ಕರಾವಳಿ

ಆತ್ಮಹತ್ಯೆಗೂ ಮೊದಲು ಯುವಕ ಬರೆದ ಡೆತ್‌ನೋಟ್‌ನಲ್ಲಿದೆ ಬೆಚ್ಚಿಬೀಳಿಸುವ ಸಂಗತಿಗಳು

Pinterest LinkedIn Tumblr

ಕುಂದಾಪುರ: ಇಡೀ ಮನೆಗೆ ಆಧಾರ ಸ್ತಂಭವಾಗಿದ್ದ ಯುವಕನೊಬ್ಬ ಡೆತ್ ನೋಟ್ ಬರೆದಿಟ್ಟು ಮನೆಯಲ್ಲಿ ನೇಣಿಗೆ ಶರಣಾದ ಘಟನೆ ಸೋಮವಾರ ಸಂಜೆ ಕುಂದಾಪುರ ತಾಲೂಕಿನ ಕೋಟೇಶ್ವರ ಗ್ರಾಮದ ಮಾರ್ಕೋಡು ಎಂಬಲ್ಲಿ ನಡೆದಿದೆ. ಆತ್ಮಹತ್ಯೆ ಪ್ರಕರಣದ ಹಿಂದೆ ಕಾಣದ ಕೈಗಳ ಕೆಲಸವಿರುವುದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ ಕೆಲ ಅಂಶಗಳಿಂದ ಕಂಡುಬರುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಮಾರ್ಕೋಡು ಬೊಬ್ಬರ್ಯಮಕ್ಕಿ ನಿವಾಸಿ ಉದಯ್ ಮೊಗವೀರ ಕಾವೇರಿ ದಂಪತಿಯ ಪುತ್ರ ವಿವೇಕ್ (23) ಆತ್ಮಹತ್ಯೆಗೆ ಶರಣಾದ ಯುವಕನಾಗಿದ್ದು ಈತ ಉಡುಪಿಯ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದು ಡ್ಯಾನ್ಸ್ ತರಗತಿ ನಡೆಸುತ್ತಿದ್ದ.

ಘಟನೆ ವಿವರ:
ಮನೆಯ ಬಡತನದ ನಡುವೆಯೇ ಪದವಿ ವಿದ್ಯಾಭ್ಯಾಸ ಪೂರೈಸಿ ಉಡುಪಿಯಲ್ಲಿ ಕೆಲಸಕ್ಕೆ ಸೇರಿದ್ದ ವಿವೇಕ್ ಮನೆಗೆ ಆಧಾರಸ್ತಂಭವಾಗಿದ್ದ. ತಂದೆ ಉದಯ್ ಮೀನುಗಾರಿಕೆ ವೃತ್ತಿ ಮಾಡಿಕೊಂಡಿದ್ದು ತಾಯಿ ಬೀಡಿಕಟ್ಟಿ ಮನೆ ನಿರ್ವಹಣೆ ಮಾಡುತ್ತಿದ್ದರು. ಅಜ್ಜಿ ಹಾಗೂ ಕಿರಿಯ ಸಹೋದರನ ಜೊತೆ ವಾಸವಿದ್ದ ವಿವೇಕ್ ಪರಿಸರದಲ್ಲಿ ಉತ್ತಮ ಗುಣ ನಡತೆ ಹೊಂದಿದ್ದ. ಇತ್ತೀಚೆಗೆ ತಾನು ಬೆಂಗಳುರಿಗೆ ತೆರಳುವ ನಿರ್ಧಾರವನ್ನು ಮನೆಯಲ್ಲಿ ಹೇಳಿಕೊಂಡಿದ್ದ ಆತ ನಿನ್ನೆ ಹೊಸ ಶೂ ಖರೀದಿಸಿ ಬೆಂಗಳೂರಿಗೆ ತೆರಳಲು ಸಜ್ಜಾಗಿ ಮನೆಯಲ್ಲಿಯೇ ಇದ್ದ. ಆದರೆ ಸಂಜೆ ವೇಳೆ ಕೊಠಡಿಯಿಂದ ಹೊರಬಾರದಿದ್ದಾಗ ಅನುಮಾನಗೊಂಡ ಮನೆಯವರು ನೋಡುವಾಗ ಆತ ನೇಣಿಗೆ ಕೊರಳೊಡ್ಡಿದ್ದ.

