ಕರಾವಳಿ

ಕುಕ್ಕೆ ಸುಬ್ರಹ್ಮಣ್ಯ ಹೊಡೆದಾಟ ಪ್ರಕರಣ : ಚೈತ್ರಾ ಕುಂದಾಪುರ ಹಾಗೂ ತಂಡ ಜೈಲಿನಿಂದ ರಿಲೀಸ್

Pinterest LinkedIn Tumblr

ಮಂಗಳೂರು, ನವೆಂಬರ್.೦8: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೆಲವು ದಿನಗಳ ಹಿಂದೆ ಎರಡು ಹಿಂದೂ ಸಂಘಟನೆಗಳ ಕಾರ್ಯಕರ್ತರ ಮಧ್ಯೆ ನಡೆದ ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿದ್ದ ಚೈತ್ರಾ ಕುಂದಾಪುರ ಹಾಗೂ ತಂಡದವರಿಗೆ ಈಗಾಗಲೇ ಜಾಮೀನು ಮಂಜೂರಾಗಿದ್ದು, ಬುಧವಾರ ಇವರೆಲ್ಲರು ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.

ನ.5ರಂದು ಪುತ್ತೂರು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಜಾಮೀನು ಮಂಜೂರುಗೊಂಡ ಈ ತೀರ್ಪಿನ ಪ್ರತಿಯನ್ನು ಸುಳ್ಯ ನ್ಯಾಯಾಲಯಕ್ಕೆ ಸಲ್ಲಿಸಬೇಕಾಗಿತ್ತು. ಆದರೆ ತೀರ್ಪು ಸೋಮವಾರ ಸಂಜೆ ಪ್ರಕಟವಾಗಿದ್ದರಿಂದ ಅಂದು ಸಂಜೆ ತೀರ್ಪಿನ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಮಂಗಳವಾರ ನ್ಯಾಯಾಲಯಕ್ಕೆ ರಜೆ ಇದ್ದುದರಿಂದ ಬುಧವಾರ ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ನ್ಯಾಯಾಲಯದಿಂದ ಮಂಗಳೂರು ಜೈಲಿಗೆ ಜಾಮೀನು ಮಂಜೂರು ಪ್ರತಿಯನ್ನು ಸಲ್ಲಿಸಿದ ಬಳಿಕ ಆರೋಪಿಗಳನ್ನು ಬಿಡುಗಡೆ ಮಾಡಲಾಯಿತು.

ಅಸೌಖ್ಯ ಕಾರಣವೊಡ್ಡಿ ವೆನ್ಲಾಕ್ ಆಸ್ಪತ್ರೆಯಲ್ಲಿದ್ದ ಚೈತ್ರಾಳನ್ನು ನ.5ರಂದು ಜೈಲಿಗೆ ಕರೆ ತರಲಾಗಿತ್ತು. ಆಕೆ ಮೂರು ದಿನ ಜೈಲು ವಾಸ ಅನುಭವಿಸಬೇಕಾಯಿತು. ಆಕೆಯ ತಂಡದ ಸುದೀನ ಪೂಜಾರಿ, ವಿನಯ್, ಮಣಿಕಂಠ, ನಿಖಿಲ್, ಹರೀಶ್ ನಾಯಕ್ ಯಾನೆ ಶ್ರೀಕಾಂತ ಹಾಗೂ ಹರೀಶ್ ಖಾರ್ವಿ ಜೈಲಿನಿಂದ ಬಿಡುಗಡೆ ಹೊಂದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಹಾಕಿದ ವಿಚಾರದಲ್ಲಿ ಗುರುಪ್ರಸಾದ್ ಪಂಜ ಹಾಗೂ ತಂಡದವರನ್ನು ಪ್ರಶ್ನಿಸಲು ಬಂದಿದ್ದ ಚೈತ್ರಾ ಕುಂದಾಪುರ ಮತ್ತು ತಂಡಗಳ ನಡುವೆ ಅ.24ರಂದು ಹೊಡೆದಾಟ ನಡೆದಿತ್ತು. ಈ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Comments are closed.