್ವಾಸ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳ 30 ತಟ್ಟಿರಾಯ, ತೆಂಕು ಮತ್ತು ಬಡಗುತಿಟ್ಟಿನ ಯಕ್ಷಗಾನ, 15 ಕೊಡೆಗಳು, ತ್ರಿವರ್ಣ ಧ್ವಜ, ಕೇರಳದ ಶೃಗಾರಿ ಮೇಳ, ಮಣಿಪುರದ ಧೋಲ್ ಚಲಮ್, ಶ್ರೀಲಂಕಾದ ಕಲಾವಿದರು ಮತ್ತು ಮುಖವಾಡಗಳು, ಆಳ್ವಾಸ್‌ನ ಡೊಳ್ಳು ಕುಣಿತ, ಲಂಗ ದಾವಣಿ, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ಶೃಂಗಾರಿ ಮೇಳ, ಪಲ್ಲಕ್ಕಿ, ತೇರು, ಬೆಳಗಾವಿ ಪೇಟ ಧರಿಸಿದ ಗಣ್ಯರು, ಪೂರ್ಣ ಕುಂಭ ಹಿಡಿದಿರುವ ವಿದ್ಯಾರ್ಥಿನಿಯರು ಗಣ್ಯರ ಜತೆಗೆ ಸಾಗುತ್ತಿರುವ ದೃಶ್ಯವು ಮೆರವಣಿಗೆಯ ಸೊಬಗನ್ನು ಹೆಚ್ಚಿಸಿದವು.

ವರದಿ ಕೃಪೆ ; ವಾಭಾ

Comments are closed.