ಡೆತ್ ನೋಟ್‌ನಲ್ಲಿತ್ತು ಬೆಚ್ಚಿಬೀಳುವ ಸಂಗತಿಗಳು…
‘ ನನ್ನ ಸಾವಿಗೆ ಉಘ್ರ ಸಂಘಟನೆ ಕಾರಣವಾಗಿದ್ದು ಮನೆಮಂದಿಗೂ ಅವರಿಂದ ಅಪಾಯವಾಗುವ ಸಾಧ್ಯತೆಯಿದೆ. ಈ ಹಿಂದೆ ಅವರಿಂದ ನನಗೆ ಕೊಲೆ ಬೆದರಿಕೆಯಿತ್ತು. ಎರಡು ವರ್ಷದ ಹಿಂದೆ ಆಕಸ್ಮಿಕವಾಗಿ ಪರಿಚಯವಾದ ಸಂಘಟನೆ ಅದಾಗಿದ್ದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅವರ ಅಸ್ತಿತ್ವವಿದೆ. ಮೊಬೈಲ್ ಬಳಸದ ಆ ಸಂಘಟನೆ ಬಗ್ಗೆ ಅನುಮಾನ ಬಂದು ಹಲವು ಮಾಹಿತಿ ಕಲೆ ಹಾಕಿದ್ದು ಅದು ಅವರಿಗೆ ತಿಳಿದಾಗ ತನಗೆ ಕೊಲೆ ಬೆದರಿಕೆ ಹಾಕಿದ್ದರು. ಅವರಿಗೆ ರಾಜಕೀಯ ಬೆಂಬಲವೂ ಇದೆ. ನಾನು ಸಂಗ್ರಹಿಸಿದ ದಾಖಲೆಗಳು, ಫೋಟೋಗಳನ್ನು ಪೊಲೀಸರಿಗೆ, ಮಾಧ್ಯಮಕ್ಕೆ ನೀಡುವ ಆಲೋಚನೆಯಲ್ಲಿದ್ದು ಆಗಸ್ಟ್ ತಿಂಗಳಿನಲ್ಲಿ ಆ ಮೊಬೈಲ್ ಕಳೆದುಹೋಗಿದೆ. ಇನ್ನೊಂದು ಮೆಮೊರಿ ಚಿಪ್‌ನಲ್ಲಿ ಒಂದಷ್ಟು ದಾಖಲೆಗಳಿದ್ದು ಆ ಚಿಪ್ ಕೂಡ ಸಿಕ್ಕಿಲ್ಲ. ತನಗೆ ಅವರು ಬಹಳಷ್ಟು ಹಿಂಸೆ ನೀಡಿದ್ದು ಅವರಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರೂ ನನ್ನಿಂದ ಅಸಾಧ್ಯವಾಗಿತ್ತು. ಇವರಿಂದ ನನ್ನ ಮನೆಯವರನ್ನು ಉಳಿಸಿಕೊಳ್ಳಲು ನನ್ನ ಸಾವು ದಾರಿಯಾಗುತ್ತೆಂದು ಭಾವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ದೇಹವನ್ನು ದಾನ ಮಾಡಬೇಕೆಂಬ ಹಂಬಲವಿದ್ದು ಮನೆಯವರು ಒಪ್ಪದಿದ್ದಲ್ಲಿ ಕಣ್ಣು ದಾನವಾದರೂ ಮಾಡಿ. ಮತ್ತು ದೇಹವನ್ನು ಅಗ್ನಿಸ್ಪರ್ಷ ಮಾಡುವ ಬದಲು ಮನೆಯ ತೋಟದಲ್ಲಿ ಹೂಳಿರಿ ಇದು ನನ್ನ ಕೊನೆಯಾಸೆ ಎಂದು ಬರೆದಿದ್ದಾನೆ. ಜಾತಿ, ಹಣ, ಅಹಂಕಾರ, ರಾಜಕೀಯ, ಸ್ವಾರ್ಥ, ಅಧಿಕಾರ ಬಿಟ್ಟು ಎಲ್ಲರೂ ಮನುಷ್ಯರಾಗಿ ಬದುಕಿ ದೇಶವನ್ನು ಸ್ವಾರ್ಥಕ್ಕಾಗಿ ಬಲಿಕೊಡಬೇಡಿ ಎಂಬ ವಾಕ್ಯದೊಂದಿಗೆ ಡೆತ್ ನೋಟ್ ಮುಗಿಸಿದ್ದಾನೆ.

