ಕರಾವಳಿ

ಆಹಾರ ಪದ್ಧತಿಯ ಬದಲಾವಣೆಯಿಂದ ಹೊಳೆಯುವ ಆರೋಗ್ಯಯುತ ಚರ್ಮ

Pinterest LinkedIn Tumblr

ಹೊಳೆಯುವ ಆರೋಗ್ಯಯುತ ಚರ್ಮಬೇಕೆಂದು ಬಹುತೇಕ ಎಲ್ಲರೂ ಅಪೇಕ್ಷಿಸುತ್ತಾರೆ. ತಮ್ಮ ಚರ್ಮದ ಹೊಳಪನ್ನು ಹೆಚ್ಚಿಸಲು ಜನರು ಹಲವಾರು ವಿಧಾನಗಳನ್ನು ಅನುಸರಿಸುತ್ತಾರೆ. ಸೌಂದರ್ಯವರ್ಧಕಗಳನ್ನು ಬಳಸಿ ಚರ್ಮವನ್ನು ಹೊಳೆಯುವಂತೆ ಮಾಡುವುದರ ಬದಲು ನಮ್ಮ ಆಹಾರ ಪದ್ಧತಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ನೈಸರ್ಗಿಕವಾಗಿ ಹೊಳೆಯುವ ಚರ್ಮ ಪಡೆಯಬಹುದು.

ನಮ್ಮ ಚರ್ಮದ ಆರೋಗ್ಯವನ್ನು ಕಾಪಾಡಲು ನಾವು ತಿನ್ನಬೇಕಾಗುವ 10 ಪ್ರಮುಖ ಆಹಾರಗಳ ಪಟ್ಟಿ ಇಲ್ಲಿದೆ. ಈ ಆಹಾರಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಚರ್ಮ ಕಾಂತಿಯುಕ್ತವಾಗುತ್ತದೆ.

ಕಿತ್ತಳೆ: ಕಿತ್ತಳೆ ಹಣ್ಣಿನಲ್ಲಿ ವಿಟಮಿನ್​ ಸಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಕಿತ್ತಳೆ ಹಣ್ಣಿನಲ್ಲಿರುವ ಪೋಷಕಾಂಶಗಳು ಕೊಲಾಜನ್​ ಎಂಬ ಪ್ರೋಟೀನ್​ನ ಉತ್ಪಾದನೆಯನ್ನು ಹೆಚ್ಚಿಸುತ್ತಿದೆ. ಜತೆಗೆ ಇದು ಚರ್ಮದಲ್ಲಿರುವ ಜೀವಕೋಶಗಳಿಗಾಗಿರುವ ಹಾನಿಯನ್ನು ರಿಪೇರಿ ಮಾಡುತ್ತದೆ ಮತ್ತು ಚರ್ಮ ಕಪ್ಪಾಗುವುದನ್ನು ತಡೆಯುತ್ತದೆ.

ಟೊಮೋಟೋ: ಟೊಮೋಟೋದಲ್ಲಿ ಆ್ಯಂಟಿ ಆಕ್ಸಿಡೆಂಟ್​ಗಳು ಹೆಚ್ಚಿನ ಪ್ರಮಾಣದಲ್ಲಿದ್ದು, ಚರ್ಮದ ವಯಸ್ಸನ್ನು ಹೆಚ್ಚಿಸುವ ಫ್ರೀರ‍್ಯಾಡಿಕಲ್ಸ್​ಗಳನ್ನು ನಿಯಂತ್ರಿಸುತ್ತದೆ. ಬೀಟ್​ರೂಟ್​, ಪಪ್ಪಾಯ ಮತ್ತು ದ್ರಾಕ್ಷಿಯಲ್ಲಿ ಆ್ಯಂಟಿ ಆಕ್ಸಿಡೆಂಟ್​ಗಳು ಹೆಚ್ಚಿನ ಪ್ರಮಾಣದಲ್ಲಿದ್ದು, ಇವುಗಳ ಸೇವನೆಯಿಂದ ಚರ್ಮ ಕಾಂತಿಯುಕ್ತವಾಗುತ್ತದೆ.

ಬೆಳ್ಳುಳ್ಳಿ: ಬೆಳ್ಳುಳ್ಳಿಯಲ್ಲಿ ಅಲಿಸಿನ್​ ಎಂಬ ರಾಸಾಯನಿಕ ಹೆಚ್ಚಾಗಿದ್ದು, ಈ ರಾಸಾಯನಿಕ ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ವೈರಸ್​ಗಳನ್ನು ಕೊಲ್ಲುತ್ತದೆ ಮತ್ತೊ ಮೊಡವೆಗಳನ್ನು ಕಡಿಮೆ ಮಾಡುತ್ತದೆ.

