ಕರಾವಳಿ

ಕಾಲೇಜು ಬಳಿ ಗಾಂಜಾ ಮಾರಾಟಕ್ಕೆ ಯತ್ನ : 1 ಕೆಜಿಗೂ ಹೆಚ್ಚು ಗಾಂಜಾ ಸಹಿತಾ ಇಬ್ಬರ ಸೆರೆ

Pinterest LinkedIn Tumblr

ಮಂಗಳೂರು, ಅಕ್ಟೋಬರ್.13: ನಗರದ ಹೊರವಲಯದ ಕಾಲೇಜೊಂದರ ಬಳಿ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿ, ಒಂದು ಕೆಜಿಗೂ ಹೆಚ್ಚು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ನಗರದ ಹೊರವಲಯದ ನೀರುಮಾರ್ಗ ನಿವಾಸಿ ಇಮ್ರಾನ್ (24) ಹಾಗೂ ಫರಂಗಿ ಪೇಟೆ ಸಮೀಪದ ಅರ್ಕುಳ ಗ್ರಾಮದ ವಳಚ್ಚಿಲ್‌ಪದವು ನಿವಾಸಿ ಇಮ್ತಿಯಾಝ್ ಅಹ್ಮದ್ (33) ಎಂದು ಗುರುತಿಸಲಾಗಿದೆ.

ಮಂಗಳೂರು ತಾಲೂಕಿನ ಅರ್ಕುಳ ಗ್ರಾಮದ ವಳಚ್ಚಿಲ್‌ಪದವು ಕಾಲೇಜೊಂದರ ಬಳಿ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸ್ ಉಪನಿರೀಕ್ಷಕ ವೆಂಕಟೇಶ್ ಅವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಗಾಂಜಾ ಸಹಿತಾ ಬಂಧಿಸಲಾಗಿದೆ.

ಆರೋಪಿಗಳ ವಶದಲ್ಲಿದ್ದ ಸುಮಾರು 1 ಕೆ.ಜಿ., 350 ಗ್ರಾಂ ಗಾಂಜಾ, ಒಂದು ಎಫ್‌ಝೆಡ್ ಬೈಕ್, ಎರಡು ಮೊಬೈಲ್ ಫೋನ್, ನಗದು 15,396 ರೂ.ನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಅಪರಾಧ ಪತ್ತೆ ವಿಭಾಗದ ಪೊಲೀಸ್ ಉಪಾಯುಕ್ತರ ಆದೇಶದ ಮೇರೆಗೆ ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ರಾಮರಾವ್ ಮಾರ್ಗದರ್ಶನದಲ್ಲಿ, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಸಿದ್ದಗೌಡ ಎಚ್. ಭಜಂತ್ರಿ, ಪೊಲೀಸ್ ಉಪನಿರೀಕ್ಷಕ ವೆಂಕಟೇಶ್ ಐ., ದಕ್ಷಿಣ ಉಪವಿಭಾಗದ ರೌಡಿ ನಿಗ್ರಹದಳದ ಸಿಬ್ಬಂದಿ ಮತ್ತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Comments are closed.