ಡ್ರಗ್ಸ್ ದಂಧೆ ಉಲ್ಲೇಖ..
ಇನ್ನು ತಾನು ಬರೆದ ಡೆತ್ ನೋಟ್‌ನಲ್ಲಿ ಇನ್ನಷ್ಟು ಮಾಹಿತಿಗಳನ್ನು ಉಲ್ಲೇಖಿಸಿದ್ದಾನೆ. ತಾನು ಉಲ್ಲೇಖಿಸಿದ ಸಂಘಟನೆ ದೇವಾಲಯ ಲೂಟಿ, ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಕೆ, ರಾಜ್ಯಾದ್ಯಂತ ಪ್ರತಿಷ್ಟಿತ ಕಾಲೇಜುಗಳಲ್ಲಿ ಮಾಧಕ ವಸ್ತು ಪೂರೈಕೆ ಮಾಡುತ್ತಾರೆಂದು ಬರೆದಿದ್ದು ಓರ್ವನ ಹೆಸರನ್ನು ಉಲ್ಲೇಖಿಸಿದ್ದಾನೆ.

ಮನೆಯವರ ರೋಧನೆ…
ಕುಂದಾಪುರ ಶವಾಗಾರದಿಂದ ಮಧ್ಯಾಹ್ನದ ಸುಮಾರಿಗೆ ಮೃತದೇಹವನ್ನು ನಿವಾಸಕ್ಕೆ ತರಲಾಗಿದ್ದು ಈ ವೇಳೆ ಮನೆಯವರು, ನೆರೆಯವರು, ಸ್ನೇಹಿತರ ರೋಧನ ಮುಗಿಲು ಮುಟ್ಟಿತ್ತು. ಅಂತಿಮ ದರ್ಶನ ಪಡೆದ ಬಳಿಕ ಕೋಟೇಶ್ವರ ಹಿಂದೂ ರುಧ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಪೊಲೀಸರಿಂದ ಮುಂದುವರಿದ ತನಿಖೆ…
ಆತ್ಮಹತ್ಯೆಗೂ ಮೊದಲು ವಿವೇಕ್ ಬರೆದಿಟ್ಟ ಡೆತ್ ನೋಟ್ ಅನ್ನು ಕುಂದಾಪುರ ಪೊಲಿಸರು ವಶಕ್ಕೆ ಪಡೆದಿದ್ದು ಅದರ ಸತ್ಯಾಸತ್ಯತೆ ಬಗ್ಗೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ನಿಜವಾಗಿಯೂ ಅಂತಹ ಸಂಘಟನೆ ಇತ್ತಾ? ಆ ಸಂಘಟನೆ ಜೊತೆ ಈತ ಸಂಪರ್ಕದಲ್ಲಿಟ್ಟುಕೊಂಡಿದ್ದು ನಿಜಾನಾ? ಎಂಬ ಅಂಶದ ಬಗ್ಗೆಯೂ ವ್ಯಾಪಕ ತನಿಕೆ ನಡೆಯುತ್ತಿದೆ.

ತನಿಖೆಯಾಗಲಿ…
ಉತ್ತಮ ಗುಣನಡತೆ ಹೊಂದಿದ್ದ ವಿವೇಕ್ ನಿಗೂಢವಾಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಮೊದಲು ಮನೆ ಬಳಿ ಒಂದು ಬೈಕ್‌ನಲ್ಲಿ ಅಪರಿಚಿತ ವ್ಯಕ್ತಿ ಸುಳಿದಾಡಿ ಹೋಗಿದ್ದು ಆ ನಂತರ ವಿವೇಕ್ ಬೆದರಿದಂತಿದ್ದ ಎಂಬ ಮಾಹಿತಿಯಿದೆ. ಅಲ್ಲದೇ ಆತ ಬರೆದಿಟ್ಟ ಡೆತ್ ನೋಟ್‌ನಲ್ಲಿಯೂ ಕೆಲವು ಅಂಶಗಳನ್ನು ಉಲ್ಲೇಖಿಸಿದ್ದು ಕಾಣದ ಕೈಗಳ ಕೆಲಸವಿರಬಹುದೆಂಬ ಅನುಮಾನ ವ್ಯಕ್ತವಾಗುತ್ತಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಯುವಕನ ಕುಟುಂಬಕ್ಕೆ ಪರಿಹಾರ ನೀಡುವ ಕೆಲಸವಾಗಬೇಕೆಂದು ಹಿಂದೂಪರ ಸಂಘಟನೆ ಮುಖಂಡರಾದ ಸುರೇಂದ್ರ ಮಾರ್ಕೋಡು ಮತ್ತು ಅಶೋಕ್ ಕಾಗೇರಿ ಆಗ್ರಹಿಸಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.