ನಟ್ಸ್​: ನಟ್ಸ್​ಗಳಲ್ಲಿ ಜಿಂಕ್​ ಮತ್ತು ಸೆಲೆನಿಯಮ್​ ಎಂಬ ಖನಿಜಾಂಶಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ, ಇವುಗಳು ಚರ್ಮದ ಆರೋಗ್ಯವನ್ನು ಕಾಪಾಡುತ್ತವೆ ಮತ್ತು ಮೊಡವೆಯನ್ನು ಕಡಿಮೆ ಮಾಡುತ್ತವೆ.

ಮೊಸರು: ಮೊಸರಿನಲ್ಲಿ ಉಪಕಾರಿ ಬ್ಯಾಕ್ಟೀರಿಯಾಗಳು ಮತ್ತು ಲ್ಯಾಕ್ಟಿಕ್​ ಆಸಿಡ್​ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ಚರ್ಮದಲ್ಲಿರುವ ಸತ್ತ ಜೀವಕೋಶಗಳನ್ನು ತೆಗೆಯುತ್ತದೆ ಮತ್ತು ಚರ್ಮ ಸುಕ್ಕುಗಟ್ಟುವುದನ್ನು ತಡೆಯುತ್ತದೆ.

ಮೀನು: ಸಾಲ್ಮನ್ ಮತ್ತು ಸಾರ್ಡೀನ್ ಮೀನುಗಳಲ್ಲಿ ಒಮೇಗಾ 3 ಫ್ಯಾಟಿ ಆಸಿಡ್​ ಪ್ರಮಾಣ ಹೆಚ್ಚಾಗಿದ್ದು, ಮೊಡವೆಯನ್ನು ಕಡಿಮೆ ಮಾಡುತ್ತದೆ.

ಬ್ರೋಕೋಲಿ: ಬ್ರೋಕೋಲಿಯಲ್ಲಿ ಆ್ಯಂಟಿ ಆಕ್ಸಿಡೆಂಟ್​ಗಳು, ವಿಟಮಿನ್​ ಸಿ ಮತ್ತು ಇ ಹೆಚ್ಚಿನ ಪ್ರಮಾಣದಲ್ಲಿದ್ದು, ದೇಹದಲ್ಲಿ ಕೊಲಾಜಿನ್​ ಉತ್ಪತ್ತಿಯನ್ನು ಹೆಚ್ಚಿಸುತ್ತದೆ. ಕೊಲಾಜನ್​ ಚರ್ಮದ ಆರೋಗ್ಯವನ್ನು ಕಾಪಾಡಲು ನೆರವಾಗುತ್ತದೆ. ವಿಟಮಿನ್​-ಇ ಚರ್ಮದ ಜೀವಕೋಶಗಳು ಯುವಿ ಕಿರಣಗಳಿಂದ ಹಾನಿಗೊಳಗಾಗುವುದನ್ನು ತಪ್ಪಿಸುತ್ತದೆ.

ಬೆರಿಹಣ್ಣುಗಳು (ಬ್ಲೂಬೆರಿ): ಬ್ಲೂಬೆರಿಯಲ್ಲಿ ಫ್ಲೋವೊನೈಡ್ಸ್ ಅಥವಾ ಫೈಟೊಕೆಮಿಕಲ್ಸ್ ಎಂಬ ಆ್ಯಂಟಿ ಆಕ್ಸಿಡೆಂಟ್​ಗಳಿದ್ದು, ಇವು ಚರ್ಮಕ್ಕೆ ಹಾನಿಯಾಗದಂತೆ ತಡೆಯುತ್ತವೆ.

ಕ್ಯಾರೆಟ್​: ಕ್ಯಾರೆಟ್​ನಲ್ಲಿ ವಿಟಮಿನ್​ ಎ ಹೆಚ್ಚಿನ ಪ್ರಮಾಣದಲ್ಲಿದ್ದು ಇದು ಚರ್ಮದ ಜೀವಕೋಶಗಳಿಗಾಗಿರುವ ಹಾನಿಯನ್ನು ಸರಿಪಡಿಸುತ್ತದೆ. ಜತೆಗೆ ಫ್ರೀರ‍್ಯಾಡಿಕಲ್ಸ್​ಗಳಿಂದ ಚರ್ಮಕ್ಕೆ ಹಾನಿಯಾಗುವುದನ್ನು ತಡೆಯುತ್ತದೆ.

ಕೇಲ್​: ಕೇಲ್​ ಎಂಬ ಹಸಿರು ಸೊಪ್ಪಿನಲ್ಲಿ ಆ್ಯಂಟಿ ಆಕ್ಸಿಡೆಂಟ್​ಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ, ಜತೆಗೆ ಬೀಟಾ ಕ್ಯಾರೊಟೀನ್​ ಮತ್ತು ವಿಟಮಿನ್​ ಸಿ, ಫ್ಲೋವೊನೈಡ್ಸ್ ಮತ್ತು ಪಾಲಿಫಿನಾಲ್ಗಳು ಚರ್ಮದ ಆರೋಗ್ಯವನ್ನು ಕಾಪಾಡಲು ನೆರವಾಗುತ್ತವೆ.

Comments are closed.