ಕರಾವಳಿ

ಲಿಟ್ ಫೆಸ್ಟ್‌ನಲ್ಲಿ ಡಾ. ಎಸ್.ಎಲ್.ಭೈರಪ್ಪರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ

Pinterest LinkedIn Tumblr

ಮಂಗಳೂರು: ದ ಐಡಿಯಾ ಆಫ್ ಭಾರತ ಪರಿಕಲ್ಪನೆಯ ಎರಡು ದಿನಗಳ ರಾಷ್ಟ್ರೀಯ ಸಾಹಿತ್ಯ ಉತ್ಸವ ಮಂಗಳೂರು ಲಿಟ್ ಫೆಸ್ಟ್‌ನ ಮೊದಲ ದಿನದ ಕೊನೆಯಲ್ಲಿ ನಗರದ ಟಿಎಂಎಪೈ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಸಾಹಿತಿ ಡಾ. ಎಸ್.ಎಲ್.ಭೈರಪ್ಪ ಅವರಿಗೆ ಜೀವಮಾನ ಸಾಧನೆಯ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ನಿಟ್ಟೆ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಡಾ.ಎನ್ ವಿನಯ ಹೆಗ್ಡೆ ಡಾ.ಎಸ್.ಎಲ್.ಬೈರಪ್ಪರನ್ನು ಸನ್ಮಾನಿಸಿದರು. ಚಕ್ರವರ್ತಿ ಸೂಲಿಬೆಲೆ ಡಾ.ಎಸ್.ಎಲ್.ಬೈರಪ್ಪರನ್ನು ಅಭಿನಂದಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಎಸ್.ಎಲ್.ಭೈರಪ್ಪ ಅವರು, ನನ್ನ ಬರವಣೆಗೆಯಲ್ಲಿ ಇಡೀ ಭಾರತ ಇದೆ. ನಾನು ಒಂದು ಜಿಲ್ಲೆ, ರಾಜ್ಯಕ್ಕೆ ಸೀಮಿತವಾಗಿ ಬರೆದಿರುವುದು ಕಡಿಮೆ. ಆ ಕಾರಣದಿಂದ ಭಾರತದಲ್ಲಿ ಹೆಚ್ಚು ಜನರನ್ನು ತಲುಪಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಭಾರತದಲ್ಲಿ ಎಲ್ಲಿ ಹೋದರು ಜನರ ರೀತಿ, ನೀತಿಯ ನಡುವೆ ಹೆಚ್ಚು ವ್ಯತ್ಯಾಸಗಳಿಲ್ಲ ಸಾಮ್ಯತೆ ಇದೆ. ಈ ವಿಚಾರವನ್ನು ನನ್ನ ವಂಶ ವೃಕ್ಷ ಕೃತಿಯಲ್ಲಿ ಪ್ರಸ್ತಾಪಿಸಿದ್ದೇನೆ. ಗೃಹ ಭಂಗ ಕಾದಂಬರಿಯನ್ನು ಓದಿದ ಒಬ್ಬ ಪಂಜಾಬಿ ನಮ್ಮ ಸಂಸ್ಕೃತಿ ನಿಮ್ಮ ಸಂಸ್ಕೃತಿ ಸಾಮ್ಯತೆ ಇದೆ ಎಂದಿದ್ದಾರೆ. ನನ್ನ ಬರವಣಿಗೆಯಲ್ಲಿ ಅದನ್ನು ನೀವು ಕಾಣಬಹುದು.

ನನ್ನ ಮಂದ್ರ ಕಾದಂಬರಿಯಲ್ಲಿ ಮುಂಬೈ, ಪುಣೆ, ಉತ್ತರ ಭಾರತ ಇದೆ ಕರ್ನಾಟಕ ಇಲ್ಲ. ಈ ರೀತಿ ಭಾರತವನ್ನು ನೋಡಬೇಕಾದರೆ ಸಮಗ್ರ ಭಾರತದ ಬಗ್ಗೆ ಪ್ರೀತಿ ಇರಬೇಕಾಗುತ್ತದೆ. ಈಗಿನ ಕೆಲವು ಸಾಹಿತಿಗಳಿಗೆ ಭಗವದ್ಗೀತೆ ಬೇಡ, ತತ್ವಶಾಸ್ತ್ರ ಬೇಡ ಎನ್ನುವ ಡಿಎಂಕೆ ಮೆಂಟಾಲಿಟಿ ಅದನ್ನು ಮೀರದೆ ಇದ್ದರೆ ಅದು ಇಂಡಿಯನ್ ಬರಹ ಆಗುವುದಿಲ್ಲ ಎಂದು ಭೈರಪ್ಪ ತಿಳಿಸಿದರು.

ಇದೇ ಸಂದರ್ಭದಲ್ಲಿ ಮೋದಿಯನ್ನು ಬೆಂಬಲಿಸಿ ಮಾತನಾಡುತ್ತಾ ಮೋದಿಯನ್ನು ವಿರೋಧ ಪಕ್ಷದವರು ಏನು ಮಾಡಿದರೂ ಟೀಕಿಸುತ್ತಾರೆ. ಮೋದಿಯವರ ಗಟ್ಟಿ ಮನೋಭಾವ ನನಗೆ ಗೊತ್ತಿದೆ. ಅದೇ ರೀತಿ ನಾನು, ನನ್ನನ್ನು ವಿರೊಧಿಸಿದವರನ್ನು ನಿರ್ಲಕ್ಷಿಸಿ ಬರೆಯುತ್ತಲೇ ಹೋದೆ ಎಂದು ವಿವರಿಸಿದರು.

ಬೈರಪ್ಪರನ್ನು ಅಭಿನಂದಿಸಿ ಚಕ್ರವರ್ತಿ ಸೂಲಿಬೆಲೆ ಮಾತನಾಡುತ್ತಾ, ಮಂಗಳೂರಿನಲ್ಲಿ ಮೊದಲ ಬಾರಿಗೆ ಇಂಟಲೆಕ್ಷುವಲ್‌ ಕ್ಷತ್ರಿಯರ ದಾಳಿಯಾಗಿದೆ. ಈ ದಾಳಿಗೆ ಬೆಂಬಲವಾಗಿ ನಿಂತ ಡಾ. ಎಸ್.ಎಲ್.ಭೈರಪ್ಪ ಅವರನ್ನು ನ್ಮಾನಿಸುವುದಾಗಿ ತಿಳಿಸಿದರು.

Comments are closed.