ಕರಾವಳಿ

ಚೂರಿ ತೋರಿಸಿ ನಗ-ನಗದು ಸುಲಿಗೆ ; ಇಬ್ಬರ ಸೆರೆ – ನಗದು ಸೇರಿದಂತೆ 57 ಸಾವಿರ ಮೌಲ್ಯದ ಸೊತ್ತು ವಶ

Pinterest LinkedIn Tumblr

ಮಂಗಳೂರು, ನವೆಂಬರ್.12: ಪಣಂಬೂರು ಠಾಣಾ ವ್ಯಾಪ್ತಿಯ ಜೋಕಟ್ಟೆ ರೈಲ್ವೆ ಹಳಿ ಹತ್ತಿರ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರನ್ನು ತಡೆದು ನಿಲ್ಲಿಸಿ ಚೂರಿ ತೋರಿಸಿ ನಗ-ನಗದು ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪಣಂಬೂರು ಪೊಲೀಸರು ಹಾಗೂ ಮಂಗಳೂರು ದಕ್ಷಿಣ ರೌಡಿ ನಿಗ್ರಹ ದಳದ ಸಿಬ್ಬಂದಿ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕಸಬಾ ಬೆಂಗ್ರೆ ನಿವಾಸಿಗಳಾದ ನೌಶಾದ್ ಯಾನೆ ನೌಶಾದ್ ಆದಂ ಯಾನೆ ನೌಶು ಯಾನೆ ಬುಲೆಟ್ (25) ಹಾಗೂ ನೌಫಾಲ್ (31) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ ನಗದು 1,500 ರೂ., 3 ಮೊಬೈಲ್, ಆಕ್ಟೀವ್ ಹೋಂಡಾ, 1 ಚೂರಿ ಸೇರಿದಂತೆ 57,500 ರೂ. ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನಲಾದ ಇನ್ನೊಬ್ಬ ಆರೋಪಿ ಅಝರ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ನಾಪತ್ತೆಯಾಗಿರುವ ಇನ್ನೊಬ್ಬನಿಗೆ ಶೋಧ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ನ.9ರಂದು ರಾತ್ರಿ 11ಗಂಟೆಗೆ ಝಲ್‌ಖಾನ್ ಎಂಬವರು ಜೋಕಟ್ಟೆ ರೈಲ್ವೆ ಹಳಿ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ಮೂವರು ಆರೋಪಿಗಳು ಹೋಂಡಾ ಆಕ್ಟೀವಾದಲ್ಲಿ ಬಂದು, ಝಲ್‌ಖಾನ್ ಅವರನ್ನು ತಡೆದು ನಿಲ್ಲಿಸಿ ಚೂರಿ ತೋರಿಸಿದ್ದಲ್ಲದೆ, ಹೆದರಿಸಿ ಖಾನ್ ಅವರ ಕಿಸೆಯಲ್ಲಿದ್ದ 10 ಸಾವಿರ ರೂ. ನಗದು ಹಾಗೂ 2 ಮೊಬೈಲ್‌ ದೋಚಿ ಪರಾರಿಯಾಗಿದ್ದಾರೆ. ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಡಿಸಿಪಿಗಳಾದ ಹನುಮಂತರಾಯ, ಉಮಾಪ್ರಶಾಂತ್ ಮಾರ್ಗದರ್ಶನ ದಂತೆ ಎಸಿಪಿ ರಾಜೇಂದ್ರ ಡಿ.ಎಸ್. ನೇತೃತ್ವದಲ್ಲಿ ಪಣಂಬೂರು ಠಾಣಾ ಪೊಲೀಸ್ ನಿರೀಕ್ಷಕ ರಫೀಕ್ ಕೆ.ಎಂ. ಪಣಂಬೂರು, ರೌಡಿ ನಿಗ್ರಹದಳದ ಸಿಬ್ಬಂದಿ ಹಾಗೂ ಪಣಂಬೂರು ಠಾಣಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

Comments are closed.