ಕರಾವಳಿ

ಕಾಂಗ್ರೆಸ್-ಜೆಡಿ‌ಎಸ್ ಷಡ್ಯಂತ್ರಕ್ಕೆ ಮತದಾರರಿಂದ ತಕ್ಕ ಉತ್ತರ: ಸಂಸದ ಬಿ.ವೈ.ರಾಘವೇಂದ್ರ

Pinterest LinkedIn Tumblr

ಕುಂದಾಪುರ: ದಕ್ಷಿಣದಲ್ಲಿ ಬಿಜೆಪಿ ಬಾಗಿಲು ಬಂದ್ ಮಾಡುತ್ತೇನೆ ಎಂದ ದೇವೇಗೌಡರ ಹೇಳಿಕೆಗೆ ಮತದಾರ ಬಿಜೆಪಿ ಅಭ್ಯರ್ಥಿ ಗೆಲ್ಲಿಸುವ ಮೂಲಕ ಪ್ರತ್ಯುತ್ತರ ನೀಡಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಶಿವಮೊಗ್ಗದಲ್ಲಿ ಬಿಜೆಪಿ ಬಾಗಿಲು ಬಂದ್ ಮಾಡಲು ನಲವತ್ತೆಂಟು ಗಂಟೆ ಸಾಕು ಎಂದಿದ್ದರು. ಕಾಂಗ್ರೆಸ್ ಜೆಡಿ‌ಎಸ್ ಷಡ್ಯಂತರಕ್ಕೆ ಬಿಜೆಪಿ ಕಾರ್‍ಯಕರ್ತರು ಪರಿಶ್ರಮಕ್ಕೆ ಮತದಾರ ಉತ್ತರ ಕೊಟ್ಟಿದ್ದಾನೆ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ದೇವೇಗೌಡರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಬೈಂದೂರು ಮಂಡಲ ಬಿಜೆಪಿ ಆಶ್ರಯದಲ್ಲಿ ತಲ್ಲೂರು ಶೇಷಶಯನ ಸಭಾಂಗಣದಲ್ಲಿ ನಡೆದ ಕಾರ್‍ಯಕರ್ತರ ಅಭಿನಂದನಾ ಕಾರ್‍ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಸರ್ಕಾರಿ ವ್ಯವಸ್ಥೆ ದುರ್ವಳಿಕೆ ಮಾಡಿಕೊಂಡು, ಹಣದ ಮೂಲಕ ಮಧ್ಯಂತರ ಚುನಾವಣೆ ಗೆಲ್ಲುವ ಕಸರತ್ತಿಗೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ ಎಂದು ಬಣ್ಣಿಸಿದರು.ಮಧ್ಯಂತರ ಲೋಕಸಭೆ ಚುನಾವಣೆಯಲ್ಲಿ ಸಾಕಷ್ಟು ಸವಾಲುಗಳಿದ್ದರೂ, ಕಾರ್‍ಯಕರ್ತರ ಪರಿಶ್ರಮ ಫಲಕೊಟ್ಟಿದೆ ಎಂದ ಅವರು, ಮತದಾನ ಪ್ರಮಾಣ ಕಡಿಮೆ ಆಗಿರುವುದು ಗೆಲುವಿನ ಅಂತರ ಕಡಿಮೆ ಆಗಲು ಕಾರಣ. ಲೋಕಸಭೆ ಎಂಬ ಪ್ರಿಪರೇಟರಿ ಪರೀಕ್ಷೆಯಲ್ಲಿ ಮತದಾರರು ಪಾಸ್ ಮಾಡಿದ್ದು, ಮುಂದೆ ಬರುವ ಮಹಾ ಚುನಾವಣೆ ಎಂಬ ಪರೀಕ್ಷೆಯಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಲು ಸಿದ್ದರಾಗಬೇಕು ಎಂದು ಕರೆ ಕೊಟ್ಟರು.

ಬೈಂದೂರು ಸಮಗ್ರ ಅಭಿವೃದ್ಧಿಗೆ ಒತ್ತುಕೊಡಲಾಗುತ್ತದೆ ಎಂದ ಅವರು, ಬೈಂದೂರು ಪ್ರವಾಸಿ ಮಂದಿರ ಸಮೀಪ ಸಂಸದರ ಕಚೇರಿ ತೆರೆದು ಸಮಸ್ಯೆಗೆ ಸ್ಪಂದಿಸಲಾಗುತ್ತದೆ. ಬೈಂದೂರು ಅಭಿವೃದ್ಧಿ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳೊಟ್ಟಿಗೆ ಶಾಸಕರ ಮನೆಯಲ್ಲಿ ಸಭೆ ನಡೆಸಿ ಮಾಹಿತಿ ಪಡೆಯಲಾಗುತ್ತದೆ. ಕೊಲ್ಲೂರಿಗೆ ಬರುತ್ತಿರುವ ಸಣ್ಣ ನೀರಾವರಿ ಸಚಿವರ ಭೇಟಿ ಮಾಡಿ, ಬೈಂದೂರು ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುತ್ತದೆ ಎಂದು ತಿಳಿಸಿದರು.

ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಚುನಾವಣೆ ಉಸ್ತುವಾರಿ ಉದಯ ಕುಮಾರ್ ಶೆಟ್ಟಿ, ಪ್ರಧಾನ ಕಾರ್‍ಯದರ್ಶಿಗಳಾದ ಸಂಧ್ಯಾ ರಮೇಶ್, ಕುತ್ಯಾರು ನವೀನ್ ಶೆಟ್ಟಿ, ಮಹಿಳಾ ಮೋಚಾ ಅಧ್ಯಕ್ಷೆ ಪ್ರಿಯದರ್ಶಿನಿ, ಹಿಂದುಳಿದ ಮೋರ್ಚಾ ಅಧ್ಯಕ್ಷ ಗಣೇಶ್ ಪೂಜಾರಿ,ಎಸ್ಸಿ ಮೋರ್ಚಾ ಅಧ್ಯಕ್ಷ ಗೋಪಾಲಕೃಷ್ಣ ನಾಡ, ಜಿಪಂ ಸದಸ್ಯರಾದ ಶೋಭಾ ಪುತ್ರನ್, ಬಾಬು ಶೆಟ್ಟಿ ತಗ್ಗರ್ಸೆ, ಸುರೇಶ್ ಬಟ್ವಾಡಿ, ರಾಜ್ಯ ಬಿಜೆಪಿ ಕಾರ್‍ಯಕಾರಿಣಿ ಸದಸ್ಯ ಕಿರಣ್ ಕೊಡ್ಗಿ, ತಾಪಂ ಸದಸ್ಯರಾದ ಪುಷ್ಪರಾಜ್ ಶೆಟ್ಟಿ, ಇಂದಿರಾ ಶೆಟ್ಟಿ, ಕರಣ್ ಪೂಜಾರಿ ಇದ್ದರು.

Comments are closed.